ಮಂಗಳೂರು: ತೆಲಂಗಾಣದ ರಮೇಶ್ ಡಿ. ಚರ್ಮದ ಪರ್ಸುಗಳು, ಬ್ಯಾಗು, ಬೆಲ್ಟುಗಳನ್ನು ಮಾರಾಟ ಮಾಡುತ್ತಾರೆ. ಪ್ರತಿಯೊಂದರ ಬೆಲೆಯೂ ಸುಮಾರು ₨ 300ರಿಂದ ₨ 600 ರೊಳಗಿದೆ. ಪೋಚಂಪಲ್ಲಿ ವಿನ್ಯಾಸದ ಸೀರೆಗಳನ್ನು 350ರ ಆಜುಬಾಜಿನಲ್ಲಿಯೇ ಮಾಧವ್ ರಾವ್ ಮಾರುತ್ತಾರೆ. ಲಖನೌದಿಂದ ಬಂದಿರುವ ಲಲಿತಾ ಅಲ್ಲಿನ ಚಿಕೂನ್ ವರ್ಕ್ ಇರುವ ಸೀರೆಗಳನ್ನು 350ಕ್ಕೇ ಕೊಟ್ಟು ಅಚ್ಚರಿ ಮೂಡಿಸುತ್ತಾರೆ.
ಈ ಎಲ್ಲ ಅಗ್ಗದ ಮಾರಾಟಕ್ಕೆ ವೇದಿಕೆ ದೊರೆತಿರುವುದು ಪಾಂಡೇಶ್ವರ ರಸ್ತೆಯ ಭಾರತೀಯ ವಿದ್ಯಾಭವನದಲ್ಲಿ. ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಖಾದಿ ಗ್ರಾಮೋದ್ಯೋಗ ಆಯೋಗ, ಬೆಂಗಳೂರಿನ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ವತಿಯಿಂದ ಆಯೋಜಿಸಲಾದ ಖಾದಿ ಉತ್ಸವ ಶುಕ್ರವಾರ ಉದ್ಘಾಟನೆಗೊಂಡಿತು. ಜೂನ್ 1ರವರೆಗೆ ಈ ದೇಸೀ ವಸ್ತುಗಳ ಮಾರಾಟ ಮೇಳ ನಡೆಯಲಿದೆ. ಧಾರವಾಡದ ಉಪ್ಪಿನ ಬೆಟಗೇರಿಯ ಎ. ದೊಡವಾಡ ಅವರು, ಸಹಜ ಬಣ್ಣದ ಅಪ್ಪಟ ಖಾದಿ ಬಟ್ಟೆಯನ್ನು ಮಾರುತ್ತಾರೆ.
ಓವರ್‌ಕೋಟ್‌ಗಳಿಗೆ ಹೊಂದುವ, ಸಫಾರಿ ಶೈಲಿಯ ದಿರಿಸು ಹೊಲಿಸಲು ಅನುಕೂಲವಾಗುವ ಬಟ್ಟೆ ಇದು. ₨ 450 ಕ್ಕೆ ಸಿದ್ಧ ಕೋಟ್‌ಗಳೂ ಅವರ ಬಳಿ ಲಭ್ಯವಿವೆ. ಕಲಂಕರಿ ಮತ್ತು ಮಂಗಳಗಿರಿ ಬಟ್ಟೆಯ ಚೂಡಿದಾರ್ ಸೆಟ್, 550ರಿಂದ ಹಿಡಿದು ₨ 9 ಸಾವಿರ ಮೌಲ್ಯದ ಇಳಕಲ್ ಸೀರೆಗಳು, ಬಿಜಾಪುರದ ಐಶ್ವರ್ಯ ಜ್ಯೂಟ್ ಹೌಸ್‌ನ ವೈವಿಧ್ಯಮ ಬ್ಯಾಗ್‌ಗಳು, ಫೈಲ್‌ಗಳು, ಫೋಲ್ಡರ್‌ಗಳು ಲಭ್ಯ.
ಖಾದಿ ಉತ್ಸವವನ್ನು ಮೇಯರ್ ಮಹಾಬಲ ಮಾರ್ಲ ಉದ್ಘಾಟಿಸಿ ದೇಸೀ ವಸ್ತುಗಳಿಗೆ ಪ್ರೋತ್ಸಾಹ ನೀಡುವಂತೆ ಕೋರಿದರು.
‘ಮಾರಾಟಗಾರರಿಂದ ನೇರವಾಗಿ ಗ್ರಾಹಕರಿಗೆ ವಸ್ತುಗಳನ್ನು ತಲುಪಿಸುವ ಈ ಪ್ರಯತ್ನದಿಂದ ದೇಸೀ ಮಾರುಕಟ್ಟೆಯನ್ನು ಪ್ರೋತ್ಸಾಹಿಸಿದಂತೆ ಆಗುತ್ತದೆ. ಮಧ್ಯವರ್ತಿಯ ಹಾವಳಿಯಿಂದಲೂ ಗ್ರಾಹಕ ಬಚಾವ್ ಆಗುತ್ತಾನೆ’ ಎಂದು ಅವರು ಹೇಳಿದರು.
ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಅಭಿವೃದ್ಧಿ ಅಧಿಕಾರಿ ಎಂ. ಅಶೋಕ್ ಅವರು ರಾಷ್ಟ್ರೀಯ ಖಾದಿ ಮೇಳವನ್ನು ಮಂಗಳೂರಿನಲ್ಲಿ ನಡೆಸುವ ಉದ್ದೇಶವಿದೆ ಎಂದು ಹೇಳಿದರು. ಕಳೆದ ವರ್ಷ ನಡೆದ ಉತ್ಸವದಲ್ಲಿ ಸುಮಾರು 1 ಕೋಟಿ ರೂಪಾಯಿ ವಹಿವಾಟು ಆಗಿದ್ದು ಈ ಬಾರಿ ₨ 2 ಕೋಟಿ ವಹಿವಾಟಿನ ಗುರಿ ಇರಿಸಿಕೊಳ್ಳಲಾಗಿದೆ ಎಂದರು.
ಖಾದಿ ವಸ್ತ್ರವನ್ನೇ ಧರಿಸುವ ವಾಮಪದವಿನ ಶ್ರೀಧರ್ ಪೈ ಮತ್ತು ಬೊಳ್ಮಾರಿನ ಜಯಚಂದ್ರ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್‌ನ ಪ್ರದೀಪ್ ಕುಮಾರ್ ಕಲ್ಕೂರ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಎಸ್.ಜಿ. ಹೆಗಡೆ, ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ ಯು. ವೀರಪ್ಪ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು. ಕೆ.ವಿ. ರಮಣ್ ಕಾರ್ಯಕ್ರಮ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.