ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗದಲ್ಲಿ ಸೋಂಕಿತರು ಇಲ್ಲವೆಂದು ಮೈಮರೆತ ನಾಗರಿಕರು!

ಕೊರೊನಾ ನಿರ್ಬಂಧದ ಮಧ್ಯೆಯೂ ಮುಂದುವರಿದ ವಾಹನಗಳ ಸಂಚಾರ
Last Updated 2 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ಶಿವಮೊಗ್ಗ: ಜಿಲ್ಲೆಯಲ್ಲಿ ಕೊರೊನಾ ನಿರ್ಬಂಧಗಳು ಜಾರಿಯಾಗಿ 10 ದಿನಗಳು ಮುಗಿದಿವೆ. ಕೋವಿಡ್‌ ಸೋಂಕಿತರು ಪತ್ತೆಯಾಗದೇ ಇರುವುದು ಎಲ್ಲರಿಗೂ ಸಮಾಧಾನದ ವಿಷಯ. ಆದರೆ, ಈ ವಿಷಯವನ್ನೇ ಇಟ್ಟುಕೊಂಡು ಹಲವೆಡೆ ಜನರು ಮನೆಯಿಂದ ನಿಧಾನವಾಗಿ ಹೊರಬಂದು ರಸ್ತೆಗಳಲ್ಲಿ ಓಡುಡುತ್ತಿರುವ, ವಾಹನಗಳಲ್ಲಿ ಸಂಚರಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ.

ಮನೆಯಿಂದ ಹೊರಬಂದು ರಸ್ತೆಗಳಲ್ಲಿ ಅಡ್ಡಾಡುವ ಜನರಿಗೆ ಆರಂಭದಲ್ಲಿ ಲಘು ಲಾಠಿ ಪ್ರಹಾರ ನಡೆಸಿದ್ದ ಪೊಲೀಸರ ವಿರುದ್ಧ ಸಾಮಾಜಿಕ ಜಾಲ ತಾಣಗಳಲ್ಲಿ ಟೀಕೆ ವ್ಯಕ್ತವಾದ ನಂತರ ಅವರೂ ಲಾಠಿ ರುಚಿ ನೀಡುವ ಪ್ರಕ್ರಿಯೆಗೆ ತಿಲಾಂಜಲಿ ಬಿಟ್ಟಿದ್ದಾರೆ. ಮತ್ತೊಂದೆಡೆ ಅಗತ್ಯ ವಸ್ತುಗಳ ಖರೀದಿ ನೆಪದಲ್ಲಿ, ಮನೆಯ ಹಿರಿಯರಿಗೆ ಔಷಧ ಮಾತ್ರೆಗಳ ಅಗತ್ಯವಿದೆ ಎಂದು ನೆಪ ಹೇಳುತ್ತಾ ಬೀದಿಗೆ ಬರುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಜಿಲ್ಲೆ ಪ್ರವೇಶಿಸುವ ವಾಹನಗಳನ್ನು ತಾಪಸಣೆಗೆ ಒಳಪಡಿಸಲಾಗುವುದು ಎಂದು ಜಿಲ್ಲಾಡಳಿತ ಘೋಷಿಸಿದ್ದರೂ, ಅನೇಕರು ಒಳ ಮಾರ್ಗಗಳ ಮೂಲಕಜಿಲ್ಲೆಯ ಒಳಗೆ ನುಸುಳುತ್ತಲೇ ಇದ್ದಾರೆ.

ತಪಾಸಣಾ ಕೇಂದ್ರಗಳಲ್ಲಿ ಇಲ್ಲ ಬಿಗಿ: ಜಿಲ್ಲೆಯಲ್ಲಿ 15 ಚೆಕ್‌ಪೋಸ್ಟ್‌ ತೆರೆಯಲಾಗಿದೆ. ಬೆಳಿಗ್ಗೆ, ಸಂಜೆ ಸಮಯದಲ್ಲಿ ಅಲ್ಲಿ ಸಿಬ್ಬಂದಿ ಹಾಜರಿದ್ದು ತಪಾಸಣೆ ನಡೆಸುತ್ತಾರೆ. ಮಧ್ಯಾಹ್ನ, ರಾತ್ರಿ ವಾಹನಗಳು ಅನಾಯಾಸವಾಗಿ ಸಾಗುತ್ತಿವೆ. ಗ್ರಾಮೀಣ ಪ್ರದೇಶಗಳ ಒಳ ಮಾರ್ಗಗಳ ಮೂಲಕ ಹೆಚ್ಚಿನ ವಾಹನಗಳು ನಗರ ಪ್ರವೇಶಿಸುತ್ತಿವೆ. ಪಿಡಿಒ, ಗ್ರಾಮ ಲೆಕ್ಕಿಗರನ್ನು ಒಳಗೊಂಡ ಗ್ರಾಮ ಸಮಿತಿಗಳು ಈ ಕುರಿತು ನಿಗಾವಹಿಸಲು ಸೂಚಿಸಿದ್ದರೂ, ಹೆಚ್ಚಿನ ಫಲಿತಾಂಶ ದೊರೆತಿಲ್ಲ.

ಸಂಘ ಸಂಸ್ಥೆಗಳಿಗೆ ಕಡಿವಾಣಕ್ಕೆ ವಿರೋಧ: ಕೊರೊನಾ ನಿರ್ಬಂಧಗಳು ಆರಂಭವಾದ ನಂತರ ರಸ್ತೆ ಬದಿ, ಬಸ್‌ ನಿಲ್ದಾಣಗಳಲ್ಲಿ ನೆಲೆಸಿದ್ದ ನಿರ್ಗತಿಕರು, ಅಂದಿನ ದುಡಿಮೆ ಮಾಡಿ ಅಂದೇ ಊಟ ಮಾಡುತ್ತಿದ್ದ ಬಡವರು ಮತ್ತಿತರರಿಗೆ ಆರಂಭದ ದಿನಗಳಿಂದಲೇ ಸಂಘ, ಸಂಸ್ಥೆಗಳು, ಸಮಾಜ ಸೇವಕರು ಅನ್ನ, ನೀರು, ಮಾಸ್ಕ್‌ ವಿತರಣೆ ಮಾಡುತ್ತಾ ಬರುತ್ತಿದ್ದರು. ಇಂತಹ ಸಮಯದಲ್ಲಿ ಮನಸ್ಸೋ ಇಚ್ಛೆ ವಿತರಿಸುವ ಬದಲು ಪಾಲಿಕೆ ಮೂಲಕ ತಲುಪಿಸುವಂತೆ ಆಯುಕ್ತರು ಆದೇಶ ಹೊರಡಿಸಿದ್ದು ಹೊಸ ವಿವಾದ ಹುಟ್ಟುಹಾಕಿದೆ.

‘ಜಿಲ್ಲೆಯಲ್ಲಿ ಇದುವರೆಗೂ ಪಾಸಿಟಿವ್ ಪ್ರಕರಣಗಳು ವರದಿಯಾಗದೇ ಇರುವುದು ಸಮಾಧಾನ ತಂದಿದೆ. ಹಾಗಂತ ಯಾರೂ ಮೈಮರೆಯಬಾರದು. ಏ.14ರ ವರೆಗೂ ಮನೆಯಲ್ಲೇ ಇರಬೇಕು. ಜನರು ಸಹಕರಿಸಿದರೆ ಮುಂದಿನ ದಿನಗಳಲ್ಲಿ ನೆಮ್ಮದಿ ಕಾಣಲು ಸಾಧ್ಯ. ಅಗತ್ಯ ವಸ್ತುಗಳಿಗೆ ಕೊರತೆಯಾಗದಂತೆ ನೋಡಿಕೊಳ್ಳುತ್ತೇವೆ’ ಎನ್ನುತ್ತಾರೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್.

ಮುಖ್ಯ ರಸ್ತೆಗಳು, ಪ್ರಮುಖ ವ್ಯಾಪಾರ ವಹಿವಾಟಿನ ಸ್ಥಳಗಳಲ್ಲಿಅಂಗಡಿಗಳು ಮುಚ್ಚಿದ್ದರೂ, ಒಳ ಪ್ರದೇಶಗಳಲ್ಲಿ ತೆರೆದೇ ಇವೆ. ಇದು ಸಹ ಜಿಲ್ಲಾಡಳಿತಕ್ಕೆ ಸವಾಲಾಗಿದೆ. ಕೆಲವರು ಖಾಲಿ ರಸ್ತೆಗಳಲ್ಲಿ ವೇಗವಾಗಿ ವಾಹನ ಚಲಾಯಿಸುತ್ತಾ ಮೋಜು ಅನುಭವಿಸುತ್ತಿರುವ ಪ್ರಕರಣಗಳೂ ವರದಿಯಾಗುತ್ತಿವೆ. ನಿತ್ಯದ ಅಗತ್ಯ ವಸ್ತುಗಳ ಖರೀದಿ ಸಮಯದಲ್ಲಿ ಬಹುತೇಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT