31ಕ್ಕೆ ಶಿವಮೊಗ್ಗ ನಗರ ಪಾಲಿಕೆ ಚುನಾವಣೆ

7
ಒಟ್ಟು 35 ವಾರ್ಡ್‌ಗಳು, 228 ಮತಗಟ್ಟೆಗಳಲ್ಲಿ ಮತದಾನ, 2,74218 ಮತದಾರರು

31ಕ್ಕೆ ಶಿವಮೊಗ್ಗ ನಗರ ಪಾಲಿಕೆ ಚುನಾವಣೆ

Published:
Updated:

ಶಿವಮೊಗ್ಗ: ನಗರ ಪಾಲಿಕೆಗೆ ಎಲ್ಲ 35 ವಾರ್ಡ್‌ಗಳಿಗೂ ಇದೇ ತಿಂಗಳ 31ರಂದು ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ಪ್ರಕಟಣೆ ಹೊರಡಿಸಿದೆ.

ಮೀಸಲಾತಿ, ಕ್ಷೇತ್ರ ಪುನರ್‌ವಿಂಗಡಣೆಯ ನ್ಯೂನತೆ ಸರಿಪಡಿಸುವಂತೆ ಕೋರಿ ಹಲವರು ಹೈಕೋರ್ಟ್ ಮೊರೆ ಹೋಗಿದ್ದರು. ಎಲ್ಲ ಅರ್ಜಿಗಳನ್ನೂ ಕೋರ್ಟ್‌ ಗುರುವಾರ ವಜಾಗೊಳಿಸಿದ ಬೆನ್ನಿಗೇ ರಾಜ್ಯ ಚುನಾವಣಾ ಆಯೋಗ ಮತದಾನದ ದಿನ ನಿಗದಿಗೊಳಿಸಿ ಆದೇಶ ಹೊರಡಿಸಿದೆ.

ಆ.13ರಂದು ಜಿಲ್ಲಾಧಿಕಾರಿ ಚುನಾವಣಾ ಅಧಿಸೂಚನೆ ಹೊರಡಿಸಲಿದ್ದಾರೆ. ನೀತಿ ಸಂಹಿತೆಯೂ ಅಂದಿನಿಂದಲೇ ಜಾರಿಗೆ ಬರಲಿದೆ.

ನಾಮಪತ್ರ ಸಲ್ಲಿಸಲು 20 ಕೊನೆಯ ದಿನ. ನಾಮಪತ್ರ ಹಿಂದಕ್ಕೆ ಪಡೆಯಲು 23 ಕೊನೆಯ ದಿನ. 31ರಂದು ಬೆಳಿಗ್ಗೆ 7ರಿಂದ ಸಂಜೆ 5ರವರೆಗೆ ಮತದಾನ ಇರುತ್ತದೆ. ಯಾವುದಾದರು ವಾರ್ಡ್‌ಗಳಿಗೆ ಮರು ಮತದಾನ ಅಗತ್ಯ ಇದ್ದಲ್ಲಿ ಸೆ. 2ರಂದು ಬೆಳಿಗ್ಗೆ 7ರಿಂದ ಸಂಜೆ 5ರವರೆಗೆ ಅವಕಾಶ ಕಲ್ಪಿಸಲಾಗಿದೆ.

ಸೆ. 3ರಂದು ಮತ ಎಣಿಕೆ: ಜಿಲ್ಲಾ ಕೇಂದ್ರ ಸ್ಥಾನದಲ್ಲಿ ಸೆ. 3ರಂದು ಬೆಳಿಗ್ಗೆ 8ರಿಂದ ಮತ ಎಣಿಕೆ ನಡೆಯಲಿದೆ. ಅಂದೇ ಫಲಿತಾಂಶ ಪ್ರಕಟವಾಗಲಿದ್ದು, ನೀತಿ ಸಂಹಿತೆಯೂ ಕೊನೆಗೊಳ್ಳಲಿದೆ.

228 ಮತಗಟ್ಟೆಗಳು, 2,74218 ಮತದಾರರು: ಪಾಲಿಕೆಯ 35 ವಾರ್ಡ್‌ಗಳ ವ್ಯಾಪ್ತಿಯಲ್ಲಿ ಒಟ್ಟು 228 ಮತಗಟ್ಟೆ ಸ್ಥಾಪಿಸಲಾಗಿದೆ. 2,74218 ಮತದಾರರು ಮತ ಚಲಾಯಿಸಲು ಅರ್ಹತೆ ಪಡೆದಿದ್ದಾರೆ. ಅವರಲ್ಲಿ 1,35,524 ಪುರುಷ ಮತದಾರರು, 1,38,673 ಮಹಿಳಾ ಮತದಾರರು, 21 ತೃತೀಯ ಲಿಂಗಿಗಳು ಇದ್ದಾರೆ.

ಮತ ಯಂತ್ರಗಳ ಬಳಕೆ: ಈ ಚುನಾವಣೆಯಲ್ಲಿ ಮತಯಂತ್ರ ಬಲಸಲಾಗುತ್ತಿದೆ. ಈಗಾಗಲೇ ಐಎಎಸ್‌ ದರ್ಜೆಯ ಅಧಿಕಾರಿಗಳನ್ನು ಚುನಾವಣಾ ವೀಕ್ಷಕರಾಗಿ ನೇಮಿಸಲಾಗಿದ್ದು, ತಕ್ಷಣವೇ ಬ್ಯಾಲೆಟ್‌ ಯೂನಿಟ್‌, ಕಂಟ್ರೋಲ್‌ ಯೂನಿಟ್‌ಗಳ ತಪಾಸಣೆ ನಡೆಸಿ, ಯಂತ್ರಗಳನ್ನು ಸಿದ್ಧಪಡಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ.

₹3 ಲಕ್ಷ ಚುನಾವಣಾ ವೆಚ್ಚ: ಪಾಲಿಕೆ ಚುನಾವಣೆಗೆ ಸ್ಪರ್ಧಿಸುವ ಪ್ರತಿಯೊಬ್ಬ ಅಭ್ಯರ್ಥಿ ಗರಿಷ್ಠ ₨ 3 ಲಕ್ಷದವರೆಗೆ ವೆಚ್ಚ ಮಾಡಬಹುದು. ಅಭ್ಯರ್ಥಿಗಳ ಲೆಕ್ಕ ಪರಿಶೀಲಿಸಲು ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಜಂಟಿ ನಿಯಂತ್ರಕರು ಮತ್ತು ಉಪ ನಿಯಂತ್ರಕರನ್ನು ಚುನಾವಣಾ ವೆಚ್ಚ ವೀಕ್ಷಕರಾಗಿ ನೇಮಿಸಲಾಗಿದೆ.

ನೋಟಾ ಬಳಕೆ: ಈ ಬಾರಿಯ ಚುನಾವಣೆಯಲ್ಲಿ ಮತದಾರರಿಗೆ ನೋಟಾ (ಯಾರೊಬ್ಬರಿಗೂ ಮತ ನೀಡಲು ಇಚ್ಚೆ ಇರುವುದಿಲ್ಲ) ಚಲಾಯಿಸಲು ಅವಕಾಶ ನೀಡಲಾಗಿದೆ.

ಅಭ್ಯರ್ಥಿಗಳ ಹೆಸರಿನ ಮುಂದೆ ಭಾವಚಿತ್ರ: ಮತದಾರರಿಗೆ ಒಂದೇ ಹೆಸರಿನ ನಡುವೆ ಆಗಬಹುದಾದ ಗೊಂದಲ ತಪ್ಪಿಸಲು ಎಲ್ಲ ಅಭ್ಯರ್ಥಿಗಳ ಹೆಸರಿನ ಮುಂದೆ ಅವರ ಭಾವಚಿತ್ರ ಕಡ್ಡಾಯಗೊಳಿಸಲಾಗಿದೆ. ಇದರಿಂದ ಯಾವುದೇ ಗೊಂದಲಗಳಿಗೆ ಅವಕಾಶ ಇರುವುದಿಲ್ಲ. ಮತದಾರರಿಗೂ ವಾರ್ಡ್‌ ನಂಬರ್, ವಿಳಾಸ, ಮತದಾನದ ದಿನಾಂಕ ಇರುವ ಗುರುತಿನ ಚೀಟಿ ವಿತರಿಸಲು ಸೂಚಿಸಲಾಗಿದೆ.

ಸ್ಪರ್ಧಿಸುವ ಅಭ್ಯರ್ಥಿಯು ತನ್ನ ಹಿನ್ನೆಲೆ, ಚರಾಸ್ತಿ, ಸ್ಥಿರಾಸ್ತಿಗಳ ಜತೆಗೆ, ಸ್ವ ವಿವರ, ಆದಾಯದ ಮೂಲ, ವಿದ್ಯಾರ್ಥತೆಯನ್ನೂ ಕಡ್ಡಾಯವಾಗಿ ನಮೂದಿಸಲು ಪರಿಷ್ಕೃತ ನಮೂನೆಯಲ್ಲಿ ಪ್ರಮಾಣಪತ್ರ ಸಲ್ಲಿಸಬೇಕು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !