ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಮೋದಿ ಆರ್‌ಎಸ್‌ಎಸ್‌ ಪ್ರಚಾರಕ: ಪಿಣರಾಯಿ ವಿಜಯನ್ ಆಕ್ರೋಶ

Last Updated 20 ಏಪ್ರಿಲ್ 2019, 13:55 IST
ಅಕ್ಷರ ಗಾತ್ರ

ಕಾಸರಗೋಡು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆರ್ ಎಸ್ ಎಸ್ ಪ್ರಚಾರಕನಂತೆ ಮಾತನಾಡುತ್ತಿದ್ದಾರೆ ಎಂದು
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಟೀಕಿಸಿದರು.

ಶುಕ್ರವಾರ ರಾತ್ರಿ ಕಾಸರಗೋಡು ಹೊಸ ಬಸ್ಸು ನಿಲ್ದಾಣದಲ್ಲಿ ಎಲ್ ಡಿ ಎಫ್ ಲೋಕಸಭಾ ಅಭ್ಯರ್ಥಿ ಕೆ. ಪಿ. ಸತೀಶ್ಚಂದ್ರನ್ ಅವರ ಪರ ಚುನಾವಣಾ ಪ್ರಚಾರ ಸಭೆಯ ಉದ್ಘಾಟಿಸಿ ಅವರು ಮಾತನಾಡಿದರು.

'ಕೇರಳದಲ್ಲಿ ದೇವರ ಹೆಸರು ಉಚ್ಛರಿಸಿದವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗುತ್ತಿದೆ ಎಂಬ ಸುಳ್ಳು ಪ್ರಚಾರವನ್ನು ಪ್ರಧಾನ ಮಂತ್ರಿ ಮತ್ತು ಬಿಜೆಪಿ ನಾಯಕರು ನಡೆಸುತ್ತಿದ್ದಾರೆ. ಸುಳ್ಳು ಪ್ರಚಾರವನ್ನು ನಿರಂತರ ನಡೆಸಿ ಅದು ಸತ್ಯವೆಂದು ಅನ್ನಿಸುವಂತೆ ಮಾಡುವುದು ಆರ್ ಎಸ್ ಎಸ್ ಕ್ರಮ, ನೀತಿ ರಿವಾಜು. ಆದರೆ, ಮೋದಿ ಅವರು ತಮ್ಮ ಹುದ್ದೆಯ ಘನತೆ ಮರೆತು ಈ ರೀತಿ ಅಪಪ್ರಚಾರ ನಡೆಸುವ ಮೂಲಕ ಪ್ರಧಾನಮಂತ್ರಿ ಸ್ಥಾನಕ್ಕೆ ಕುಂದು ತರುವ ಕೆಲಸ ಮಾಡುತ್ತಿದ್ದಾರೆ. ಪ್ರಧಾನಿ ಹುದ್ದೆಗೆ ಧಕ್ಕೆ ತರುವಂತಹ ಮಾತುಗಳನ್ನು ಮೋದಿ ಆಡುತ್ತಿದ್ದಾರೆ ' ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಶಬರಿಮಲೆಯಲ್ಲಿ ಭಕ್ತರಿಗೆ ಉತ್ತಮ ಸೌಕರ್ಯ ಏರ್ಪಡಿಸಲು ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ದೇಶದಲ್ಲಿಯೇ ಅತೀ ಮುಖ್ಯ ದೇವಾಲಯವಾಗಿ ಮಾರ್ಪಡಿಸಲು ಪ್ರಯತ್ನ ಮಾಡಲಾಗುತ್ತಿದೆ. ಸಂವಿಧಾನ ಪ್ರಕಾರ ಎಲ್ಲರಿಗೂ ದೇವಾಲಯದಲ್ಲಿ ಪ್ರವೇಶ ನೀಡಲು ಸರ್ಕಾರ ಕ್ರಮ ಕೈಗೊಂಡಿದೆ. ಇದೇ ವೇಳೆ ದೇವಾಲಯದಲ್ಲಿ ಗಲಭೆ ಎಬ್ಬಿಸಲು ಪ್ರಯತ್ನಿಸಿದವರ ವಿರುದ್ಧವು ಕ್ರಮ ಕೈಗೊಳ್ಳಲಾಗಿದೆ’ ಎಂದು ಅವರು ಹೇಳಿದರು.

‘ಬಿಜೆಪಿ ಆಡಳಿತೆ ನಡೆಸುವ ರಾಜ್ಯಗಳಲ್ಲಿ ದನದ ಹೆಸರಲ್ಲಿ , ಜನರ ಆಹಾರದ ಹೆಸರಲ್ಲಿ ಅಲ್ಪ ಸಂಖ್ಯಾತರ ಮೇಲೆ ಹಿಂಸೆ ನಡೆಸಿದಾಗ ಮೋದಿ ಚಕಾರ ಎತ್ತಲಿಲ್ಲ. ಹಿಂದೂಗಳ ಆಚಾರ, ಸಂಪ್ರದಾಯಗಳನ್ನು ಒಪ್ಪದವರು ದೇಶ ಬಿಟ್ಟು ತೊಲಗಬೇಕೆಂದು ನಿಲುವು ತಳೆದಾಗಲೂ, ಮತ ಪರಿವರ್ತನೆಗೆ ‘ಘರ್ ವಾಪಸಿ’ ನಡೆಸಿದಾಗಲೂ ಪ್ರಧಾನಿ ಮೌನ ವಹಿಸಿದ್ದರು ಎಂದು ಆರೋಪಿಸಿದರು.

ಆದರೆ, ಕೇರಳ ಸಂವಿಧಾನ ಬದ್ಧವಾಗಿ ಎಲ್ಲಾ ಜಾತಿ, ಧರ್ಮದ ಜನರಿಗೂ ಭಯ ರಹಿತವಾಗಿ ಜೀವನ ನಡೆಸಲು ಬೇಕಾದ ವ್ಯವಸ್ಥೆ ಒದಗಿಸಿದ ರಾಜ್ಯ ಎಂಬ ಹೆಗ್ಗಳಿಕೆ ಹೊಂದಿದೆ. ಅನ್ಯ ಧರ್ಮದ ಜನರನ್ನು ಹಿಂಸಿಸುವುದು ನಮ್ಮ ಸಂಪ್ರದಾಯವಲ್ಲ.ಇತರ ಧರ್ಮೀಯರಿಗೆ ಅವರ ವಿಶ್ವಾಸ, ನಂಬಿಕೆಗಳಿಗೆ ತಕ್ಕಂತೆ ಜೀವನ ನಡೆಸುವ ಸ್ವಾತಂತ್ರ್ಯ ನೀಡಬೇಕಾಗಿದೆ. ಆದರೆ ಇದನ್ನು ಒಪ್ಪದ ಆರ್ ಎಸ್ ಎಸ್, ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡಲು ಮುಂದಾಗಿರುವುದು ಸರಿಯಾದ ಕ್ರಮವಲ್ಲ ಎಂದು ಅವರು ಆರೋಪಿಸಿದರು.

‘ಕೇರಳದಲ್ಲಿ ಜಲಪ್ರಳಯವಾದಾಗ ನೆರವು ನೀಡದ ಮೋದಿ, ಜಲಪ್ರಳಯಕ್ಕೆ ರಾಜ್ಯವೇ ಕಾರಣ ಎಂದು ಹೇಳುವ ಮೂಲಕ ಸಂಕಷ್ಟಕ್ಕೆ ಒಳಗಾದ ಜನರನ್ನು ಹಾಸ್ಯ ಮಾಡಿ ನೋಯಿಸಿದ್ದಾರೆ. ರಫೇಲ್‌ ಅವ್ಯವಹಾರ ಹಾಗೂ ಹಲವು ಭ್ರಷ್ಟಾಚಾರಗಳಲ್ಲಿ ಮುಳುಗಿರುವ ಮೋದಿ ಸರ್ಕಾರ ಭಾಗಿಯಾಗಿದೆ. ಉತ್ತಮ ಆಡಳಿತ ನೀಡುತ್ತಿರುವ ಕೇರಳ ಸರ್ಕಾರದ ಮೇಲೆ ಭ್ರಷ್ಟಾಚಾರದ ಆರೋಪ ಮಾಡುತ್ತಿರುವುದು ಹಾಸ್ಯಾಸ್ಪದ' ಎಂದರು.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭಾಷಣ ಮಾಡುತ್ತಿದ್ದಂತೆಯೇ, ಎಲ್ ಡಿ ಎಫ್ ಅಭ್ಯರ್ಥಿ ಕೆ. ಇ. ಸತೀಶ್ಚಂದ್ರನ್
ವೇದಿಕೆಗೆ ಬಂದರು. ಮುಖ್ಯಮಂತ್ರಿ ಅವರು ಅಭ್ಯರ್ಥಿಗೆ ಭಾಷಣ ಮಾಡಲು ಅನುವು ಮಾಡಿಕೊಡಲು ತಮ್ಮ ಭಾಷಣ ಅರ್ಧಕ್ಕೆ ನಿಲ್ಲಿಸಿದರು. ಅಭ್ಯರ್ಥಿ ಚಿಕ್ಕ ಭಾಷಣದ ಬಳಿಕ ಮುಖ್ಯಮಂತ್ರಿ ಅವರು ತಮ್ಮ ಭಾಷಣ ಮುಂದುವರಿಸಿದ್ದರು. ಕಾಸರಗೋಡಿಗೆ ಬಂದ ಮುಖ್ಯಮಂತ್ರಿ ಅವರಿಗೆ ಎಲ್ ಡಿ ಎಫ್ ಕಾರ್ಯಕರ್ತರು ಪಟಾಕಿ ಸಿಡಿಸಿ , ಘೋಷಣೆ ಕೂಗಿ ಅದ್ದೂರಿ ಸ್ವಾಗತ ಕೋರಿದರು. ಹೆಚ್ಚು ಸಂಖ್ಯೆಯಲ್ಲಿ ಕಾರ್ಯಕರ್ತರು ಜಮಾಯಿಸಿದ್ದರು.

ಸಭೆಯಲ್ಲಿ ಅಜೀಜ್ ಕಡಪ್ಪುರಂ ಅಧ್ಯಕ್ಷತೆ ವಹಿಸಿದರು. ಸಚಿವರಾದ ಕಡನ್ನಪ್ಪಳ್ಳಿ ರಾಮಚಂದ್ರನ್, ಇ. ಚಂದ್ರಶೇಖರನ್,
ಸಂಸದ ಪಿ. ಕರುಣಾಕರನ್, ಶಾಸಕ ಟಿ. ವಿ .ರಾಜೇಶ್, ಮಾಜಿ ಶಾಸಕ ಸಿ . ಎಚ್ .ಕುಂಞಂಬು, ಸಿಪಿಐಎಂ ಜಿಲ್ಲಾ
ಕಾರ್ಯದರ್ಶಿ ಎಂ. ವಿ. ಬಾಲಕೃಷ್ಣನ್ , ಅಭ್ಯರ್ಥಿ ಕೆ. ಪಿ. ಸತೀಶ್ಚಂದ್ರನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT