ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇ 2ಕ್ಕೆ ಚಿರು–ಮೇಘನಾ ರಾಜ್‌ ವಿವಾಹ

ಮದುವೆ ನಂತರವೂ ನಟನೆ ಮುಂದುವರಿಸುವೆ: ಮೇಘನಾ
Last Updated 24 ಏಪ್ರಿಲ್ 2018, 10:50 IST
ಅಕ್ಷರ ಗಾತ್ರ

ಬೆಂಗಳೂರು: ನಟ ಚಿರಂಜೀವಿ ಸರ್ಜಾ ಮತ್ತು ಬಹುಭಾಷಾ ನಟಿ ಮೇಘನಾ ರಾಜ್ ಅವರು ಮೇ 2ರಂದು ಸಪ್ತಪದಿ ತುಳಿಯಲಿದ್ದಾರೆ.

ಅರಮನೆ ಮೈದಾನದ ವೈಟ್‌ ಪೆಟಲ್ಸ್‌ನಲ್ಲಿ ಬೆಳಿಗ್ಗೆ 10.30ರಿಂದ 11ಗಂಟೆ ನಡುವಿನ ಶುಭಮುಹೂರ್ತದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಸಂಜೆ 7.30ಕ್ಕೆ ಆರತಕ್ಷತೆ ನಿಗದಿಯಾಗಿದೆ. ಮೇಘನಾ ಅವರು ಹಿರಿಯ ಕಲಾವಿದರಾದ ಪ್ರಮೀಳಾ ಜೋಷಾಯ್‌ ಮತ್ತು ಎಂ.ಕೆ. ಸುಂದರ್‌ರಾಜ್‌ ಅವರ ಪುತ್ರಿ. ಚಿರಂಜೀವಿ ಸರ್ಜಾ ಹಿರಿಯ ನಟ ಅರ್ಜುನ್‌ ಸರ್ಜಾ ಅವರ ಸೋದರ ಅಳಿಯ (ಅಕ್ಕನ ಮಗ).

ಹಿರಿಯ ನಿರ್ಮಾಪಕ ದ್ವಾರಕೀಶ್‌ ನಿರ್ಮಾಣದ ‘ಆಟಗಾರ’ ಚಿತ್ರದಲ್ಲಿ ಈ ಇಬ್ಬರು ಒಟ್ಟಿಗೆ ಅಭಿನಯಿಸಿದ್ದರು. ಬಹುಕಾಲದ ಸ್ನೇಹಿತರಾಗಿದ್ದ ಈ ಜೋಡಿಯ ನಿಶ್ಚಿತಾರ್ಥ ಕಳೆದ ವರ್ಷದ ಅಕ್ಟೋಬರ್‌ನಲ್ಲಿ ನೆರವೇರಿತ್ತು.

ಮೇಘನಾ ಚಿತ್ರರಂಗ ಪ್ರವೇಶಿಸಿದ್ದು ಮಲಯಾಳ ಸಿನಿಮಾ ಮೂಲಕ. ಬಳಿಕ ತಮಿಳು, ಕನ್ನಡ ಮತ್ತು ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ. ಹಾಗಾಗಿ, ದಕ್ಷಿಣ ಭಾರತ ಚಿತ್ರರಂಗದ ಪ್ರಮುಖರು ತಾರಾ ಜೋಡಿಯ ಮದುವೆ ಸಂಭ್ರಮಕ್ಕೆ ಸಾಕ್ಷಿಯಾಗುವ ನಿರೀಕ್ಷೆಯಿದೆ.

‘ಪ್ರಮೀಳಾ ಜೋಷಾಯ್ ಅವರು ಕ್ರಿಶ್ಚಿಯನ್ ಆಗಿರುವುದರಿಂದ ಏ. 29ರಂದು ಕೋರಮಂಗಲದ ಸಂತ ಆ್ಯಂಟನಿ ಚರ್ಚ್‌ನಲ್ಲಿ ರೋಮನ್‌ ಕ್ಯಾಥೋಲಿಕ್‌ ಪದ್ಧತಿಯಂತೆ ವಿವಾಹ ನಡೆಯಲಿದೆ. ಮೇ 2ರಂದು ಹಿಂದೂ ಸಂಪ್ರದಾಯದಂತೆ ಮದುವೆ ನೆರವೇರಲಿದೆ’ ಎಂದು ಸುಂದರ್‌ರಾಜ್‌ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಬುಧವಾರದಿಂದಲೇ ನಮ್ಮ ಮನೆಯಲ್ಲಿ ಮದುವೆ ಕಾರ್ಯಕ್ರಮಗಳು ಆರಂಭವಾಗಲಿವೆ. ಚಪ್ಪರ‍ ಪೂಜೆ, ಅರಿಸಿನ ಪೂಜೆ, ಬಳೆ ಶಾಸ್ತ್ರ, ಮೆಹೆಂದಿ ಕಾರ್ಯಕ್ರಮ, ವರಪೂಜೆ ನಡೆಯಲಿದೆ. ಒಂದು ವಾರವಿಡೀ ಮದುವೆ ಸಂಭ್ರಮ ಮನೆ ಮಾಡಲಿದೆ’ ಎಂದರು ಮೇಘನಾ.

‘ಮದುವೆ ನಂತರವೂ ಸಿನಿಮಾಗಳಲ್ಲಿ ನಟಿಸುತ್ತೇನೆ. ಯಾವುದೇ ಕಾರಣಕ್ಕೂ ನಟನೆಯಿಂದ ಹಿಂದೆ ಸರಿಯುವುದಿಲ್ಲ. ಚಿರು ಕೂಡ ಇದಕ್ಕೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ವಿವಾಹ ಕಾರ್ಯಕ್ರಮ ಮುಗಿದ ಎರಡು ವಾರದ ಬಳಿಕ ನಾವಿಬ್ಬರು ಒಪ್ಪಿಕೊಂಡಿರುವ ಸಿನಿಮಾಗಳ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಿದ್ದೇವೆ’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT