ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ: ಮನೆ, ಅಂಗಡಿಗಳಿಗೆ ಔಷಧ ಸಿಂಪಡಣೆ

ವಿವಿಧೆಡೆಯಿಂದ ಬಂದವರ ಪತ್ತೆಗೆ ಕ್ರಮ; ಸ್ಟಾಫ್‌ ನರ್ಸ್‌, ಆಶಾ, ಅಂಗನವಾಡಿ ಕಾರ್ಯಕರ್ತೆಯರಿಂದ ಭೇಟಿ
Last Updated 30 ಮಾರ್ಚ್ 2020, 9:21 IST
ಅಕ್ಷರ ಗಾತ್ರ

ಶಿವಮೊಗ್ಗ: ಬೆಂಗಳೂರು ಸೇರಿ ಹಲವು ಜಿಲ್ಲೆಗಳಿಂದ ಶಿವಮೊಗ್ಗಕ್ಕೆ ಬಂದಿರುವವರ ಪತ್ತೆಗೆ ಸ್ಟಾಫ್‌ ನರ್ಸ್‌, ಆಶಾ ಕಾರ್ಯಕರ್ತರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಭಾನುವಾರ ನಗರದ ಪ್ರತಿ ಮನೆಗೂ ಭೇಟಿ ನೀಡಿದರು.

ಬಿಸಿಲಿನಲ್ಲಿಯೇ ಪ್ರತಿಯೊಂದು ಮನೆಗೂ ಭೇಟಿ ನೀಡಿ ‘ಕೊರೊನಾ ಸೋಂಕು ಹರಡುವುದನ್ನು ತಡೆಯಲು ಈ ಮಾಹಿತಿ ಕಲೆಹಾಕುತ್ತಿದ್ದೇವೆ. ನಿಮ್ಮ ಮನೆಯಲ್ಲಿ ಯಾರಾದರೂ ಬೆಂಗಳೂರಿನಿಂದ ಅಥವಾ ಬೇರೆಡೆಯಿಂದ ಬಂದಿದ್ದರೆ ಮಾಹಿತಿ ನೀಡಿ’ ಎಂದು ಮೊಬೈಲ್‌ ನಂಬರ್‌ ಕೇಳಿ ಪಡೆದರು. ಬೇರೆಡೆಯಿಂದ ಬಂದಿದ್ದರೆ 14 ದಿನ ಮನೆಯಿಂದ ಹೊರಗೆ ಬರದಂತೆ ಎಚ್ಚರಿಕೆ ನೀಡಿದರು.

ಇನ್ನೂ ಕೊರೊನಾ ಸೋಂಕು ಹರಡದಂತೆ ತಡೆಯಲು ಅಗ್ನಿಶಾಮಕ ಸಿಬ್ಬಂದಿ ಹಾಗೂ ಮಹಾನಗರ ಪಾಲಿಕೆ ಸಿಬ್ಬಂದಿ ಭಾನುವಾರ ನಗರದಲ್ಲಿ ಔಷಧ ಸಿಂಪಡಿಸಿದರು.

ಲಾಕ್‌ಡೌನ್‌ ಇದ್ದರೂ ಜನರುಗುಂಪು ಸೇರುವುದು, ಓಡಾಡು ವುದು ಮಾಡುತ್ತಿದ್ದಾರೆ. ಹಾಗಾಗಿ ನಗರದ ಪ್ರಮುಖ ರಸ್ತೆಗಳು, ವೃತ್ತಗಳು, ಬಸ್‌ನಿಲ್ದಾಣ, ಅಂಗಡಿಗಳ ಬಳಿ ಹಾಗೂ ಎಲ್ಲಾ ವಾರ್ಡ್‌ಗಳಲ್ಲಿಯೂ ಔಷಧ ಸಿಂಪಡಿಸಲಾಯಿತು.

ಸೋಡಿಯಂ ಹೈಪೊಕ್ಲೋರೈಡ್, ಫಿನಾಯಿಲ್‌ ಮತ್ತು ಬ್ಲೀಚಿಂಗ್‌ ಅನ್ನು ಮಿಶ್ರಣ ಮಾಡಿ ಅಗ್ನಿಶಾಮಕ ದಳದ ವಾಹನದಿಂದ ಸಿಂಪಡಣೆ ಮಾಡಲಾಯಿತು. ಪಾಲಿಕೆ ಸಿಬ್ಬಂದಿ ಸಹ ಬಡಾವಣೆಗಳಲ್ಲಿ, ಅಂಗಡಿಗಳ ಮುಂದೆ ಔಷಧ ಸಿಂಪಡಣೆ ಮಾಡಿದರು.

ಕೆಲವು ಔಷಧ ಅಂಗಡಿಗಳು ತೆರೆದಿ ದ್ದವು. ಜನರು ಅಂತರ ಕಾಯ್ದುಕೊಂಡು ಔಷಧ ತೆಗೆದುಕೊಂಡರು. ಪೆಟ್ರೋಲ್ ಬಂಕ್‌ಗಳಲ್ಲಿ ಮುಖಕ್ಕೆ ಮಾಸ್ಕ್‌ ಹಾಕಿದ ವರಿಗೆ ಮಾತ್ರ ಪೆಟ್ರೋಲ್ ಹಾಕಲಾಯಿತು. ರಸ್ತೆಗಳು ಬಿಕೋ ಎನ್ನುತ್ತಿದ್ದವು. ಪೊಲೀಸರು ಅಲ್ಲಲ್ಲಿ ಓಡಾಡುತ್ತಿದ್ದ ಜನರನ್ನು ಬೆದರಿಸಿ ಮನೆಗೆ ಕಳುಹಿಸಿದರು.

ದೇವಸ್ಥಾನ, ಚರ್ಚ್, ಮಸೀದಿಗಳಲ್ಲಿ ಜನ ಸೇರುವ ಹಾಗಿಲ್ಲ ಎಂದು ನಿರ್ಬಂಧ ವಹಿಸಿದ್ದರೂ ಸಹ ನಿಯಮಗಳನ್ನು ಗಾಳಿಗೆ ತೂರಿ ಇಲಿಯಾಜ್ ನಗರದ ಐದನೇ ತಿರುವಿನಲ್ಲಿರುವ ಹನ್ಫಿಯಾ ಮಸೀದಿಯಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಮಾಡಲು ಮುಂದಾದವರನ್ನು ದೊಡ್ಡಪೇಟೆ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

ಶನಿವಾರ 30 ಜನರು ಮುಖಕ್ಕೆ ಮಾಸ್ಕ್ ಧರಿಸದೆ ಪ್ರಾರ್ಥನೆ ಮಾಡಲು ಮುಂದಾಗಿದ್ದಾರೆ. ಗಸ್ತಿನಲ್ಲಿದ್ದ ಪೊಲೀಸ
ರನ್ನು ಕಂಡು ಕೆಲವರು ಪರಾರಿ ಆಗಿದ್ದಾರೆ. ಅವರಲ್ಲಿ 7 ಜನರನ್ನು ಬಂಧಿಸಲಾಗಿದೆ. ಅಬ್ದುಲ್ ಸಲಾಮ್, ಅಲಿ ಮಹಮ್ಮದ್, ಅತೀಕ್ ಷರೀಫ್, ಶರೀಫ್ ಅಹಮ್ಮದ್, ಮಹಮ್ಮದ್ ನೌಶದ್, ಎಸ್.ಬಿ. ಫೈರೋಜ್ ಅಹಮ್ಮದ್ ಎಂದು ಗುರುತಿಸಲಾಗಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಇಂದು ಬೆಳಿಗ್ಗೆ ಹಾಲು ಖರೀದಿ ಸ್ಥಗಿತಮಾರ್ಚ್‌ 30ರ ಬೆಳಿಗ್ಗೆಯಸರದಿಯ ಹಾಲು ಖರೀದಿಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಶಿವಮೊಗ್ಗ, ದಾವಣಗೆರೆ ಹಾಗೂ ಚಿತ್ರದುರ್ಗ ಹಾಲು ಒಕ್ಕೂಟ (ಶಿಮುಲ್‌) ತಿಳಿಸಿದೆ.

ಜಿಲ್ಲೆಯಾದ್ಯಂತ ಲಾಕ್‌ಡೌನ್ ಆಗಿರುವುದರಿಂದ ಮಾರುಕಟ್ಟೆಯಲ್ಲಿ ಮಾರಾಟದ ಪ್ರಮಾಣ ಕುಸಿದಿದ್ದು, ಹಾಲಿನ ಶೇಖರಣೆ ಪ್ರಮಾಣ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಸೋಮವಾರದ ಹಾಲು ಖರೀದಿಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಶಿಮುಲ್ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.

ಕೋವಿಡ್-19 ಹಿನ್ನೆಲೆಯಲ್ಲಿ ಇದೇ ಪರಿಸ್ಥಿತಿ ಮುಂದುವರಿದರೆ ಕಾಲಕಾಲಕ್ಕೆ ಒಕ್ಕೂಟವು ತೆಗೆದುಕೊಳ್ಳುವ ಕ್ರಮಕ್ಕೆ ಹಾಲು ಉತ್ಪಾದಕ ಸಂಘದ ಸದಸ್ಯರು ಸಹಕರಿಸಬೇಕು ಎಂದು ಅವರು ಮನವಿ ಮಾಡಿ‌ದ್ದಾರೆ.

‘ಯಾವುದೇ ಪಾಸಿಟಿವ್ ಪ್ರಕರಣ ಇಲ್ಲ’

ಭಾನುವಾರವೂ ಯಾವುದೇ ಕೊರೊನಾ ಸೋಂಕು ಇರುವ ಯಾವ ಪ್ರಕರಣ ದೃಢಪಟ್ಟಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದುವರೆಗೆ 407 ಜನರ ಮೇಲೆ ನಿಗಾ ಇರಿಸಲಾಗಿದೆ. 283 ಜನ ಹೋಂ ಕ್ವಾರಂಟೈನ್ ಹಾಗೂ 4 ಜನ ಆಸ್ಪತ್ರೆಯಲ್ಲಿ ಕಣ್ಗಾವಲಿನಲ್ಲಿ ಇದ್ದಾರೆ. 120 ಜನರು 14 ದಿನ ಪೂರೈಸಿದ್ದಾರೆ. ಇದುವರೆಗೂ 44 ಜನರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. 40ರಲ್ಲಿ ನೆಗೆಟಿವ್ ಬಂದಿದೆ. 4 ಜನರ ಮಾದರಿಯ ಫಲಿತಾಂಶದ ವರದಿ ಬಾಕಿ ಇದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT