ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ | ಮನೆ, ಮನೆ ಆರೋಗ್ಯ ಸಮೀಕ್ಷೆ -ಸಚಿವೆ ಜೊಲ್ಲೆ

ಕೊರೊನಾ ಸೋಂಕು ವ್ಯಾಪಿಸದಂತೆ ತಡೆಯಲು ಕ್ರಮ
Last Updated 22 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ವಿಜಯಪುರ: ಕೊರೊನಾ ಸೋಂಕು ಹರಡದಂತೆ ತಡೆಯಲು ಜಿಲ್ಲೆಯ ಪ್ರತಿ ಮನೆ,ಮನೆಯ ಆರೋಗ್ಯ ಸಮೀಕ್ಷೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮನೆ, ಮನೆಗಳಿಗೆ ಭೇಟಿ ನೀಡಿ ಡಯಾಲಿಸಿಸ್‌, ಕ್ಯಾನ್ಸರ್‌ ಸೇರಿದಂತೆ ತೀವ್ರತರ ಕಾಯಿಲೆಯಿಂದ ಬಳಲುವವರು ಹಾಗೂ ಗರ್ಭಿಣಿಯರು, ಬಾಣಂತಿಯರು ಮತ್ತು ವಯೋ ವೃದ್ಧರ ಮಾಹಿತಿ ಸಂಗ್ರಹಿಸಲಿದ್ದಾರೆ ಎಂದರು.

ಜಿಲ್ಲೆಯಲ್ಲಿ ತೀವ್ರ ತೆರನಾದ ಶ್ವಾಸಕೋಶದ ಸೋಂಕು ಮತ್ತು ನೆಗಡಿ, ಜ್ವರ ಮತ್ತು ಕೆಮ್ಮು ಪ್ರಕರಣಗಳ ಮಾಹಿತಿ ಪಡೆಯುವುದಕ್ಕಾಗಿ ವೈದ್ಯರ ತಂಡಗಳನ್ನು ರಚಿಸಲಾಗಿದೆ ಎಂದು ಹೇಳಿದರು.

2ನೇ ಸುತ್ತಿನ ಸಮೀಕ್ಷೆ:ಕೋವಿಡ್‌–19 ಪ್ರಕರಣಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ ಸೀಲ್‌ಡೌನ್‌ ಮಾಡಲಾಗಿರುವ ನಗರದ ಚಪ್ಪರಬಂದ್‌ ಹಾಗೂ ತಿಕೋಟಾ ತಾಲ್ಲೂಕಿನ ರನ್ನಾಪುರ ಗ್ರಾಮದ ಜನರ ಪ್ರಥಮ ಹಂತದ ಆರೋಗ್ಯ ಸಮೀಕ್ಷೆ ಕಾರ್ಯ ಪೂರ್ಣಗೊಂಡಿದ್ದು, ಎರಡನೇ ಹಂತದ ಸಮೀಕ್ಷಾ ಕಾರ್ಯ ಪ್ರಗತಿಯಲ್ಲಿದೆ ಎಂದರು.

ಆರೋಗ್ಯವಾಗಿದ್ದಾರೆ:ಕೋವಿಡ್‌ 19 ಜಿಲ್ಲಾಸ್ಪತ್ರೆಯ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪಾಸಿಟಿವ್‌ ಇರುವ 33 ಜನರೂ ಆರೋಗ್ಯವಾಗಿದ್ದಾರೆ. ಯಾವುದೇ ತೊಂದರೆ ಇಲ್ಲ ಎಂದು ಸಚಿವೆ ಸ್ಪಷ್ಟಪಡಿಸಿದರು.

ಪಾಸಿಟಿವ್‌ ಕಂಡುಬಂದಿರುವವರಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆಯನ್ನು ನೀಡಲು ರಾಜ್ಯದ ಅತೀ ನುರಿತ ವೈದ್ಯರ ಹಾಗೂ ಜಿಲ್ಲೆ ಖಾಸಗಿ ತಜ್ಞ ವೈದ್ಯರ ನೇರ ಸಂಪರ್ಕದಲ್ಲಿರಲಾಗಿದೆ ಎಂದರು.

ಪಾಸಿಟಿವ್‌ ಇರುವವರೊಂದಿಗೆ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿ ಇರುವವರ 1033 ಜನರ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿಸಿದರು.

ಪ್ರತ್ಯೇಕ ವಸತಿ:ಸೀಲ್‌ಡೌನ್‌ ಪ್ರದೇಶದಲ್ಲಿ ಅಗತ್ಯ ವಸ್ತುಗಳ ಪೂರೈಕೆ, ಸ್ವಚ್ಛತೆ ಹಾಗೂ ವೈದ್ಯಕೀಯ ಸೇವೆ ಮತ್ತು ಭದ್ರತೆ ಕೈಗೊಂಡಿರುವ 50 ಜನರನ್ನು ಒಳಗೊಂಡ ಪೊಲೀಸ್‌, ಆರೋಗ್ಯ ಮತ್ತು ಆಶಾ, ಅಂಗನವಾಡಿ ಹಾಗೂ ಪೌರಕಾರ್ಮಿಕರ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ. ಅವರೆಲ್ಲರಿಗೂ ಪ್ರತ್ಯೇಕ ವಸತಿ ಕಲ್ಪಿಸಲಾಗಿದೆ ಎಂದು ಹೇಳಿದರು.

ವಿಶ್ವಾಸವಿದೆ:ಜಿಲ್ಲೆಯಲ್ಲಿ ಹೊಸದಾಗಿ ಕೋವಿಡ್‌–19 ಪಾಸಿಟಿವ್‌ ಪ್ರಕರಣಗಳು ಬರುವ ನಿರೀಕ್ಷೆ ಇಲ್ಲ. ಈಗಾಗಲೇ ಪಾಸಿಟಿವ್‌ ಬಂದಿರುವ ಪ್ರಕರಣಗಳು ಬಹುತೇಕ ಒಂದೇ ಪ್ರದೇಶಕ್ಕೆ ಸೀಮಿತವಾಗಿರುವುದರಿಂದ ಸೋಂಕು ಬೇರೆಡೆಗೆ ವ್ಯಾ‍ಪಿಸಿರುವ ಸಾಧ್ಯತೆ ಕಡಿಮೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಹೊಸ ಪ್ರಕರಣ ಇಲ್ಲ:ಜಿಲ್ಲೆಯಲ್ಲಿ ಬುಧವಾರ ಕೋವಿಡ್‌–19 ಪಾಸಿಟಿವ್‌ ಹೊಸ ಪ್ರಕರಣಗಳು ಕಂಡುಬಂದಿಲ್ಲ ಎಂದು ಹೇಳಿದರು.

ಶಾಸಕ ಸೋಮನಗೌಡ ಪಾಟೀಲ ಸಾಸನೂರ, ವಿಧಾನ ಪರಿಷತ್‌ ಸದಸ್ಯ ಅರುಣ ಶಹಪೂರ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ, ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಪಮ್‌ ಅಗರವಾಲ್‌, ಜಿಲ್ಲಾ ಪಂಚಾಯ್ತಿ ಸಿಇಒ ಗೋವಿಂದರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT