ಬುಧವಾರ, ಅಕ್ಟೋಬರ್ 16, 2019
21 °C

ಯಡಿಯೂರಪ್ಪ ಕಡೆಗಣಿಸುವ ಕೇಂದ್ರ ವರಿಷ್ಠರು: ಕಾಂಗ್ರೆಸ್ ಟೀಕೆ

Published:
Updated:
Prajavani

ಶಿವಮೊಗ್ಗ: ಬಿ.ಎಸ್.ಯಡಿಯೂರಪ್ಪ ಅವರನ್ನು ಕೇಂದ್ರದ ಬಿಜೆಪಿ ನಾಯಕರು ಕಡೆಗಣಿಸುತ್ತಿದ್ದಾರೆ. ಸೂಕ್ತ ನೆರೆ ಪರಿಹಾರ ತರಲೂ ಸಾಧ್ಯವಾಗದ ಅವರು ದುರ್ಬಲ ಮುಖ್ಯಮಂತ್ರಿ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಕುಟುಕಿದರು.

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದ್ದರೂ ರಾಜ್ಯಕ್ಕೆ ಅಗತ್ಯ ಪರಿಹಾರ ನೀಡುತ್ತಿಲ್ಲ. ಕೇಂದ್ರದ ನಾಯಕರು ಮುಖ್ಯಮಂತ್ರಿ ಭೇಟಿಗೂ ಅವಕಾಶ ನೀಡುತ್ತಿಲ್ಲ. ರಾಜ್ಯದ ಜನರು ನೆರೆಗೆ ಸಿಲುಕಿ ಎರಡು ತಿಂಗಳಾದರೂ ಪರಿಹಾರ ನೀಡಲಿಲ್ಲ. ಈಗ ಭಿಕ್ಷೆ ನೀಡಿದಂತೆ ₨ 1,200 ಕೋಟಿ ಕೊಟ್ಟಿದ್ದಾರೆ. ಇಷ್ಟು ಹಣ ನೀಡಲು 60 ದಿನಗಳು ಕಾಯಿಸಬೇಕಿತ್ತಾ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ 2.5 ಲಕ್ಷ ಮನೆಗಳು ನಾಶವಾಗಿವೆ. 1.60 ಲಕ್ಷ ಮನೆಗಳು ಭಾಗಶಃ ಕುಸಿದಿವೆ. 6,600 ಶಾಲೆಗಳಿಗೆ ಧಕ್ಕೆಯಾಗಿದೆ. 3,600 ಅಂಗನವಾಡಿ ಕಟ್ಟಡಗಳು ಹಾಳಾಗಿವೆ. ಉತ್ತರ ಕರ್ನಾಟಕದ ಜನರು ಸಂಕಟದಲ್ಲಿದ್ದಾರೆ. ಇತ್ತ ರಾಜ್ಯ ಕೇವಲ ₨ 800 ಕೋಟಿ ನೀಡಿದೆ. ಅಸಹಾಯಕರಾದ ಮುಖ್ಯಮಂತ್ರಿ ಖಜಾನೆ ಖಾಲಿಯಾಗಿದೆ ಎಂದು ಹೇಳಿ ಕೈಚೆಲ್ಲಿದ್ದಾರೆ ಎಂದು ದೂರಿದರು.

ಮೋದಿ ದೇವರು ಎನ್ನುವ ಪ್ರತಾಪಸಿಂಹ, ಹಣವೇ ಬೇಡ ಎನ್ನುವ ತೇಜಸ್ವಿ ಸೂರ್ಯ ನಮ್ಮ ಸಂಸದರು. ಬೇಕಾಬಿಟ್ಟಿ ಹೇಳಿಕೆ ನೀಡುವ ಲಕ್ಷ್ಮಣ ಸವದಿ, ಅಶ್ವಥ್ ನಾರಾಯಣರಂತಹ ಉಪ ಮುಖ್ಯಮಂತ್ರಿಗಳು, ಮೋದಿ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರೆ ಅಮೇರಿಕದಲ್ಲಿ ಮಾತನಾಡಿಲ್ಲವೇ ಎಂದು ಪ್ರತಿಕ್ರಿಯಿಸುವ ಸಚಿವ ಜಗದೀಶ್ ಶೆಟ್ಟರ್, ಬೊಗಳೆ ಬಿಡುವ ಸಿ.ಟಿ.ರವಿ ಇವರೆಲ್ಲ ನಮ್ಮ ಜನಪ್ರತಿನಿಧಿಗಳು. ನಕಲಿ ದೇಶಪ್ರೇಮದ ಸುದ್ದಿಗಳಲ್ಲಿ ಮುಳುಗಿಹೋಗಿರುವ, ಎಲ್ಲದಕ್ಕೂ ಪಾಕಿಸ್ತಾನ ಮಧ್ಯೆ ಎಳೆದುತರುವ ಇಂಥವರಿಂದ ದೇಶದ ಅಭಿವೃದ್ಧಿ ಸಾಧ್ಯವೇ? ಸಂಕಷ್ಟದಲ್ಲಿರುವ ಜನರು ವಾಸ್ತವ ಅರ್ಥ ಮಾಡಿಕೊಳ್ಳಬೇಕು ಎಂದರು.

ವಿದೇಶ ಸುತ್ತುವ ಮೋದಿಗೆ ದೇಶದ ಆರ್ಥಿಕ ಸ್ಥಿತಿಯ ಅರಿವಿಲ್ಲ. ಭಾರತದಲ್ಲಿ 11ಕೋಟಿ ಶೌಚಾಲಯ ಕಟ್ಟಿದ್ದೇನೆ ಎಂದು ಸುಳ್ಳು ಹೇಳುತ್ತಾರೆ. ಅವರ ನಡೆ ಖಂಡಿಸಿದವರ ವಿರುದ್ಧ ಪ್ರಕರಣ ದಾಖಲಿಸುತ್ತಾರೆ. 49 ಪ್ರಗತಿಪರರ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ. ಇದು ಪ್ರಜಾಪ್ರಭುತ್ವ ರಾಷ್ಟ್ರ ಎಂಬ ಅರಿವು ಇಲ್ಲ. ಬಿಜೆಪಿ ನಾಯಕರ ನಡೆಯ ವಿರುದ್ಧ ಕಾಂಗ್ರೆಸ್ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್,ಮುಖಂಡರಾದ ಪಂಡಿತ್ ವಿ.ವಿಶ್ವನಾಥ್, ರಾಮೇಗೌಡ, ಚಂದ್ರಭೂಪಾಲ್, ನಾಗರಾಜ್ ಇದ್ದರು.

Post Comments (+)