ಭಾನುವಾರ, ಸೆಪ್ಟೆಂಬರ್ 22, 2019
25 °C
ಜಲಾಶಯಕ್ಕೆ ಹೆಚ್ಚಿದ ಒಳಹರಿವು

ಮುಂದುವರಿದ ಮಳೆ: ತುಂಬಿದ ಜಲಪಾತ

Published:
Updated:
Prajavani

ಹೊಸನಗರ: ನಾಲ್ಕೈದು ದಿನಗಳಿಂದ ತುಸು ವಿರಾಮ ನೀಡಿದ್ದ ಮಳೆ ಶನಿವಾರ, ಭಾನುವಾರವೂ ಮುಂದುವರಿದಿದೆ. ಇದರಿಂದ ಹಬ್ಬದ ಸಡಗರಕ್ಕೆ ಅಡ್ಡಿಯಾಗಿದೆ.

ತಾಲ್ಲೂಕಿನ ನಗರ ಹೋಬಳಿಯ ಘಟ್ಟ ಪ್ರದೇಶ ಜಲನಯನ ಪ್ರದೇಶಗಳಲ್ಲಿ ಮಳೆ ಜೋರಾಗಿದ್ದು, ಎಡೆಬಿಡದೆ ಸುರಿಯುತ್ತಿದೆ. ಶೀತಗಾಳಿಯೂ ಜತೆಯಾಗಿದ್ದು, ಇಲ್ಲಿನ ಹುಲಿಕಲ್ ಮತ್ತು ನಾಗೋಡಿ ಘಾಟ್ ರಸ್ತೆಗಳಲ್ಲಿ ವಾಹನ ಸಂಚಾರ ಕಷ್ಟಸಾಧ್ಯವಾಗಿದೆ.

ಹುಂಚಾ, ಕಸಬಾ ಹೋಬಳಿಯಲ್ಲೂ ಮಳೆ ಹೆಚ್ಚು ಸುರಿಯುತ್ತಿದೆ. ಕೆರೆಹಳ್ಳಿ ಹೋಬಳಿಯಲ್ಲಿ ಸಾಧಾರಣ ಮಳೆ ಇದೆ.

ಮಳೆ ವಿವರ: ತಾಲ್ಲೂಕಿನ ನಗರ ಹೋಬಳಿ ವ್ಯಾಪ್ತಿಯ ಮಾಣಿಯಲ್ಲಿ 55 ಮಿ.ಮೀ, ಯಡೂರು 42 ಮಿ.ಮೀ, ಹುಲಿಕಲ್ 117 ಮಿ.ಮೀ, ಮಾಸ್ತಿಕಟ್ಟೆ 105 ಮಿ.ಮೀ, ಚಕ್ರಾ 65 ಮಿ.ಮೀ, ಸಾವೇಹಕ್ಕಲು 80 ಮಿ.ಮೀ ಮಳೆಯಾಗಿದೆ.

ಹೆಚ್ಚಿನ ನೀರು: ತಾಲ್ಲೂಕಿನ ಮಾಣಿ ಜಲಾಶಯಕ್ಕೆ ಹೆಚ್ಚಿನ ನೀರು ಹರಿದುಬರುತ್ತಿದೆ. ಜಲಾಶಯದ ಸುತ್ತ ಉತ್ತಮ ಮಳೆ ಆಗುತ್ತಿರುವುದರಿಂದ ಡ್ಯಾಂನ ಒಳಹರಿವು ಹೆಚ್ಚಿದೆ. ಗರಿಷ್ಠ 594.36 ಮೀಟರ್ ಸಾಮರ್ಥ್ಯದ ಮಾಣಿ ಜಲಾಶಯ 587.58 ಮೀಟರ್ ತಲುಪಿದೆ. ಕಳೆದ ವರ್ಷ 594.08 ಮೀಟರ್ ತಲುಪಿತ್ತು. 2370 ಕ್ಯುಸೆಕ್ ಒಳಹರಿವು ಇದೆ.

563.88 ಗರಿಷ್ಠ ಸಾಮರ್ಥ್ಯದ ಮಾಣಿ ಪಿಕ್ಅಪ್ ಜಲಾಶಯದಲ್ಲಿ 562.36 ಮೀ. ನೀರು ಸಂಗ್ರಹವಾಗಿದೆ. ಚಕ್ರಾ ಜಲಾಶಯದಲ್ಲಿ 575.44 ಮೀ, ಸಾವೇಹಕ್ಕಲು ಜಲಾಶಯದಲ್ಲಿ 578.64 ಮೀ ನೀರು ಸಂಗ್ರಹವಾಗಿದೆ.

ಪ್ರಮುಖ ಜಲಪಾತಗಳಾದ ಹಿಂಡ್ಲುಮನೆ, ಅಬ್ಬಿ, ಹುಲಿಕಲ್- ಬಾಳೆಬರೆ ಜಲಪಾತಗಳು ಧುಮ್ಮಿಕ್ಕುತ್ತಿವೆ.
ಮಳೆಯಿಂದಾಗಿ ಶಾಲೆಗಳಲ್ಲಿನ ವಿದ್ಯಾಗಣಪತಿ ಮತ್ತು ಸಾರ್ವಜನಿಕ ಗಣೇಶೋತ್ಸವಗಳ ಆಚರಣೆಯಲ್ಲಿ ಸಂಭ್ರಮ ಇಳಿದಿದೆ.

Post Comments (+)