ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮೂಹಿಕ ಪ್ರಾರ್ಥನೆಗೆ ನಿರ್ಬಂಧ: ಡಿಸಿ

ಅಗತ್ಯ ವಸ್ತುಗಳ ಖರೀದಿ ಸಂದರ್ಭದಲ್ಲಿ ಸಾಮಾಜಿಕ ಅಂತರ ಪಾಲನೆ ಕಡ್ಡಾಯ
Last Updated 8 ಏಪ್ರಿಲ್ 2020, 12:13 IST
ಅಕ್ಷರ ಗಾತ್ರ

ವಿಜಯಪುರ: ಶಬ್-ಎ-ಬರಾತ್ ಅಂಗವಾಗಿ ಮುಸ್ಲಿಂ ಬಾಂಧವರು ಮಸೀದಿ ಹಾಗೂ ಖಬರಸ್ಥಾನಗಳಿಗೆ ಪ್ರಾರ್ಥನೆಗಾಗಿ ಹೋಗದೆ ಮನೆಯಲ್ಲಿಯೇ ಪ್ರಾರ್ಥನೆ ಸಲ್ಲಿಸಬೇಕು.ಸಾಮೂಹಿಕ ಪ್ರಾರ್ಥನೆಯನ್ನು ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಜಿಲ್ಲೆಯಲ್ಲಿ ಎಲ್ಲರ ಸಹಕಾರದಿಂದ ಇದುವರೆಗೆ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಕೊರೊನಾ ಪಾಸಿಟಿವ್‌ ಪ್ರಕರಣ ಕಂಡುಬಂದಿಲ್ಲ. ಕೊರೊನಾ ಸೋಂಕು ಜಿಲ್ಲೆಗೆ ಬರದಂತೆ ಎಲ್ಲರೂ ಶ್ರಮಿಸೋಣ ಎಂದು ಮನವಿ ಮಾಡಿದರು.

ನಿರ್ದಾಕ್ಷಿಣ್ಯ ಕ್ರಮ:ಕೊರೊನಾ ಸೋಂಕಿಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳ ಮೂಲಕ ವದಂತಿ ಹಬ್ಬಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಅಂತರ ಪಾಲಿಸಿ:ಜಿಲ್ಲೆಯಾದ್ಯಂತ ಪಡಿತರ, ತರಕಾರಿ ಮತ್ತು ಹಣ್ಣು, ಮೀನು ಸೇರಿದಂತೆ ಅಗತ್ಯ ವಸ್ತುಗಳ ಖರೀದಿ ಸಂದರ್ಭದಲ್ಲಿ ಕಡ್ಡಾಯವಾಗಿ ಸಾಮಾಜಿಕ ಅಂತರ ಪಾಲಿಸಬೇಕು ಮನವಿ ಮಾಡಿದರು.

ಎಪಿಎಂಸಿಯಲ್ಲಿಯೂ ಸಾಮಾಜಿಕ ಅಂತರದೊಂದಿಗೆ ವ್ಯಾಪಾರ, ವಹಿವಾಟು ನಡೆಸಬೇಕು. ಎಪಿಎಂಸಿಯಲ್ಲಿ ಸ್ಯಾನಿಟೈಸರ್‌ ಸಿಂಪಡಿಸಲು ಕ್ರಮಕೈಗೊಳ್ಳಲಾಗುವುದು. ರೈತರು ಸೇರಿದಂತೆ ವ್ಯಾಪಾರಸ್ಥರು ಮಾಸ್ಕ್ ಧರಿಸುವ ಮೂಲಕ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.

ಗ್ರಾಹಕರು ಮನೆ ಬಳಿ ಬರುವ ವ್ಯಾಪಾರಸ್ಥರಿಂದಲೇ ತರಕಾರಿ ಖರೀದಿಸಬೇಕು. ಯಾವುದೇ ಕಾರಣಕ್ಕೂ ಎಪಿಎಂಸಿಗೆ ಹೋಗಬಾರದು ಎಂದು ಸೂಚಿಸಿದರು.

ಜಿಲ್ಲೆಯಾದ್ಯಂತ ಮೀನು ಮಾರಾಟಕ್ಕೆ ಯಾವುದೇ ನಿರ್ಬಂಧ ಇರುವುದಿಲ್ಲ. ಪಾರ್ಸಲ್ ಪಡೆಯಲು ಮಾತ್ರ ಅವಕಾಶ ಕಲ್ಪಿಸಿದೆ ಎಂದು ತಿಳಿಸಿದರು.

ಪಶುಸಂಗೋಪನೆ ಇಲಾಖೆಯಿಂದ ಯಲಗೂರ ಗೋಶಾಲೆಯಲ್ಲಿರುವ 300 ಜಾನುವಾರುಗಳಿಗೆ ಮೇವು, ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

ಜಿಲ್ಲೆಯಲ್ಲಿ 47 ಕಡಲೆ ಖರೀದಿ ಕೇಂದ್ರ ಆರಂಭಿಸಬೇಕಾಗಿದ್ದು, ಈ ಪೈಕಿ 10 ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಬಾಕಿ ಉಳಿದ ಖರೀದಿ ಕೇಂದ್ರಗಳನ್ನು ತಕ್ಷಣ ಆರಂಭಿಸಲಾಗುವುದು ಎಂದರು.

ತೊಗರಿಯನ್ನು ಈಗಾಗಲೇ 79 ಸಾವಿರ ರೈತರಿಂದ ಖರೀದಿಸಲಾಗಿದ್ದು, ಬಾಕಿ ಉಳಿದ ರೈತರ ತೊಗರಿಯನ್ನು ಸಹ ಖರೀದಿಗೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಪಡಿತರ ವಿತರಣೆ ಸಂದರ್ಭದಲ್ಲಿ ಯಾರೂ ಹಣ ಕೇಳಬಾರದು. ಇದು ಹಣ ಮಾಡುವ ಸಂದರ್ಭ ಅಲ್ಲ, ಸಹಾಯ ಮಾಡುವ ಸಂದರ್ಭ. ಪಡಿತರಕ್ಕಾಗಿ ಹಣ ಪಡೆಯುವುದು ಗಮನಕ್ಕೆ ಬಂದರೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜಿಲ್ಲೆಯಾದ್ಯಂತ ಕಳ್ಳಭಟ್ಟಿ ತಯಾರಿಕೆ ನಿಯಂತ್ರಣಕ್ಕೆ 283 ಕಡೆಗಳಲ್ಲಿ ದಾಳಿ ಮಾಡಲಾಗಿದೆ. 18 ಪ್ರಕರಣಗಳನ್ನು ದಾಖಲಿಸಲಾಗಿದೆ. ಲಾಕ್‍ಡೌನ್ ನಂತರ 4 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲೆಗೆ ವಿದೇಶ ಮತ್ತು ಇತರೆ ಪ್ರದೇಶಗಳಿಂದ ಬಂದ 420 ಜನರ ಮೇಲೆ ತೀವ್ರ ನಿಗಾ ಇಡಲಾಗಿದೆ. 216 ಜನ 28 ದಿನಗಳನ್ನು ಪೂರ್ಣಗೊಳಿಸಿದ್ದು, 172 ಜನರು 15 ರಿಂದ 28 ದಿನಗಳ ರಿಪೋರ್ಟಿಂಗ್ ಅವಧಿಯಲ್ಲಿದ್ದಾರೆ. ಈವರೆಗೆ ಕಳುಹಿಸಲಾದ 61 ಗಂಟಲು ದ್ರವ ಮಾದರಿಗಳ ಪರೀಕ್ಷಾ ವರದಿಯಲ್ಲಿ 59 ಪರೀಕ್ಷಾ ವರದಿ ನೆಗೆಟಿವ್ ಬಂದಿದೆ. ಎರಡು ಪರೀಕ್ಷಾ ವರದಿ ಬರುವುದು ಬಾಕಿ ಇದೆ ಎಂದು ತಿಳಿಸಿದರು.

ಕೂಲಿ ಕೆಲಸಕ್ಕಾಗಿ ಕಾಸರಗೋಡಿಗೆ ಹೋಗಿದ್ದ ಇಬ್ಬರು ಜಿಲ್ಲೆಗೆ ಮರಳಿ ಬಂದಿದ್ದಾರೆ. ಈಗಾಗಲೇ ಅವರು 11 ದಿನಗಳನ್ನು ಕಳೆದಿದ್ದು, ಆರೋಗ್ಯವಾಗಿದ್ದಾರೆ. ಆದರೂ ಅವರ ಗಂಟಲ ದ್ರವನ್ನು ಗುರುವಾರ ಪರೀಕ್ಷೆಗೆ ಕಳುಹಿಸಲಾಗುವುದು ಎಂದು ಹೇಳಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಇದ್ದರು.

ಮೂವರು ಪೊಲೀಸರ ಅಮಾನತು
ವಿಜಯಪುರ
: ಪೊಲೀಸ್‌ ವಾಟ್ಸ್‌ ಆ್ಯಪ್‌ ಗ್ರೂಪ್‌ನಲ್ಲಿ ಕೊರೊನಾ ಸಂಬಂಧಿಸಿದಂತೆ ಸುಳ್ಳು ಸುದ್ದಿ ಹರಡಿದ ಆರೋಪದ ಮೇರೆಗೆ ಮೂವರು ಪೊಲೀಸರನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಮಾನತು ಮಾಡಿದ್ದಾರೆ ಎಂದು ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ತಿಳಿಸಿದರು.

ಪೊಲೀಸ್‌ ವಾಟ್ಸ್‌ ಆ್ಯಪ್‌ ಗ್ರೂಪ್‌ನಲ್ಲಿ ಆಂತರಿಕವಾಗಿ ಸುಳ್ಳು ಸುದ್ದಿ ಹರಿದಾಡಿರುವುದರಿಂದ ಅವರ ಹೆಸರು, ಠಾಣೆಯನ್ನು ಬಹಿರಂಗ ಪಡಿಸಿಲ್ಲ. ಈ ಬಗ್ಗೆ ಎಸ್‌ಪಿ ಅವರೇ ಸ್ಪಷ್ಟನೆ ನೀಡಲಿದ್ದಾರೆ ಎಂದರು.

ವೈದ್ಯಕೀಯ ಸೇವೆಗೆ ಮಾತ್ರ ಅವಕಾಶ
ವಿಜಯಪುರ
: ತುರ್ತು ವೈದ್ಯಕೀಯ ಸಂಚಾರ ಹೊರತು ಪಡಿಸಿ ಜಿಲ್ಲೆಯಿಂದ ಹೊರ ಜಿಲ್ಲೆಗಳಿಗೆ ಬರುವ, ಹೋಗುವವರಿಗೆ ಕಡ್ಡಾಯವಾಗಿ ನಿರ್ಬಂಧ ವಿಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಹೆದ್ದಾರಿ, ರಸ್ತೆಗಳಲ್ಲಿ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ಕಡ್ಡಾಯಗೊಳಿಸಿರುವುದರಿಂದ ಕೆಲವರು ಹೊಲಗಳ ಮೂಲಕ ನಡೆದುಕೊಂಡು ಜಿಲ್ಲೆಯನ್ನು ಪ್ರವೇಶಿಸುತ್ತಿರುವುದು ಗಮನಕ್ಕೆ ಬಂದಿದೆ. ಅಂತವರ ವಿರುದ್ಧವೂ ಕ್ರಮಕೈಗೊಳ್ಳಲಾಗುವುದು ಎಂದರು.

ಊರುಗಳಿಗೆ ಬರುವವರನ್ನು ಜನರೇ ಬಿಟ್ಟುಕೊಳ್ಳುತ್ತಿಲ್ಲ. ಅಂತವರಿಗೆ ಜಿಲ್ಲಾಡಳಿತದಿಂದ ಅಗತ್ಯ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT