ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಂಡಾಗಳಿಗೆ ಬರುವವರ ಮೇಲೆ ನಿಗಾಕ್ಕೆ ಸೂಚನೆ

Last Updated 27 ಮಾರ್ಚ್ 2020, 14:40 IST
ಅಕ್ಷರ ಗಾತ್ರ

ವಿಜಯಪುರ: ‘ಜಿಲ್ಲೆಯ ಪ್ರತಿ ಗ್ರಾಮ ಹಾಗೂ ತಾಂಡಾಗಳಿಗೆ ಬೇರೆ ಬೇರೆ ರಾಜ್ಯಗಳಿಂದ ಬಂದಿರುವ ಜನರನ್ನು ಗುರುತಿಸಬೇಕು’ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ ‘ಅಪಾಯಕಾರಿ ರೀತಿಯಲ್ಲಿ ಬೆಳೆಯುತ್ತಿರುವ ಕೊರೊನಾ ಸೋಂಕು ನಿಯಂತ್ರಣದ ಅಂಗವಾಗಿ ಜಿಲ್ಲೆಯ ಎಲ್ಲ ಗ್ರಾಮ ಮತ್ತು ತಾಂಡಾಗಳಿಗೆ ದೂರುಗಳ ಆಧಾರದ ಮೇಲೆ ಭೇಟಿ ನೀಡಿ, ವಿವಿಧ ರಾಜ್ಯಗಳಿಂದ ಬಂದಿರುವ ಜನರನ್ನು ಗುರುತಿಸಬೇಕು. ಕೊರೊನಾ ಲಕ್ಷಣಗಳ ಬಗ್ಗೆ ತೀವ್ರ ನಿಗಾ ಜೊತೆಗೆ, ಅವಶ್ಯಕತೆ ಇದ್ದಲ್ಲಿ ಸೂಕ್ತ ಚಿಕಿತ್ಸೆ ಒದಗಿಸಬೇಕು. ಈ ಮೂಲಕ ನಾಗರಿಕರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು’ ಎಂದರು.

‘ಮಹಾರಾಷ್ಟ್ರ, ಗೋವಾ, ಮಧ್ಯಪ್ರದೇಶ, ರಾಜಸ್ಥಾನ ಭಾಗಗಳಿಂದ ಕಾರ್ಮಿಕರನ್ನು ಕರೆತಂದು ಕೃಷ್ಣಾಭಾಗ್ಯ ಜಲನಿಗಮ, ಪಂಚಾಯತ್‌ರಾಜ್ ಎಂಜಿನಿಯರಿಂಗ್‌ ವಿಭಾಗ ಸೇರಿದಂತೆ ಇತರ ಇಲಾಖೆಗಳ ಮೂಲಕ ಅಭಿವೃದ್ಧಿ ಕಾರ್ಯಕ್ಕೆ ಬಳಸಿಕೊಂಡಿರುವ ಬಗ್ಗೆ ಗಮನಕ್ಕೆ ಬಂದಿದೆ. ಅಂತಹ ಕಾರ್ಮಿಕರ ಕುರಿತು 12 ಗಂಟೆಯೊಳಗೆ ಮಾಹಿತಿ ಒದಗಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ತಿಳಿಸಿದರು.

‘ಈ ಕಾರ್ಮಿಕರ ಆರೋಗ್ಯ ನಿಗಾ ಜೊತೆಗೆ, ಊಟ, ಉಪಾಹಾರ, ನೀರು ಮತ್ತು ಆಶ್ರಯದ ಸೌಲಭ್ಯ ಕಲ್ಪಿಸಲು ಆಯಾ ಇಲಾಖೆಯ ಆಧಿಕಾರಿಗಳು ಕ್ರಮಕೈಗೊಳ್ಳಬೇಕು. ಅಗತ್ಯ ಬಿದ್ದಲ್ಲಿ ಜಿಲ್ಲಾಡಳಿತ ವತಿಯಿಂದಲೂ ಉಪಾಹಾರದ ವ್ಯವಸ್ಥೆ ಮಾಡಲಾಗುವುದು’ ಎಂದರು.

‘ಮಹಿಳೆಯರ ಸಮಸ್ಯೆಗಳಿಗೆ ಸ್ಪಂದಿಸುವ ಉದ್ದೇಶದಿಂದ ಆಯಾ ವಾರ್ಡ್‌ವಾರು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಮೇಲ್ವಿಚಾರಕರನ್ನು ನಿಯೋಜಿಸಲು ನಿರ್ಣಯ ಕೈಗೊಳ್ಳಲಾಗಿದೆ’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೋವಿಂದ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಔದ್ರಾಮ, ಉಪವಿಭಾಗಾಧಿಕಾರಿ ಸೋಮಲಿಂಗ ಗೆಣ್ಣೂರ, ಡಿವೈಎಸ್‌ಪಿ ಲಕ್ಷ್ಮೀ ನಾರಾಯಣ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಂದ್ರ ಕಾಪ್ಸೆ, ವಿಶ್ವ ಆರೋಗ್ಯ ಸಂಸ್ಥೆಯ ಅಧಿಕಾರಿ ಡಾ.ಮುಕುಂದ ಗಲಗಲಿ, ಜಿಲ್ಲಾ ಆಸ್ಪತ್ರೆ ಶಸ್ತ್ರ ಚಿಕಿತ್ಸಕ ಡಾ.ಶರಣಪ್ಪ ಕಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT