ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ ಜಿಲ್ಲೆಗೆ ಶೀಘ್ರದಲ್ಲಿ 1400 ಪಿಪಿಇ ಕಿಟ್ ಪೂರೈಕೆ

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜೆ.ರವಿಶಂಕರ್ ಹೇಳಿಕೆ
Last Updated 9 ಏಪ್ರಿಲ್ 2020, 13:21 IST
ಅಕ್ಷರ ಗಾತ್ರ

ವಿಜಯಪುರ: ಕೋವಿಡ್-19 ಸೋಂಕಿತರ ನಿರ್ವಹಣೆ ಸಂದರ್ಭದಲ್ಲಿ ವೈದ್ಯರಿಗೆ ನೆರವಾಗಲು 1400 ಸ್ವ ಸುರಕ್ಷಾ ಕವಚ (ಪರ್ಸನಲ್ ಪ್ರೋಟೆಕ್ಷನ್ ಇಕ್ವಿಪ್‍ಮೆಂಟ್) ಕಿಟ್‍ಗಳು ಶೀಘ್ರದಲ್ಲಿಯೇ ಸರ್ಕಾರದಿಂದ ಜಿಲ್ಲೆಗೆ ಪೂರೈಕೆಯಾಗಲಿವೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜೆ.ರವಿಶಂಕರ್ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಕೋವಿಡ್-19 ಮುನ್ನೆಚ್ಚರಿಕಾ ಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

40 ಸಾವಿರ ತ್ರಿಬಲ್‌ ಲೇಯರ್‌ ಮಾಸ್ಕ್‌ ಮತ್ತು 35 ಸಾವಿರ ಮಲೇರಿಯಾ ನಿರೋಧಕ ಹೈಡ್ರಾಕ್ಸಿಕ್ಲೊರೊಕ್ಸಿನ್‌ ಮಾತ್ರೆಗಳು ಮತ್ತು ಗಂಟಲು ದ್ರವ ಸಂಗ್ರಹಕ್ಕೆ ಬೇಕಾಗುವ ವೈರಲ್ ಟ್ರಾನ್ಸ್‌ಪೋರ್ಟ್ ಮಿಡಿಯಂ(ವಿಟಿಎಂ) 13 ಕಿಟ್‍ಗಳು ಸಹ ಜಿಲ್ಲೆಗೆ ಪೂರೈಕೆಯಾಗಲಿವೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಮುಂಬರುವ ದಿನಗಳಲ್ಲಿ ಕೋವಿಡ್-19 ಪಾಸಿಟಿವ್ ಪ್ರಕರಣ ಬಂದ ಸಂದರ್ಭದಲ್ಲಿ ಎದುರಿಸಲು ಸರ್ವರೀತಿಯಿಂದಲೂ ಸನ್ನದ್ಧಗೊಳ್ಳುವಂತೆ ತಿಳಿಸಿದರು.

ಫೀವರ್ ಕ್ಲಿನಿಕ್, ಕ್ವಾರಂಟೈನ್ ಸೆಂಟರ್, ಐಸೋಲೇಶನ್ ಸೆಂಟರ್ ಮತ್ತು ಕೋವಿಡ್ ಆಸ್ಪತ್ರೆಗೆ ಕೈಗೊಳ್ಳಬೇಕಾದ ಅವಶ್ಯಕ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿದರು.

ಜಿಲ್ಲೆಯಾದ್ಯಂತ ಪಡಿತರ ಹಂಚಿಕೆ ಮತ್ತು ತರಕಾರಿ, ಅಗತ್ಯ ವಸ್ತುಗಳ ಮಾರಾಟ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಟ್ಟುನಿಟ್ಟಾಗಿ ಪಾಲಿಸುವ ಕುರಿತು ಸಾರ್ವಜನಿಕರಿಗೆ ಮನವರಿಕೆ ಮಾಡಬೇಕು ಎಂದರು.

ಕೃಷಿ ಮತ್ತು ಕೃಷಿ ಪೂರಕ ಚಟುವಟಿಕೆಗಳು, ಜೀವನಾವಶ್ಯಕ ವಸ್ತುಗಳಿಗೆ ಯಾವುದೇ ನಿರ್ಬಂಧ ಇಲ್ಲದಿದ್ದರೂ ಕೂಡ ಸಾಮಾಜಿಕ ಅಂತರ ಕಡ್ಡಾಯವಾಗಿ ಪಾಲಿಸುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಮುಸ್ಲಿಂ ಬಾಂಧವರು ಶಬ್-ಎ-ಬರಾತ್ ಮತ್ತು ಶುಕ್ರವಾರದ ಪ್ರಾರ್ಥನೆಗಳನ್ನು ಸಾಮೂಹಿಕವಾಗಿ ಆಚರಿಸಬಾರದು ಎಂದರು.

ಒಣದ್ರಾಕ್ಷಿ ತಯಾರಿಕೆಗೆ ಅವಶ್ಯಕತೆಯಿರುವ ಡಿಪ್ಪಿಂಗ್ ಆಯಿಲ್ ಕುರಿತು ಸಮಗ್ರ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗೆ ತಿಳಿಸಿದರು.

ಜಿಲ್ಲಾಡಳಿತ ಕೋವಿಡ್-19 ನಿಯಂತ್ರಣಕ್ಕೆ ಕೈಗೊಂಡಿರುವ ನಿರ್ವಹಣಾ ಕ್ರಮಗಳಿಂದ ಹಾಗೂ ಜಿಲ್ಲೆಯ ಎಲ್ಲ ಅಧಿಕಾರಿಗಳ ನಿರಂತರ ಪರಿಶ್ರಮದಿಂದ ಒಂದೇ ಒಂದು ಪಾಸಿಟಿವ್ ಪ್ರಕರಣಗಳು ಜಿಲ್ಲೆಯಲ್ಲಿ ಕಂಡುಬಂದಿಲ್ಲದಿರುವುದು ಶ್ಲಾಘನೀಯ ಎಂದರು.

ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಮಾತನಾಡಿ, ದ್ರಾಕ್ಷಿ ಹಾಗೂ ಒಣದ್ರಾಕ್ಷಿ ಆನ್‍ಲೈನ್ ಟ್ರೇಡಿಂಗ್‍ಗೆ ಹಾಗೂ ತೋಟಗಾರಿಕಾ ಮತ್ತು ಕೃಷಿ ಬೆಳೆಗಳ ಮಾರಾಟ ಮತ್ತು ಸಾಗಾಣಿಕೆಗೆ ಅವಶ್ಯಕ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ತೊಂದರೆಯಾಗದಂತೆ ರಾಜ್ಯ ಸರ್ಕಾರದಿಂದ ಹೆಚ್ಚಿನ ಅನುದಾನ ನೀಡುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅವರಿಗೆ ಮನವಿ ಮಾಡಿದರು.

ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಔದ್ರಾಮ್, ಮಹಾನಗರ ಪಾಲಿಕೆ ಆಯುಕ್ತ ಹರ್ಷಾ ಶೆಟ್ಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹೇಂದ್ರ ಕಾಪ್ಸೆ, ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿ ಡಾ.ಮುಕುಂದ ಗಲಗಲಿ, ಜಿಲ್ಲಾಸ್ಪತ್ರೆ ಡಾ.ಸರ್ಜನ್ ಶರಣಪ್ಪ ಕಟ್ಟಿ, ಆಹಾರ ಇಲಾಖೆ ಜಂಟಿ ನಿರ್ದೇಶಕಿ ಸುರೇಖಾ, ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ.ಮಲ್ಲನಗೌಡ ಬಿರಾದಾರ, ಡಾ. ಧಾರವಾಡಕರ, ಡಾ. ಲಕ್ಕಣ್ಣವರ್, ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕ ಪ್ರಾಣೇಶ ಜಾಹಗೀರದಾರ ಡಾ.ಸಂಪತ್ ಕುಮಾರ್ ಗುನಾರೆ ಉಪಸ್ಥಿತರಿದ್ದರು.

200 ಬೆಡ್‍ಗಳ ಕೋವಿಡ್ ಆಸ್ಪತ್ರೆ
ವಿಜಯಪುರ:
ಜಿಲ್ಲಾಸ್ಪತ್ರೆಯನ್ನು 200 ಬೆಡ್‍ಗಳ ಕೋವಿಡ್–19 ಆಸ್ಪತ್ರೆಯಾಗಿ ಪರಿವರ್ತಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ತಿಳಿಸಿದರು.

ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾಸ್ಪತ್ರೆಯ ಜೊತೆಗೆ 15 ಹೆಚ್ಚುವರಿ ಆಸ್ಪತ್ರೆಗಳನ್ನು ಕೋವಿಡ್‌ ಚಿಕಿತ್ಸೆಗಾಗಿ ಗುರುತಿಸಲಾಗಿದೆ. ಬಿ.ಎಲ್.ಡಿ.ಇ, ಅಲ್ ಅಮಿನ್ ಆಸ್ಪತ್ರೆಯಲ್ಲಿ ಐಸೋಲೇಶನ್ ವಾರ್ಡ್‍ಗಳನ್ನು ಸಹ ಸಿದ್ಧತೆಯಲ್ಲಿ ಇಟ್ಟುಕೊಳ್ಳಲಾಗಿದೆ ಎಂದು ಹೇಳಿದರು.

ಕೋವಿಡ್-19 ಲಕ್ಷಣಗಳು ಯಾರಲ್ಲಾದರೂ ಕಂಡುಬಂದಲ್ಲಿ ತಕ್ಷಣ 1077 ಜಿಲ್ಲಾ ಸಹಾಯವಾಣಿಗೆ ಸಂಪರ್ಕಿಸಬೇಕು. ಆಯಾ ತಾಲ್ಲೂಕುವಾರು ಕೋವಿಡ್ ಆಂಬುಲೆನ್ಸ್ ವ್ಯವಸ್ಥೆ ಮಾಡಿದ್ದು, ತಾಲ್ಲೂಕವಾರು ನೋಡಲ್‌ ಅಧಿಕಾರಿಗಳನ್ನಾಗಿ ಆಯಾ ತಾಲ್ಲೂಕು ಆರೋಗ್ಯ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದರು.

61 ನೆಗೆಟಿವ್:ಜಿಲ್ಲೆಯಲ್ಲಿ ಈವರೆಗೆ ಸಂಗ್ರಹಿಸಲಾದ 63 ಗಂಟಲು ದ್ರವ ಮಾದರಿಗಳ ಪೈಕಿ 61 ಪ್ರಕರಣಗಳ ವರದಿ ನೆಗೆಟಿವ್ ಬಂದಿದೆ. ಗುರುವಾರ ಹೊಸದಾಗಿ ಎಂಟು ಜನರ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಒಟ್ಟು 10 ವೈದ್ಯಕೀಯ ವರದಿಗಳು ಬರುವುದು ಬಾಕಿ ಇವೆ ಎಂದು ತಿಳಿಸಿದರು.

ಈವರೆಗೆ ವಿದೇಶ ಮತ್ತು ಇತರ ಕಡೆಗಳಿಂದ ಜಿಲ್ಲೆಗೆ ಬಂದಿರುವ 422 ಜನರ ಮೇಲೆ ತೀವ್ರ ನಿಗಾ ಇಡಲಾಗಿದೆ. 231 ಜನ 28 ದಿನಗಳ ಅವಧಿ ಪೂರ್ಣಗೊಳಿಸಿದ್ದಾರೆ. 160 ಜನ ರಿಪೋರ್ಟಿಂಗ್ ಅವಧಿಯಲ್ಲಿದ್ದಾರೆ. 31 ಜನ ಹೋಂ ಕ್ವಾರಂಟೈನಲ್ಲಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT