ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ, ತೋಟಗಾರಿಕಾ ಉತ್ಪನ್ನಗಳ ಸಾಗಾಟ, ಮಾರಾಟಕ್ಕೆ ಮುಕ್ತ ಅವಕಾಶ

ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಭರವಸೆ
Last Updated 3 ಏಪ್ರಿಲ್ 2020, 15:44 IST
ಅಕ್ಷರ ಗಾತ್ರ

ವಿಜಯಪುರ: ಕೃಷಿ ಚಟುವಟಿಕೆ ಹಾಗೂ ತೋಟಗಾರಿಕಾ ಉತ್ಪನ್ನಗಳ ಸಾಗಾಟ ಮತ್ತು ಮಾರಾಟಕ್ಕೆ ಲಾಕ್‌ಡೌನ್‌ನಿಂದ ಯಾವುದೇ ರೀತಿಯ ತೊಂದರೆಯಾಗದಂತೆ ಸಂಬಂಧಿಸಿದ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ತೋಟಗಾರಿಕೆ, ಕೃಷಿ, ಎಪಿಎಂಸಿ ಹಾಗೂ ಪಶು ಸಂಗೋಪನೆ ಇಲಾಖೆಗಳ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ರೈತರಿಂದ ಕೃಷಿ ಮತ್ತು ತೋಟಗಾರಿಕೆ ವಿಷಯಕ್ಕೆ ಸಂಬಂಧಿಸಿದಂತೆ ದೂರು ಬಂದ ತಕ್ಷಣ ಸ್ಪಂದಿಸಬೇಕು. ಕೃಷಿ ಪರಿಕರಗಳು, ರಸಗೊಬ್ಬರ, ಬೀಜ, ಕೀಟನಾಶಕಕ್ಕೆ ಸಂಬಂಧಪಟ್ಟ ದೂರುಗಳಿಗೆ ಮತ್ತು ತೋಟಗಾರಿಕೆ ಉತ್ಪನ್ನಗಳ ಬಗ್ಗೆ ಬರುವ ದೂರುಗಳಿಗೆ ತಕ್ಷಣ ಆಯಾ ಹೋಬಳಿ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಸ್ಪಂದಿಸಬೇಕು ಎಂದು ಸೂಚಿಸಿದರು.

ತೋಟಗಾರಿಕೆ ಉತ್ಪನ್ನಕ್ಕೆ ಸಂಬಂಧಪಟ್ಟಂತೆ ರೈತರ ದೂರು ಸ್ವಿಕಾರಕ್ಕೆ ತೋಟಗಾರಿಕೆ ಕೇಂದ್ರ ಕಚೇರಿ ಸಹಾಯಕ ಬಸವರಾಜ ಲಕ್ಕುಂಡ ಮೊ.ಸಂ: 9916287385 ಹಾಗೂ ಕೃಷಿಗೆ ಸಂಬಂಧಿಸಿದಂತೆ ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ರಾಜೇಂದ್ರ ಪಾಟೀಲ ಮೊ.ಸಂ:9480475138 ಅವರನ್ನು ನಿಯೋಜಿಸಲಾಗಿದ್ದು, ರೈತರು ದೂರುಗಳಿದ್ದಲ್ಲಿ ಇವರನ್ನು ಸಂಪರ್ಕಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದರು.

ಕೋವಿಡ್-19 ಮುನ್ನೆಚ್ಚರಿಕೆಯಾಗಿ ಲಾಕ್‍ಡೌನ್ ಜಾರಿಯಲ್ಲಿರುವುದರಿಂದ ಯಾರೂ ಗುಂಪು-ಗುಂಪಾಗಿ ಕೃಷಿ ಚಟುವಟಿಕೆ ಕೈಗೊಳ್ಳಬಾರದು. ಸಾಮಾಜಿಕ ಅಂತರದೊಂದಿಗೆ ಕೃಷಿ ಚಟುವಟಿಕೆ ಕೈಗೊಳ್ಳುವಂತೆ ಸೂಚಿಸಿದರು.

ತೋಟಗಾರಿಕೆ ಉತ್ಪನ್ನ ಮತ್ತು ಕೃಷಿ ಉತ್ಪನ್ನಗಳ ಮಾರಾಟಕ್ಕೆ ಮಾರುಕಟ್ಟೆಯೊಂದಿಗೆ ಸಂಪರ್ಕ ಸಾಧಿಸಿ ರೈತರಿಗೆ ನೆರವಾಗಬೇಕು. ಹಣ್ಣು-ಹಂಪಲಗಳ ಸಾಗಾಟ ಮತ್ತು ಮಾರಾಟಕ್ಕೆ ಅನುಕೂಲ ಮಾಡಿಕೊಡುವ ಮೂಲಕ ರೈತರಲ್ಲಿ ಆತ್ಮಸ್ಥೈರ್ಯ ತುಂಬಬೇಕು. ಅಗತ್ಯ ಬಿದ್ದಲ್ಲಿ ಆಹಾರ ಸಂಸ್ಕರಣಾ ಘಟಕಗಳೊಂದಿಗೆ ರೈತರನ್ನು ಸಂಯೋಜಿಸಿ ಅವರಿಗೆ ನೆರವಾಗಬೇಕು ಎಂದು ತಿಳಿಸಿದರು.

ಎಪಿಎಂಸಿ ಮಾರುಕಟ್ಟೆಗಳ ವ್ಯಾಪ್ತಿಯಲ್ಲೂ ಚಟುವಟಿಕೆಗಳು ಸಾಮಾಜಿಕ ಅಂತರ ಮತ್ತು ನಿಯಮಬದ್ಧವಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದರು.

ಬಿಡಾಡಿ ದನಗಳಿಗೆ ಮೇವು ಒದಗಿಸಿ:ನಗರದಲ್ಲಿರುವ ಸುಮಾರು 200ಕ್ಕೂ ಹೆಚ್ಚು ಬಿಡಾಡಿ ದನಗಳಿದ್ದು, ಅವುಗಳಿಗೆ ಮೇವಿನ ಕೊರತೆಯಾಗದಂತೆ ನೋಡಿಕೊಳ್ಳಬೇಕು. ದಿನಕ್ಕೆ ಎರಡು ಬಾರಿ ಜಾನುವಾರುಗಳಿಗೆ ಮೇವು ಒದಗಿಸಬೇಕು ಎಂದು ಪಶು ಸಂಗೋಪನೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಈ ಕುರಿತಂತೆ ಯಾವುದೇ ರೀತಿಯ ದೂರುಗಳಿದಲ್ಲಿ ಸಾರ್ವಜನಿಕರು ಪಶು ಸಂಗೋಪನೆ ಉಪನಿರ್ದೇಶಕರ ಮೊ.ಸಂ: 6362746378 ಗೆ ಸಲ್ಲಿಸುವಂತೆ ಅವರು ತಿಳಿಸಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಔದ್ರಾಮ್, ಪ್ರಾಣಿದಯಾ ಸಂಘದ ಕಾರ್ಯದರ್ಶಿ ಹಾಗೂ ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕ ಪ್ರಾಣೇಶ ಜಾಹಗೀರದಾರ ಸಭೆಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT