ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ 19– ನರಸೀಪುರ ನಾಟಿ ಔಷಧ ಸ್ಥಗಿತ

ಮುಂದಿನ ದಿನಗಳಲ್ಲಿ ಔಷಧ ನೀಡದಂತೆ ಗ್ರಾಮಸ್ಥರ ಒತ್ತಾಯ
Last Updated 9 ಮಾರ್ಚ್ 2020, 3:13 IST
ಅಕ್ಷರ ಗಾತ್ರ

ಆನಂದಪುರ: ಕೋವಿಡ್‌ 19 ಸೋಂಕಿನ ಹಿನ್ನೆಲೆಯಲ್ಲಿ ಸಮೀಪದ ನರಸೀಪುರದಲ್ಲಿ ವಿವಿಧ ಕಾಯಿಲೆಗಳಿಗೆ ನೀಡುತ್ತಿದ್ದ ನಾಟಿ ಔಷಧವನ್ನು ಎರಡು ದಿನಗಳಿಂದ ನಿಲ್ಲಿಸಿರುವುದರಿಂದ ಹೊರರಾಜ್ಯಗಳಿಂದ ಬಂದ ರೋಗಿಗಳು ಪರದಾಡುವಂತಾಗಿದೆ.

ಕೋವಿಡ್‌ 19 ಹರಡುವ ಭೀತಿ ಇರುವುದರಿಂದ ಮುಂದಿನ ಆದೇಶದವರೆಗೂ ನಾಟಿ ಔಷಧ ನೀಡದಂತೆ ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣಧಿಕಾರಿ ನಾಟಿ ವೈದ್ಯರಾದ ನಾರಾಯಣ ಮೂರ್ತಿಯವರಿಗೆ ಸೂಚಿಸಿದ್ದಾರೆ.

ತಮಿಳುನಾಡು, ಆಂಧ್ರಪದೇಶ, ತೆಲಂಗಾಣ, ಮಧ್ಯಪ್ರದೇಶ, ಕೇರಳ, ಗೋವಾ ಇನ್ನಿತರ ರಾಜ್ಯಗಳಿಂದ ಕ್ಯಾನ್ಯರ್, ಸಕ್ಕರೆ ಕಾಯಿಲೆ, ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆ, ಪಾಶ್ಚವಾಯು, ಮೂತ್ರಪಿಂಡದ ಸಮಸ್ಯೆ ಇನ್ನು ಹಲವಾರು ಕಾಯಿಲೆಗಳಿಗೆ ನಾಟಿ ಔಷಧ ಪಡೆಯಲು ರೋಗಿಗಳು ಇಲ್ಲಿಗೆ ಬರುತ್ತಾರೆ. ಸಾಂಕ್ರಾಮಿಕ ರೋಗ ಹರಡುವ ಭೀತಿಯಿಂದ ಔಷಧ ನೀಡದಂತೆ ಹಾಗೂ ಫಲಕ ಹಾಕುವಂತೆ ಆದೇಶಿಸಿದ್ದಾರೆ.

ಗ್ರಾಮಸ್ಥರ ಪ್ರತಿಭಟನೆ

ನರಸೀಪುರದ ಗ್ರಾಮಸ್ಥರು ನಾಟಿ ಔಷಧ ಕೊಡುವುದನ್ನು ವಿರೋಧಿಸಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ವಿವಿಧ ಕಾಯಿಲೆ ಇರುವ ವ್ಯಕ್ತಿಗಳು ಊರೊಳಗೆ ಬರುವುದರಿಂದ ರೋಗ ಹರಡುವ ಸಾಧ್ಯತೆ ಇರುತ್ತದೆ. ಅಲ್ಲದೆ ಅವರು ಉಪಯೋಗಿಸುವ ನೀರಿನ ಬಾಟಲ್ ಹಾಗೂ ಇನ್ನಿತರ ವಸ್ತುಗಳನ್ನು ಗ್ರಾಮದ ಎಲ್ಲೆಡೆ ಎಸೆಯುತ್ತಿದ್ದಾರೆ. ಇದರಿಂದ ಪರಿಸರ ಮಾಲಿನ್ಯ ಉಂಟಾಗುತ್ತಿದೆ ಎಂದು ಪ್ರತಿಭಟನಕಾರರು ದೂರಿದರು.

ಶೌಚಾಲಯ ವ್ಯವಸ್ಥೆ ಇಲ್ಲ

ನಾಟಿ ವೈದ್ಯರು ಹಲವು ವರ್ಷಗಳಿಂದ ಔಷಧ ನೀಡುತ್ತಿದ್ದು, ಶೌಚಾಲಯ ನಿರ್ಮಾಣ ಮಾಡುವಂತೆ ಹಲವು ಬಾರಿ ಮನವಿ ಮಾಡಿದರೂ ಇಲ್ಲಿಯವರೆಗೂ ನಿರ್ಮಾಣ ಮಾಡಿಲ್ಲ. ಕರ್ನಾಟಕ ಹಾಗೂ ಇತರ ಹೊರರಾಜ್ಯಗಳಿಂದ ಬರುವ ರೋಗಿಗಳಿಂದ ಗ್ರಾಮ ಬಯಲು ಶೌಚಾಲಯವಾಗಿ ಮಾರ್ಪಟ್ಟಿದೆ. ಇದರಿಂದ ಒಡಾಡಲು ಕಷ್ಟವಾಗಿದೆ ಎಂದು ಗ್ರಾಮದ ದಿನೇಶ್ ಆಕ್ರೋಶ ವ್ಯಕ್ತಪಡಿಸಿದರು.

ನಾಟಿ ವೈದ್ಯರು ನೀಡುತ್ತಿದ್ದ ಔಷಧ ನಕಲಿ ಆಗಿದ್ದು, ಇದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಗ್ರಾಮಸ್ಥರು ರಸ್ತೆಯಲ್ಲೇ ಔಷಧದ ಪಾಕೆಟ್ ಸುರಿದು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ಮುಂದೆ ನರಸೀಪುರದ ಗ್ರಾಮದ ಹೊರಗೆ ಬೇಕಾದರೆ ಔಷಧ ನೀಡಲಿ. ಆದರೆ ಊರಿನೊಳಗೆ ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ನೀಡುವುದಿಲ್ಲ. ಹಲವು ಬಾರಿ ವಿವಿಧ ಇಲಾಖೆಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಔಷಧ ನೀಡುವುದು ಕೊನೆಯಾಗಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಪ್ರತಿಭಟನಕಾರರು ಎಚ್ಚರಿಸಿದರು.

ಒಂದು ಗಂಟೆಗೂ ಹೆಚ್ಚು ಕಾಲ ಗ್ರಾಮಸ್ಥರು ರಸ್ತೆ ತಡೆದು ಪ್ರತಿಭಟನೆ ಮಾಡಿದ್ದರಿಂದ ವಾಹನ ಸಂಚಾರ ಅಸ್ತವ್ಯಸ್ತವಾಯಿತು. ರೋಗಿಗಳು ಊರಿಗೆ ತೆರಳಲು ಹರಸಾಹಸಪಟ್ಟರು. ಔಷಧ ಕೊಡುವುದು ಸ್ಥಗಿತಗೊಳಿಸಿರುವ ಮಾಹಿತಿ ಇಲ್ಲದ ಕಾರಣ ರೋಗಿಗಳು ಔಷಧ ಸಿಗದೆ ಪರದಾಡುವಂತಾಯಿತು.

ಸಾಗರದ ಸಿಪಿಐ ರಸ್ತೆ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿದರು.

ನಕಲಿ ಔಷಧದ ಹಾವಳಿ

ನಾಟಿ ವೈದ್ಯರು ಔಷಧ ಕೊಡುವುದನ್ನು ನಿಲ್ಲಿಸಿದ ಕಾರಣ ಕೆಲವರು ಬೇರೆ ಕಡೆಯಿಂದ ನಕಲಿ ಔಷಧ ತಂದು ಮಾರಾಟ ಮಾಡುವ ದೃಶ್ಯ ಎಲ್ಲೆಡೆ ಕಂಡುಬಂತು. ₹ 1 ಸಾವಿರದಿಂದ ₹ 4 ಸಾವಿರದವರೆಗೆ ಔಷಧ ಮಾರಾಟ ಮಾಡಲಾಗುತ್ತಿದೆ. ನಕಲಿ ಔಷಧ ಮಾರಟ ಮಾಡುವವರನ್ನು ಹಿಡಿದು ಗ್ರಾಮಸ್ಥರು ಥಳಿಸಿದ ಪ್ರಸಂಗವೂ ನಡೆಯಿತು.

ಒಂದು ತಿಂಗಳ ಕಾಲ ಔಷಧ ಸ್ಥಗಿತ

‘ಕೋವಿಡ್‌ 19 ಸೋಂಕಿನ ಹಿನ್ನಲೆಯಲ್ಲಿ ಜಿಲ್ಲಾ ವೈದ್ಯಾಧಿಕಾರಿಗಳ ಆದೇಶದ ಮೆರೆಗೆ ಒಂದು ತಿಂಗಳ ಕಾಲ ಔಷಧ ನೀಡುವುದಿಲ್ಲ. ಗ್ರಾಮದಲ್ಲಿ ರೋಗಿಗಳಿಗೆ ನೀಡುತ್ತಿರುವ ನಕಲಿ ಔಷಧದ ಬಗ್ಗೆ ಮಾಹಿತಿ ಇಲ್ಲ. ಅಲ್ಲದೆ ಆ ಔಷಧಗೂ ನಮಗೂ ಯಾವುದೇ ಸಂಬಂಧವಿಲ್ಲ. ಔಷಧವನ್ನು ಯಾವ ಕಡೆಯಿಂದ ತಂದು ಮಾರುತ್ತಾರೆ ಎಂಬುದು ತಿಳಿದಿಲ್ಲ’ ಎಂದು ನಾಟಿ ವೈದ್ಯ ನಾರಾಯಣ ಮೂರ್ತಿ ಸ್ಪಷ್ಟ ಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT