ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ನಿಯನ್ನೇ ಕೊಲೆಗೈದ ಪೊಲೀಸ್‌ ಕಾನ್‌ಸ್ಟೇಬಲ್‌

Last Updated 4 ಏಪ್ರಿಲ್ 2020, 15:32 IST
ಅಕ್ಷರ ಗಾತ್ರ

ವಿಜಯಪುರ: ತನ್ನ ಅಂಗವಿಕಲ ಪತ್ನಿಯನ್ನು ಕೊಲೆ ಮಾಡಿದ ಆರೋಪದ ಮೇರೆಗೆ ನಗರದ ಡಿಎಆರ್ ಪೊಲೀಸ್‌ ಕಾನ್‌ಸ್ಟೆಬಲ್‌ ನಿಂಗರಾಜ ವಾಲಿಕಾರ ಬಂಧನಕ್ಕೆ ಒಳಗಾಗಿದ್ದಾನೆ.

ಫೇಸ್‌ಬುಕ್‌ ಮೂಲಕ ಪರಿಚಯವಾಗಿ, ಬಳಿಕ ಪರಸ್ಪರ ಪ್ರೇಮಿಸಿದ ಆರೋಪಿ ನಿಂಗರಾಜ ವಾಲಿಕಾರ ಮತ್ತು ಸುಮಂಗಲಾ 2017ರಲ್ಲಿ ವಿವಾಹವಾಗಿದ್ದರು. ಆದರೆ, ಗಂಡ–ಹೆಂಡತಿ ನಡುವೆ ಹೊಂದಾಣಿಕೆಯಾಗದೇ ಪರಸ್ಪರ ಜಗಳವಾಡುತ್ತಿದ್ದರು ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಪಮ್‌ ಅಗರವಾಲ್‌ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆರೋಪಿ ವಾಲಿಕಾರ ಪ್ರಕರಣದ ಇತರೆ ಆರೋಪಿಗಳಾದ ಪರಸಪ್ಪ ಹರಿಜನ, ತಾನಾಜಿ ಕ್ವಾಟೆ, ಬಾಬು ನದಾಫ್‌, ತೀರ್ಥಪ್ಪ ಮಾದರ, ರಮೇಶ ವಾಲಿಕಾರ ಮತ್ತು ಪ್ರವೀಣ ಸಾತಿಹಾಳ ಅವರಿಗೆ ಪತ್ನಿಯನ್ನು ಕೊಲೆ ಮಾಡುವ ಸಂಬಂಧ ₹ 2 ಲಕ್ಷ ಸುಪಾರಿ ನೀಡಿದ್ದ ಎಂದು ಹೇಳಿದರು.

ಸ್ನೇಹಿತರ ಜೊತೆಗೂಡಿ ನಗರದ ಖಾಜಾ ಅಮೀನ್‌ ದರ್ಗಾ ಹತ್ತಿರ ಇರುವ ಮನೆಯಲ್ಲಿ ಏಪ್ರಿಲ್‌ 2ರಂದು ಪತ್ನಿ ಸುಮಂಗಲಾ ಅವರನ್ನು ಕೊಲೆ ಮಾಡಿ, ಬಳಿಕ ಶವವನ್ನು ಗೋಣಿಚೀಲದಲ್ಲಿ ತುಂಬಿಕೊಂಡು ಬೈಕಿನಲ್ಲಿ ಕೊಂಡೊಯ್ದು ಮಸೂತಿ ಗ್ರಾಮದ ನಿರ್ಜನ ಪ್ರದೇಶದಲ್ಲಿ ಹೂತು ಹಾಕಿದ್ದರು ಎಂದು ತಿಳಿಸಿದರು.

ಬಳಿಕ ಪತ್ನಿ ಕಾಣೆಯಾಗಿದ್ದಾಳೆ ಎಂದು ಹೇಳಿಕೊಂಡು ಅಡ್ಡಾಡುತ್ತಿದ್ದ ಆರೋಪಿಯ ಬಗ್ಗೆ ಅನುಮಾನ ಬಂದು ವಿಚಾರಿಸಿದಾಗ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ ಎಂದು ಹೇಳಿದರು.

ಆರೋಪಿಯು ಮೂಲತ ಕೊಲ್ಹಾರ ತಾಲ್ಲೂಕಿನ ತೇಲಗಿ ಗ್ರಾಮದವನಾಗಿದ್ದು, ಹಾಲಿ ವಿಜಯಪುರದ ಪೊಲೀಸ್‌ ಹೆಡ್‌ ಕ್ವಾಟರ್ಸ್‌ನಲ್ಲಿ ವಾಸವಾಗಿದ್ದನು. ಡಿಎಆರ್‌ ಡಾಗ್‌ ಸ್ಕ್ವಾಡ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದನು ಎಂದು ತಿಳಿಸಿದರು.

ಈ ಸಂಬಂಧ ಆದರ್ಶನ ನಗರ ಪೊಲೀಸ್‌ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT