ವಿಜಯಪುರ ಮಹಾನಗರ ಪಾಲಿಕೆ; ಹೆಚ್ಚುತ್ತಿರುವ ಕಪ್ಪುಚುಕ್ಕೆ..!

7
ಬಿಜೆಪಿ ಸದಸ್ಯರ ಜಟಾಪಟಿಗೆ ಖಂಡನೆ; ವಿಜಯಪುರಿಗರಿಂದ ವ್ಯಾಪಕ ಆಕ್ರೋಶ

ವಿಜಯಪುರ ಮಹಾನಗರ ಪಾಲಿಕೆ; ಹೆಚ್ಚುತ್ತಿರುವ ಕಪ್ಪುಚುಕ್ಕೆ..!

Published:
Updated:
Deccan Herald

ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆ ಅಸ್ತಿತ್ವಕ್ಕೆ ಬಂದು ಐದು ವರ್ಷದ ಆಸುಪಾಸು. ಐದನೇ ಮೇಯರ್ ಆಡಳಿತ ಚಾಲ್ತಿಯಲ್ಲಿದೆ. ಈ ಅವಧಿಯಲ್ಲಿ ವಿಜಯಪುರದ ಸರ್ವಾಂಗೀಣ ಅಭಿವೃದ್ಧಿ ಅಷ್ಟಕ್ಕಷ್ಟೇ. ಆದರೆ ಪಾಲಿಕೆ ಆಡಳಿತಕ್ಕೆ ಮಾತ್ರ ಕಪ್ಪುಚುಕ್ಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ...

ಮೇಯರ್‌–ಉಪಮೇಯರ್‌ ಚುನಾವಣೆ ಸಂದರ್ಭ ಇದೂವರೆಗೂ ನಡೆದ ‘ಜಾತ್ರೆಗಳು’, ಅಧಿಕಾರಿಗಳು–ಚುನಾಯಿತರ ನಡುವಿನ ತಿಕ್ಕಾಟ, ಬಿಜೆಪಿಯಲ್ಲಿನ ಬಣ ರಾಜಕಾರಣ ಇಡೀ ಪಾಲಿಕೆ ಆಡಳಿತವನ್ನೇ ಹಳಿ ತಪ್ಪಿಸಿದೆ ಎಂಬ ದೂರು ನಗರದಲ್ಲಿ ವ್ಯಾಪಕವಾಗಿದೆ.

ಪಾಲಿಕೆಯಲ್ಲಿ ಚುನಾಯಿತ ಜನಪ್ರತಿನಿಧಿಗಳ ಆಡಳಿತ ಆರಂಭವಾದ ದಿನದಿಂದ ಹಿಡಿದು ಇಲ್ಲಿಯವರೆಗೂ ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ, ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಬೆಂಬಲಿಗರ ನಡುವೆಯೇ ಅಧಿಕಾರ ಹಂಚಿಕೆಯಾಗಿದೆ. ಬಹುತೇಕ ಸದಸ್ಯರು ಈ ಮೂವರ ಬೆಂಬಲಿಗರು.

‘ಈಚೆಗಿನ ದಿನಗಳಲ್ಲಿ ಪಾಲಿಕೆಯ ಸಾಮಾನ್ಯ ಸಭೆ ಅಪರೂಪಕ್ಕೊಮ್ಮೆ ನಡೆದರೂ; ಅರ್ಥಪೂರ್ಣವಾಗಿ ನಡೆದ ಇತಿಹಾಸವಿಲ್ಲ. ನಗರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಯಾವೊಂದು ಚರ್ಚೆಯೂ ನಡೆಯುತ್ತಿಲ್ಲ. ಪ್ರತಿಯೊಬ್ಬ ಸದಸ್ಯರು ತಮ್ಮ ವೈಯಕ್ತಿಕಕ್ಕೆ ಒತ್ತು ಕೊಡುತ್ತಿದ್ದಾರೆ. ಸದಸ್ಯರ ವೈಯಕ್ತಿಕ ಪ್ರತಿಷ್ಠೆ, ಬಿಜೆಪಿ ಬಣ ರಾಜಕಾರಣಕ್ಕೆ ಸಭೆ ಬಲಿಯಾದದ್ದೇ ಹೆಚ್ಚು’ ಎಂಬ ದೂರು ಎಲ್ಲೆಡೆ ಕೇಳಿ ಬರುತ್ತಿದೆ.

24X7 ಕುಡಿಯುವ ನೀರು ಪೂರೈಸುವ ‘ಅಮೃತ್‌’ ಯೋಜನೆ ನನೆಗುದಿಗೆ ಬಿದ್ದಿದೆ. ಒಳಚರಂಡಿ ನಿರ್ಮಾಣದ ಯೋಜನೆ ಪೂರ್ಣಗೊಳ್ಳಲು ಇನ್ನೂ ಎಷ್ಟು ವರ್ಷ ಬೇಕು ಎಂಬುದು ನಿರ್ವಹಣೆಯ ಹೊಣೆ ಹೊತ್ತಿರುವ ಅಧಿಕಾರಿಗಳಿಗೆ ಗೊತ್ತಿಲ್ಲ... ಯಾವೊಂದು ಅಭಿವೃದ್ಧಿ ನಡೆದಿಲ್ಲ.

2012ರಿಂದ ಈಚೆಗೆ ₹ 500 ಕೋಟಿ ಅನುದಾನ ಪಾಲಿಕೆ ಆಡಳಿತಕ್ಕೆ ಬಂದರೂ; ಇಡೀ ವಿಜಯಪುರ ಗುಂಡಿಮಯ. ಒಂದು ರಸ್ತೆಯೂ ಸರಿಯಿಲ್ಲ. ಇಂಥ ಹೊತ್ತಲೂ ಅಪರೂಪಕ್ಕೊಮ್ಮೆ ನಡೆಯುವ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಸದಸ್ಯರು ಹೊಡೆದಾಡಲು ಮುಂದಾಗುತ್ತಾರೆ ಎಂದರೇ ಇದು ವಿಜಯಪುರಿಗರಿಗೆ ಕಾರ್ಪೊರೇಟರ್‌ಗಳು ಮಾಡಿದ ಅಪಮಾನ ಎಂಬ ಆಕ್ರೋಶ ಶನಿವಾರ ನಗರದ ಎಲ್ಲೆಡೆ ವ್ಯಕ್ತವಾಯ್ತು.

ಬಿಜೆಪಿ ಬಣ ತಿಕ್ಕಾಟ

ವಿಧಾನಸಭಾ ಚುನಾವಣೆ ಪೂರ್ವದಿಂದ ಆರಂಭಗೊಂಡ ಬಿಜೆಪಿಯ ಬಣ ತಿಕ್ಕಾಟ ಇದೀಗ ತಾರಕಕ್ಕೇರಿದೆ. ಒಂದೆಡೆ ನಗರ ಮಂಡಲಕ್ಕೆ ನುಂಗಲಾರದ ಬಿಸಿ ತುಪ್ಪವಾಗಿ ಕಾಡಿದರೆ; ಇನ್ನೊಂದೆಡೆ ನಗರದ ಅಭಿವೃದ್ಧಿಗೆ ಕಂಟಕವಾಗಿ ಬೇತಾಳದಂತೆ ಕಾಡುತ್ತಿದೆ.

ಬಿಜೆಪಿಯ ಆಂತರಿಕ ಸಮಸ್ಯೆ ನಗರದ ಅಭಿವೃದ್ಧಿಗೆ ಮುಳುವಾಗಿದೆ ಎಂಬ ದೂರು ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೀಡಾಗುತ್ತಿದೆ. ‘ನಾವ್‌ ಇವರಿಗೆ ಮತ ಹಾಕಿದ್ದೇ ತಪ್ಪಾಯಿತಾ ? ಎಂಬ ಪಶ್ಚಾತ್ತಾಪ ಇದೀಗ ನಮ್ಮನ್ನು ಬೆಂಬಿಡದೆ ಕಾಡಲಾರಂಭಿಸಿದೆ’ ಎಂಬ ಮಾತುಗಳು ಪ್ರಜ್ಞಾವಂತ ಮತದಾರರ ವಲಯದಲ್ಲಿ ಚರ್ಚೆಗೀಡಾಗುತ್ತಿವೆ.

ಈಚೆಗೆ ನಡೆದ ನಾಲ್ಕೈದು ಸಭೆಗಳಲ್ಲಿ ಬಿಜೆಪಿ ಬಣ ರಾಜಕಾರಣವೇ ಢಾಳಾಗಿ ಬಿಂಬಿತಗೊಂಡಿದೆ. ಪ್ರತಿ ಸಭೆಯಲ್ಲೂ ಪರಸ್ಪರ ಪರ–ವಿರೋಧ ವ್ಯಕ್ತವಾಗುವುದು ಮಾಮೂಲಿಯಾಗಿದೆ. ಬಸನಗೌಡ ಪಾಟೀಲ ಯತ್ನಾಳ ಶಾಸಕರಾಗಿ ಆಯ್ಕೆಯಾದ ಬಳಿಕ ಪ್ರತಿರೋಧ ಹೆಚ್ಚಿದೆ.

ಯತ್ನಾಳ–ಅಪ್ಪು ಬೆಂಬಲಿಗರ ಸ್ವಾಮಿ ನಿಷ್ಠೆ, ವೈಯಕ್ತಿಕ ಪ್ರತಿಷ್ಠೆಗೆ ಪಾಲಿಕೆ ಆಡಳಿತದ ಸಾಧನೆ ಶೂನ್ಯವಾಗುತ್ತಿದೆ. ಪಕ್ಷದೊಳಗಿನ ತಿಕ್ಕಾಟ ಪಾಲಿಕೆ ಆಡಳಿತದಲ್ಲೂ ನುಸುಳಿದ್ದು, ವಿಜಯಪುರಿಗರ ಪಾಲಿಗೆ ಶಾಪವಾಗಿ ಪರಿಣಮಿಸಿದೆ ಎಂದು ಹೆಸರು ಬಹಿರಂಗಪಡಿಸಲಿಚ್ಚಿಸದ ನಗರದ ಹಿರಿಯರೊಬ್ಬರು ಬೇಸರ ವ್ಯಕ್ತಪಡಿಸಿದರು.

‘ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಶನಿವಾರ ನಡೆದ ಘಟನೆ ಕ್ಷಮೆಗೆ ಅರ್ಹವಲ್ಲ. ಆರಂಭದಲ್ಲಿ ಸದಸ್ಯರಿಬ್ಬರ ನಡುವಿನ ಜಗಳದಂತೆ ಗೋಚರಿಸಿದರೂ; ಇದೀಗ ಕಾಣದ ಕೈಗಳ ಕಸರತ್ತು ಬಿರುಸುಗೊಂಡಿದೆ. ಇವರ್‌್ಯಾರು ನಗರಕ್ಕೆ ಶೋಭೆ ತರುವವರಲ್ಲ.

ನಾನು ಹಲ ಸಾಮಾನ್ಯ ಸಭೆಗಳಲ್ಲಿ ಹಾಜರಿರುವೆ. ಅಪ್ಪು–ಯತ್ನಾಳ ಬೆಂಬಲಿಗರು ಪ್ರತಿ ಸಭೆಯಲ್ಲೂ ನಗುತ್ತಲೇ, ಕಣ್ಣು ಮಿಟುಕಿಸುತ್ತಲೇ ತಮ್ಮ ತಮ್ಮ ನಾಯಕರ ಪರ ಬ್ಯಾಟ್‌ ಬೀಸುತ್ತಿದ್ದರು. ಆದರೆ ಇಂದು ಕೈ ಎತ್ತಿ ಬಡಿದಾಡಲು ಮುಂದಾಗಿದ್ದು ನೋಡಿದರೇ ನಾಚಿಕೆ ಬರುತ್ತದೆ. ಈ ಘಟನೆ ನಡೆದ ಕೆಲ ಹೊತ್ತಿಗೆ ಪಾಲಿಕೆ ಹೊರಭಾಗದಲ್ಲಿ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದನ್ನು ಗಮನಿಸಿದರೆ, ನಾವು ಎಲ್ಲಿದ್ದೇವೆ ಎಂಬುದೇ ಅರಿಯದಾಯಿತು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !