ಶಿವಮೊಗ್ಗ: ಭಾರಿ ಕುತೂಹಲ ಮೂಡಿಸಿರುವ ಶಿವಮೊಗ್ಗ ಮಹಾನಗರ ಪಾಲಿಕೆ ಚುನಾವಣಾ ಫಲಿತಾಂಶ ಸೋಮವಾರ ಹೊರಬೀಳಲಿದೆ. ಯಾವ ಪಕ್ಷಕ್ಕೆ ಎಷ್ಟೆಷ್ಟು ಸ್ಥಾನಗಳು ಬರಲಿವೆ? ಯಾವ ಪಕ್ಷಕ್ಕೆ ಬಹುಮತ ಬರಬಹುದು? ಪಕ್ಷೇತರರು ನಿರ್ಣಾಯಕ ಪಾತ್ರ ವಹಿಸಲಿದ್ದಾರಾ? ಅಥವಾ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಲಿದೆಯಾ? ಎಂಬ ಹತ್ತು ಹಲವು ಪ್ರಶ್ನೆಗಳಿಗೆ ಬೆಳಿಗ್ಗೆ 11ರೊಳಗೆ ಸ್ಪಷ್ಟ ಉತ್ತರ ಸಿಗಲಿದೆ.
ಈ ಬಾರಿಯ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅತ್ಯಂತ ಕಡಿಮೆ ಶೇ 58.63 ರಷ್ಟು ಮತದಾನ ಆಗಿರುವುದರಿಂದ ಫಲಿತಾಂಶದ ಬಗ್ಗೆ ನಾನಾ ರೀತಿಯ ವಿಶ್ಲೇಷಣೆಗಳು ಕೇಳಿಬರುತ್ತಿವೆ. ಒಂದೆಡೆ ಈ ಬಾರಿಯೂ ಸಮ್ಮಿಶ್ರ ಪಕ್ಷಗಳೇ ಅಧಿಕಾರದ ಚುಕ್ಕಾಣಿ ಹಿಡಿಯಲಿವೇ ಎಂಬ ಮಾತುಗಳು ಕೇಳಿ ಬರುತ್ತಿದ್ದರೆ, ಮತ್ತೊಂದೆಡೆ ಸಮೀಕ್ಷೆಗಳು ಮತ್ತು ವಿಶ್ಲೇಷಣೆಗಳು ಸುಳ್ಳಾಗಿ ಏಕ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಆದರೆ, ಮತದಾರರ ಅಂತರಾಳ ಅರಿಯಬೇಕಾದರೆ ಸೋಮವಾರ ಬೆಳಿಗ್ಗೆ 11ರವರೆಗೆ ಕಾಯಲೇಬೇಕು.
ಬೆಳಿಗ್ಗೆ 8ಕ್ಕೆ ಮತ ಎಣಿಕೆ ಆರಂಭ:ಈಗಾಗಲೇ ನಗರದ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಮತ ಎಣಿಕೆಗಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೆಳಿಗ್ಗೆ 8ಕ್ಕೆ ಮತ ಎಣಿಕೆ ಕಾರ್ಯ ಆರಂಭವಾಗಲಿದ್ದು, 2 ರಿಂದ 3 ತಾಸಿನೊಳಗಾಗಿ ಎಲ್ಲಾ ವಾರ್ಡ್‌ಗಳಿಗೆ ಯಾರು ಅಧಿಪತಿಗಳು ಎಂಬುದು ಬಹಿರಂಗವಾಗಲಿದೆ.
ಮತ ಎಣಿಕೆ ಕಾರ್ಯಕ್ಕಾಗಿ ಒಟ್ಟು 147 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮತ ಎಣಿಕೆಗಾಗಿ ಒಂದು ಕೊಠಡಿಯಲ್ಲಿ 7 ಟೇಬಲ್‌ನಂತೆ ಏಳು ಕೊಠಡಿಗಳಲ್ಲಿ 49 ಟೇಬಲ್‌ಗಳನ್ನು ಇಡಲಾಗಿದೆ. ಒಟ್ಟು 35 ವಾರ್ಡ್‌ಗಳಿಗೆ 7 ಮಂದಿ ಮತ ಎಣಿಕೆ ಮೇಲ್ವಿಚಾರಕರನ್ನು ನೇಮಿಸಲಾಗಿದ್ದು, ಇದರಲ್ಲಿ ಒಬ್ಬ ಮತ ಎಣಿಕೆ ಮೇಲ್ವಿಚಾರಕನಿಗೆ 5 ವಾರ್ಡ್‌ಗಳ ಮತ ಎಣಿಕೆ ಜವಾಬ್ದಾರಿ ವಹಿಸಲಾಗಿದೆ.
ಬಿಗಿ ಬಂದೋಬಸ್ತ್:ಮತ ಎಣಿಕೆ ಕೇಂದ್ರದ ಸುತ್ತ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ ಭದ್ರತೆಯ ಜವಾಬ್ದಾರಿ ವಹಿಸಿದ್ದಾರೆ. ಒಟ್ಟು 350 ಮಂದಿ ಪೊಲೀಸರನ್ನು ಮತ ಎಣಿಕೆ ಸಂದರ್ಭದಲ್ಲಿ ಭದ್ರತಾ ವ್ಯವಸ್ಥೆಗೆ ಬಳಸಿಕೊಳ್ಳಲಾಗುತ್ತಿದೆ. ಇದರಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸೇರಿದ್ದಾರೆ.
ಎಲ್ಲೆಲ್ಲಿ ಪಾರ್ಕಿಂಗ್ ವ್ಯವಸ್ಥೆ: ಮತ ಎಣಿಕೆ ಕಾರ್ಯ ನಡೆಯುವ ಸಹ್ಯಾದ್ರಿ ಕಲಾ ಕಾಲೇಜು ಸಮೀಪಕ್ಕೆ ಕೇವಲ ಚುನಾವಣಾ ಅಧಿಕಾರಿಗಳು, ಚುನಾವಣಾ ವೀಕ್ಷಕರು ಮತ್ತು ರಕ್ಷಣಾ ಅಧಿಕಾರಿಗಳಿಗೆ ಮಾತ್ರವೇ ಪ್ರವೇಶ ಕಲ್ಪಿಸಲಾಗಿದೆ. ಉಳಿದಂತೆ ಮತ ಎಣಿಕೆ ಕೇಂದ್ರಕ್ಕೆ ಬರುವ ಕಾರ್ಯಕರ್ತರು, ಅಭ್ಯರ್ಥಿಗಳು ಹಾಗೂ ಬೆಂಬಲಿಗರಿಗಾಗಿ ಸಹ್ಯಾದ್ರಿ ವಿಜ್ಞಾನ ಕಾಲೇಜು ಮುಂಭಾಗದ ಕ್ರೀಡಾಂಗಣದಲ್ಲಿ ಹಾಗೂ ಅಧಿಕಾರಿಗಳಿಗೆ ಸಹ್ಯಾದ್ರಿ ಕಾಲೇಜು ಹಿಂಭಾಗದ ಕ್ರೀಡಾಂಗಣದಲ್ಲಿ ಪಾರ್ಕಿಂಗ್‌ಗೆ ಅವಕಾಶ ಕಲ್ಪಿಸಲಾಗಿದೆ.
ಮೂವರಿಗಷ್ಟೇ ಪ್ರವೇಶ: ಮತ ಎಣಿಕೆಗೆ ಅಭ್ಯರ್ಥಿಯೊಡನೆ ಹೆಚ್ಚಿನ ಮಂದಿಗೆ ಅವಕಾಶ ಕಲ್ಪಿಸಿದರೆ ಗೊಂದಲ ವಾತಾವರಣ ನಿರ್ಮಾಣವಾಗುತ್ತದೆ. ಹಾಗಾಗಿ ಈ ಸಮಸ್ಯೆಗೆ ಕಡಿವಾಣ ಹಾಕಲು ಹಾಗೂ ಹೆಚ್ಚಿನ ಭದ್ರತೆಯ ದೃಷ್ಟಿಯಿಂದ ಈ ಬಾರಿ ಅಭ್ಯರ್ಥಿಯ ಜತೆ ಕೇವಲ ಇಬ್ಬರು ಬೆಂಬಲಿಗರಿಗಷ್ಟೇ ಮತ ಎಣಿಕೆ ಕೇಂದ್ರಕ್ಕೆ ತೆರಳಲು ಅವಕಾಶ ಕಲ್ಪಿಸಲಾಗಿದೆ. ಇದರಲ್ಲಿ ಒಬ್ಬರು ಬೂತ್ ಏಜೆಂಟ್ ಇರಲಿದ್ದಾರೆ. ಉಳಿದಂತೆ ಮತ ಎಣಿಕೆ ಕಾರ್ಯ ನಡೆಯುವ ಸಹ್ಯಾದ್ರಿ ಕಾಲೇಜಿನ ಮುಂಭಾಗದ ಬಿ.ಎಚ್.ರಸ್ತೆಯಲ್ಲಿ ವಾಹನಗಳು ಎಂದಿನಂತೆ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ.
ಅಂಕಿ ಅಂಶ
350– ಪೊಲೀಸರ ನಿಯೋಜನೆ
8– ಸಬ್ ಇನ್‌ಸ್ಪೆಕ್ಟರ್
4 – ಇನ್‌ಸ್ಪೆಕ್ಟರ್
37– ಪಿಎಸ್‌ಐ
290– ಕಾನ್‌ಸ್ಟೆಬಲ್
40– ಗೃಹರಕ್ಷಕ ದಳದ ಸಿಬ್ಬಂದಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.