ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ವರದಿ

ಚಿಕ್ಕಸೋಲೂರು ದಾಖಲೆ ಕಾಡುಗೊಲ್ಲರ ಹಟ್ಟಿಗೆ ನರೇಗಾ ಯೋಜನೆಯಡಿ ಸೌಲಭ್ಯ
Last Updated 8 ಜುಲೈ 2018, 15:45 IST
ಅಕ್ಷರ ಗಾತ್ರ

ಸೋಲೂರು(ಮಾಗಡಿ): ಹೋಬಳಿಯ ಚಿಕ್ಕಸೋಲೂರು ದಾಖಲೆ ಕಾಡುಗೊಲ್ಲರ ಹಟ್ಟಿಗೆ ನರೇಗಾ ಯೋಜನೆಯಡಿ ಮೂಲ ಸೌಲಭ್ಯ ದೊರಕಿಸಿಕೊಡುವಂತೆ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ ಎಂದು ತಹಶೀಲ್ದಾರ್‌ ಎನ್‌.ಶಿವಕುಮಾರ್‌ ತಿಳಿಸಿದರು.

ಮೂಲ ಸವಲತ್ತುಗಳಿಂದ ವಂಚಿತವಾಗಿದ್ದ ಕಾಡುಗೊಲ್ಲರ ಹಟ್ಟಿ ಬಗ್ಗೆ ‘ಪ್ರಜಾವಾಣಿ’ಯಲ್ಲಿ ಸುದ್ದಿ ಪ್ರಕಟವಾದ ಹಿನ್ನೆಲೆಯಲ್ಲಿ ಅಧಿಕಾರಿಗಳೊಂದಿಗೆ ಭೇಟಿ ನೀಡಿ ನಂತರ ಸಮಸ್ಯೆಗಳ ಕುರಿತು ಮಾತನಾಡಿದರು. ‘ಅರೆ ಅಲೆಮಾರಿ ಸಮುದಾಯದ ಕಾಡುಗೊಲ್ಲರಿಗೆ ಹಿಂದುಳಿದ ವರ್ಗಗಳ ಇಲಾಖೆ ವತಿಯಿಂದ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿಗಳನ್ನು ಕೊರೆಯಿಸಿ ಕೊಡಲು ಅಧಿಕಾರಿಗಳು ಮುಂದಾಗಬೇಕು. ಬಡವರನ್ನು ಗುರುತಿಸಿ, ಗೋಮಾಳದಲ್ಲಿ ನಿವೇಶನ ನೀಡಿ, ಗ್ರಾಮ ಪಂಚಾಯಿತಿಯಿಂದ ಆಶ್ರಯ ಯೋಜನೆಯಡಿ ಮನೆ ಮಂಜೂರು ಮಾಡಿಸಿ ಕಟ್ಟಿಸಿ ಕೊಡಲಾಗುವುದು’ ಎಂದರು.

‘ಕಾಡುಗೊಲ್ಲರು ಮನೆಯ ಮುಂದೆ ರಸ್ತೆಯ ಮೇಲೆ ಹಾಕಿರುವ ಚಪ್ಪರಗಳನ್ನು ತೆಗೆಯಬೇಕು. ದನಕರುಗಳನ್ನು ರಸ್ತೆಯ ಮೇಲೆ ಕಟ್ಟಬಾರದು. ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಚರಂಡಿ ಮಾಡಿಸಲು ಗ್ರಾಮ ಪಂಚಾಯಿತಿಗೆ ತಿಳಿಸಲಾಗಿದೆ. ಚರಂಡಿ ಕಾಮಗಾರಿಗೆ ಅಡ್ಡಿಪಡಿಸುವವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಕಾದೀತು’ ಎಂದು ತಹಶೀಲ್ದಾರರು ಎಚ್ಚರಿಕೆ ನೀಡಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಟಿ.ಮುರುಡಯ್ಯ ಮಾತನಾಡಿ, ‘ನರೇಗಾ ಯೋಜನೆಯಡಿ ₹ 80 ಲಕ್ಷ ವೆಚ್ಚದಲ್ಲಿ ಗೊಲ್ಲರ ಹಟ್ಟಿಯಲ್ಲಿ ಕಾಂಕ್ರೀಟ್‌ ರಸ್ತೆ, ಬಾಕ್ಸ್‌ ಚರಂಡಿ, ನಿರ್ಮಿಸಲು ಯೋಜನೆ ತಯಾರಿಸಲಾಗಿದೆ’ ಎಂದರು. ಮನೆಯ ಮುಂದಿನ ಚರಂಡಿಗೆ ಕಸ ಸುರಿದು ನೀರು ಹರಿದು ಹೋಗದಂತೆ ತಡೆದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಗುಡಿಸಿಲಿನಲ್ಲಿ ವಾಸವಾಗಿರುವ ಮಲ್ಲಿಗಮ್ಮ ಮತ್ತು ಇತರರಿಗೆ ಗ್ರಾಮ ಪಂಚಾಯಿತಿ ವತಿಯಿಂದ ತಕ್ಷಣ ಮನೆ ಮಂಜೂರು ಮಾಡಲಾಗಿದೆ ಎಂದರು.

ಗೊಲ್ಲರ ಹಟ್ಟಿಯಲ್ಲಿ ನೂರಾರು ಪುಟಾಣಿ ಮಕ್ಕಳಿವೆ. ಕಾಡುಗೊಲ್ಲರು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿ ಸ್ವಚ್ಛತೆ ಕಾಪಾಡಿಕೊಳ್ಳಲು ಬೇಕಾದ ಸವಲತ್ತುಗಳನ್ನು ನೀಡಲಾಗುವುದು ಎಂದರು.

‘ಚಿಕ್ಕಸೋಲೂರು ಗ್ರಾಮದಿಂದ ಗೊಲ್ಲರ ಹಟ್ಟಿಗೆ 2 ಕಿ.ಮಿ.ರಸ್ತೆಯ ಜಲ್ಲಿಕಲ್ಲು ಕಿತ್ತು ಹೋಗಿದ್ದು, ರಸ್ತೆಗೆ ಡಾಂಬರೀಕರಣ ಮಾಡಿಸಿಕೊಡುವಂತೆ ಶಾಸಕ ಡಾ. ಶ್ರೀನಿವಾಸ ಮೂರ್ತಿ ಅವರ ಮನೆಗೆ ನಾವೆಲ್ಲರೂ ತೆರಳಿ ಮನವಿ ಸಲ್ಲಿಸುತ್ತೇವೆ’ ಎಂದು ಮುಖಂಡ ತಮ್ಮಣ್ಣ ತಿಳಿಸಿದರು.

ಸೋಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಎನ್‌.ರಾಜು ಮಾತನಾಡಿ, ಗೊಲ್ಲರ ಹಟ್ಟಿ ಕಂದಾಯ ಭೂಮಿಯಲ್ಲಿದೆ. ಚರಂಡಿ ಮಾಡಿಸಲು ಮುಂದಾದರೆ ಕೆಲವರು ರಗಳೆ ಮಾಡುತ್ತಾರೆ. ನರೇಗಾ ಯೋಜನೆಯ ಜೊತೆಗೆ ಶಾಸಕರಿಂದ ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡಿದರು.

ಮುಖಂಡರಾದ ತಮ್ಮಣ್ಣ, ಗೋಪಾಲಯ್ಯ, ಗಂಗಣ್ಣ, ಚಿತ್ತಯ್ಯ, ಶಂಕರಪ್ಪ, ನಾಗರಾಜು, ಮಹಿಳಾ ಮಂಡಳಿಯ ಗಂಗಮ್ಮ, ಕೆಂಪಮ್ಮ, ಸರೋಜಮ್ಮ, ಬೈಲಮ್ಮ, ಸೌಮ್ಯ, ಸುಮನ, ಅಂಜು ಸಮುದಾಯ ಭವನ ಕಟ್ಟಿಸಿಕೊಡುವಂತೆ ತಹಶೀಲ್ದಾರ್‌ ಅವರಲ್ಲಿ ಮನವಿ ಸಲ್ಲಿಸಿದರು.

ಹಟ್ಟಿಯ ಯಜಮಾನ ಚಿಕ್ಕಣ್ಣ ಮಾತನಾಡಿ, ಚರಂಡಿ ನಿರ್ಮಿಸಲು ಯಾರೂ ಅಡ್ಡಿಪಡಿಸುವುದಿಲ್ಲ. ಚರಂಡಿಯ ಕಲುಷಿತ ನೀರು ಕುಡಿಯುವ ನೀರಿನ ಪೈಪ್‌ ಒಳಗೆ ಸೇರುತ್ತಿದೆ. ಕಲುಷಿತ ನೀರು ಕುಡಿದು ಬಹಳ ಜನರು ಜ್ವರ ಪೀಡಿತರಾಗಿದ್ದಾರೆ. ಶುದ್ಧ ನೀರು ಒದಗಿಸಿ ಎಂದರು.

ಸೋಲೂರು ಗ್ರಾಮ ಪಂಚಾಯಿತಿ ಪಿಡಿಒ ಉದಯ್‌, ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕ ಶಿವಸ್ವಾಮಿ, ಗ್ರಾಮಲೆಕ್ಕಿಗ ಎಲ್‌.ಆರ್‌. ವಿರೇಶ್‌ಕುಮಾರ್‌ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಗೊಲ್ಲರ ಹಟ್ಟಿಯ ಬೀದಿಗಳಲ್ಲಿ ಸಂಚರಿಸಿ ಅಲ್ಲಿನ ಸಮಸ್ಯೆಗಳನ್ನು ಖುದ್ದು ವೀಕ್ಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT