‘ಬಾಲ್ಯ ವಿವಾಹ ಕಾನೂನಿನಡಿ ಅಪರಾಧ’

7
ಹೊಸಕಬ್ಬಾಳುವಿನಲ್ಲಿ ಜಾಗೃತಿ ಕಾರ್ಯಕ್ರಮ ಮತ್ತು ಜಾನಪದ ಗಾಯನ

‘ಬಾಲ್ಯ ವಿವಾಹ ಕಾನೂನಿನಡಿ ಅಪರಾಧ’

Published:
Updated:
Prajavani

ಕನಕಪುರ: ಬಾಲ್ಯ ವಿವಾಹ ಪದ್ಧತಿಯು ಕಾನೂನಿಗೆ ವಿರುದ್ಧವಾದುದು ಹಾಗೂ ಈ ರೀತಿ ವಿವಾಹವಾಗುವ ವಧು ವರರು ಇನ್ನು ವಯಸ್ಕರಾಗದ ಕಾರಣ ಅವರ ಆರೋಗ್ಯದ ಮೇಲೆ ಕೆಟ್ಟಪರಿಣಾಮ ಬೀರುತ್ತದೆ ಎಂದು ಸಾತನೂರು ಸಬ್‌ ಇನ್‌ಸ್ಪೆಕ್ಟರ್‌ ಮುರಳಿ ಎಚ್ಚರಿಸಿದರು.

ತಾಲ್ಲೂಕಿನ ಸಾತನೂರು ಹೋಬಳಿ ಹೊಸಕಬ್ಬಾಳು ಡಾ.ಬಿ‍.ಆರ್‌.ಅಂಬೇಡ್ಕರ್‌ ಪ್ರೌಢಶಾಲೆಯಲ್ಲಿ ಶನಿವಾರ ನಡೆದ ಬಾಲ್ಯ ವಿವಾಹ ಪದ್ದತಿ ವಿರುದ್ದ ಜಾಗೃತಿ ಮತ್ತು ಜಾನಪದ ಗಾಯನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೇಂದ್ರ ಸರ್ಕಾರವು ವಿವಾಹವಾಗಲು ಗಂಡಿಗೆ 21 ವರ್ಷ, ಹೆಣ್ಣಿಗೆ 18 ವರ್ಷದ ವಯೋಮಿತಿಯನ್ನು ನಿಗದಿಪಡಿಸಿ ಕಾನೂನು ರಚಿಸಿದೆ. ಇದನ್ನು ಉಲ್ಲಂಘಿಸಿ ನಡೆದರೆ ಅಂತವರಿಗೆ ಕಠಿಣ ಶಿಕ್ಷೆಯನ್ನು ಮಾಡಿದೆ. ಎಳೆಯರು ವಿವಾಹವಾಗುವುದನ್ನು ತಡೆಗಟ್ಟಲು ಈ ಕಾನೂನು ರಚನೆಯಾಗಿದೆ ಎಂದರು.

‘ಹದಿ ಹರೆಯದ ಹುಡುಗ ಮತ್ತು ಹುಡುಗಿಯರು ಪ್ರಾಪ್ತ ವಯಸ್ಸು ಬರುವ ತನಕ ಪ್ರೀತಿ, ಪ್ರೇಮ ಎಂದು ಅಮೂಲ್ಯ ಜೀವನವನ್ನು ಹಾಳು ಮಾಡಿಕೊಳ್ಳಬಾರದು. ಚೆನ್ನಾಗಿ ಓದಿ ದೊಡ್ಡ ಉದ್ಯೋಗ ಸಂಪಾದಿಸಬೇಕು. ನಿಮ್ಮ ಸೂಕ್ತ ವಯಸ್ಸಿಗೆ ನಿಮ್ಮ ತಂದೆ ತಾಯಿಯರೇ ಮುಂದೆ ನಿಂತು ಯೋಗ್ಯ ವರ ಮತ್ತು ವಧುವನ್ನು ಹುಡುಕಿ ವಿವಾಹ ಮಾಡಿಕೊಡುತ್ತಾರೆ’ ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ವಕೀಲ ಕಾಮೇಶ್‌ ಮಾತನಾಡಿ, ‘ಬಾಲ್ಯವಿವಾಹದಂತ ಪಿಡುಗನ್ನು ತಡೆಗಟ್ಟಲು ಕಾನೂನು ರೂಪುಗೊಂಡಿದೆ. ಎಳೆಯ ವಯಸ್ಸಿನಲ್ಲಿ ವಿವಾಹವಾದರೆ ದೇಹದ ಬೆಳೆವಣಿಗೆಯ ಮೇಲೆ ಕೆಟ್ಟ ಪರಿಣಾಮ ಬೀರಲಿದೆ’ ಎಂದರು.

‘ಕುಟುಂಬದ ಸದಸ್ಯರು ಓದುವ ಮಕ್ಕಳ ಮೇಲೆ ಒತ್ತಡ ತಂದು ವಿವಾಹ ಮಾಡಿಬಿಡುತ್ತಾರೆ. ಆ ರೀತಿ ಮಾಡುವುದು ಕಾನೂನು ರೀತಿ ಅಪರಾಧವಾಗಿದೆ. ಪೋಷಕರು ಮಕ್ಕಳಿಗೆ ಮೊದಲು ಉನ್ನತ ಮಟ್ಟದ ಶಿಕ್ಷಣ ಕೊಡಿಸಿ, ನಂತರ ಅವರ ವಿವಾಹದ ಯೋಜನೆ ಮಾಡಬೇಕು’ ಎಂದು ಹೇಳಿದರು.

ಶಾಲೆಯ ಮುಖ್ಯ ಶಿಕ್ಷಕ ಸಿ.ಪುಟ್ಟಸ್ವಾಮಿ, ಗ್ರಾಮ ಪಂಚಾಯಿತಿ ಸದಸ್ಯರಾದ ಕೆಂಚಮ್ಮ, ಕಾಳಮಂಚಯ್ಯ, ಸರೋಜಮ್ಮ, ಶಿಕ್ಷಕ ರಾಮು ಉಪಸ್ಥಿತರಿದ್ದರು.

ಜನಪದ ಗಾಯಕರಾದ ಏರಂಗೆರೆ ಶಿವರಾಮ್‌, ಗೋವಿಂದರಾಜು.ಸಿ, ಮಧು ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ವೃತ್ತಿ ಸೇವೆಯನ್ನು ಗುರುತಿಸಿ ರಾಮು, ಸರೋಜಮ್ಮ, ಕಾಳಯ್ಯ ಅವರನ್ನು ಸನ್ಮಾನಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !