ಕಂಡಕ್ಟರ್‌ ಮೇಲೆ ಕಾನ್‌ಸ್ಟೆಬಲ್ ಹಲ್ಲೆ..!

7

ಕಂಡಕ್ಟರ್‌ ಮೇಲೆ ಕಾನ್‌ಸ್ಟೆಬಲ್ ಹಲ್ಲೆ..!

Published:
Updated:

ವಿಜಯಪುರ: ಬಸ್‌ನಲ್ಲಿ ಪ್ರಯಾಣಿಸಲು ಟಿಕೆಟ್‌ ಪಡೆಯಿರಿ ಎಂದು ಸೂಚಿಸಿದ ಕಂಡಕ್ಟರ್‌ಗೆ, ಪೊಲೀಸ್‌ ಕಾನ್‌ಸ್ಟೆಬಲ್‌ ಗುರುವಾರ ರಾತ್ರಿ ಥಳಿಸಿದ ವಿಡಿಯೋ ವೈರಲ್‌ ಆಗಿದೆ.

ಬಳ್ಳಾರಿ–ವಿಜಯಪುರ–ಇಂಡಿ ಬಸ್‌ ಕಂಡಕ್ಟರ್‌ ಸತ್ಯನಾರಾಯಣ ಹಲ್ಲೆಗೊಳಗಾದವರು. ಸಹೋದ್ಯೋಗಿ ನೆರವಿಗೆ ಬಂದ ಚಾಲಕ ಮಹಾದೇವನಿಗೂ ಇಂಡಿ ಗ್ರಾಮೀಣ ಪೊಲೀಸ್‌ ಠಾಣೆಯ ಕಾನ್‌ಸ್ಟೆಬಲ್‌ ವಿಶ್ವನಾಥ ಭಜಂತ್ರಿ ಇಂಡಿ ಪಟ್ಟಣದ ಹೊರ ವಲಯದ ಡಾಬಾವೊಂದರ ಬಳಿ ಥಳಿಸಿದ್ದನ್ನು ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್‌ನಲ್ಲಿ ವಿಡಿಯೊ ರೆಕಾರ್ಡಿಂಗ್‌ ಮಾಡಿಕೊಂಡಿದ್ದು; ಅದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಕಾನ್‌ಸ್ಟೆಬಲ್‌ ಕೃತ್ಯಕ್ಕೆ ತೀವ್ರ ಆಕ್ಷೇಪವೂ ವ್ಯಕ್ತವಾಗಿದೆ.

ಇಂಡಿ ಗ್ರಾಮೀಣ ಪೊಲೀಸ್‌ ಠಾಣೆಯ ಕಾನ್‌ಸ್ಟೆಬಲ್‌ ವಿಶ್ವನಾಥ ಭಜಂತ್ರಿ ಎಂಬಾತ ಗುರುವಾರ ರಾತ್ರಿ ತನ್ನ ಪತ್ನಿ ಜತೆ ಪಯಣಿಸಲು ಈಶಾನ್ಯ ಸಾರಿಗೆ ಸಂಸ್ಥೆಯ ಬಸ್‌ ಹತ್ತಿದ್ದಾರೆ. ಈ ಸಂದರ್ಭ ಕಂಡಕ್ಟರ್‌ ಟಿಕೆಟ್‌ ತೆಗೆದುಕೊಳ್ಳುವಂತೆ ಸೂಚಿಸಿದಾಗ ತನ್ನ ಬಳಿಯಿದ್ದ ಬಸ್‌ ಪಯಣಕ್ಕೆ ಇಲಾಖೆ ನೀಡಿರುವ ಅನುಮತಿ ಪತ್ರ ತೋರಿಸಿದ್ದಾರೆ. ನಿಮ್ಮ ಪತ್ನಿಗೆ ಟಿಕೆಟ್‌ ತೆಗೆದುಕೊಳ್ಳಿ ಎಂದು ಕಂಡಕ್ಟರ್‌ ಹೇಳಿದ್ದಾರೆ. ಇದನ್ನೇ ಪರಿಗಣಿಸಬೇಕು ಎಂದು ಕಾನ್‌ಸ್ಟೆಬಲ್‌ ಆಗ್ರಹಿಸಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಮಾತಿನ ಚಕಮಕಿ ನಡೆದಿದೆ. ತಾಳ್ಮೆ ಕಳೆದುಕೊಂಡ ಕಾನ್‌ಸ್ಟೆಬಲ್‌ ಏಕಾಏಕಿ ಕಂಡಕ್ಟರ್‌ ಮೇಲೆ ಹಲ್ಲೆ ನಡೆಸಿದ್ದಾರೆ. ಸಹ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದರೂ; ಯಾರೊಬ್ಬರ ಮಾತಿಗೂ ಕಿವಿಗೊಡದೆ, ತನ್ನ ದರ್ಪವನ್ನು ಕಾನ್‌ಸ್ಟೆಬಲ್‌ ತೋರಿಸಿದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಹಲ್ಲೆ ನಡೆದ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ. ಕಂಡಕ್ಟರ್‌, ಕಾನ್‌ಸ್ಟೆಬಲ್‌ ನಡುವೆ ಗುರುವಾರ ರಾತ್ರಿ ಮಾತಿನ ಚಕಮಕಿ ನಡೆದಿದೆ. ಇದಕ್ಕೆ ಸಂಬಂಧಿಸಿದಂತೆ ಕಂಡಕ್ಟರ್ ದೂರು ದಾಖಲಿಸಿಲ್ಲ’ ಎಂದು ವಿಜಯಪುರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರಕಾಶ್‌ ಅಮೃತ್‌ ನಿಕ್ಕಂ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !