ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

16 ಸಾವಿರ ಮಕ್ಕಳಿಗೆ ‘ವಿದ್ಯಾನಿಧಿ’

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈವರೆಗೆ ₹ 4.05 ಕೋಟಿ ವಿತರಣೆ
Last Updated 16 ಮಾರ್ಚ್ 2022, 19:30 IST
ಅಕ್ಷರ ಗಾತ್ರ

ಮಂಗಳೂರು: ರೈತರ ಮಕ್ಕಳ ಶಿಕ್ಷಣಗೆ ನೆರವಾಗುವ ಆಶಯದೊಂದಿಗೆ ಪ್ರಾರಂಭವಾಗಿರುವ ‘ಮುಖ್ಯಮಂತ್ರಿ ವಿದ್ಯಾನಿಧಿ’ ಯೋಜನೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫೆಬ್ರುವರಿ ತಿಂಗಳವರೆಗೆ 16,145 ವಿದ್ಯಾರ್ಥಿಗಳು ಒಟ್ಟು ₹ 4.05 ಕೋಟಿ ಮೊತ್ತದ ಶಿಷ್ಯವೇತನ ಪಡೆದಿದ್ದಾರೆ.

ಜಿಲ್ಲೆಯಲ್ಲಿ ವಿದ್ಯಾನಿಧಿ ಯೋಜನೆ ಬಗ್ಗೆ ಜಾಗೃತಿ ಮೂಡಿದೆ. ಹಲವಾರು ವಿದ್ಯಾರ್ಥಿಗಳು ಪೋರ್ಟಲ್ ಮೂಲಕ ನೇರವಾಗಿ ಅರ್ಜಿ ಸಲ್ಲಿಸುತ್ತಿದ್ದಾರೆ. 1,900ಕ್ಕೂ ಅಧಿಕ ವಿದ್ಯಾರ್ಥಿಗಳ ಅರ್ಜಿಗಳು ಆಧಾರ್ ಸೀಡಿಂಗ್ ಆಗದ ಕಾರಣಕ್ಕೆ ಬಾಕಿ ಇದ್ದು, ಸಂಬಂಧಪಟ್ಟ ಕಾಲೇಜುಗಳಿಗೆ ಕೃಷಿ ಇಲಾಖೆ ಮಾಹಿತಿ ನೀಡಿ, ದೋಷ ಸರಿಪಡಿಸುವಂತೆ ತಿಳಿಸಿದೆ. ಸಮಸ್ಯೆ ಬಗೆಹರಿದ ತಕ್ಷಣ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಹಣ ಜಮಾ ಆಗುತ್ತದೆ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.

ಈವರೆಗೆ 21,381 ವಿದ್ಯಾರ್ಥಿಗಳ ಅರ್ಜಿಗಳು ಪರಿಗಣಿತವಾಗಿವೆ. ಮಂಗಳೂರು ತಾಲ್ಲೂಕಿನಲ್ಲಿ ಗರಿಷ್ಠ 7,497 ವಿದ್ಯಾರ್ಥಿಗಳು ಇದ್ದರೆ, ಸುಳ್ಯ ತಾಲ್ಲೂಕಿನಲ್ಲಿ 2,173 ವಿದ್ಯಾರ್ಥಿಗಳ ಅರ್ಜಿಗಳಿವೆ.

ಯಾರು ಅರ್ಹರು?: ರಾಜ್ಯದಲ್ಲಿ ಮಾನ್ಯತೆ ಪಡೆದ ಯಾವುದೇ ಶಿಕ್ಷಣ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆಯುವ ಮಕ್ಕಳು ಶಿಷ್ಯವೇತನ ಪಡೆಯಬಹುದು. ಆದರೆ, ಅವರು ರೈತರ ಮಕ್ಕಳಾಗಿರಬೇಕು. ಶಿಷ್ಯವೇತನಕ್ಕೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಯು ತಂದೆ ಅಥವಾ ತಾಯಿಯ ರೈತ ಗುರುತಿನ ಸಂಖ್ಯೆ (ಎಫ್‌ಐಡಿ) ಹೊಂದಿಡಬೇಕು.

ಪಿಯುಸಿ, ಡಿಪ್ಲೊಮಾ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ₹ 2,500, ಪದವಿ ವಿದ್ಯಾರ್ಥಿಗಳಿಗೆ ₹ 5,000, ಎಲ್‌.ಎಲ್‌.ಬಿ, ಪ್ಯಾರಾ ಮೆಡಿಕಲ್, ಬಿ.ಫಾರ್ಮ್, ನರ್ಸಿಂಗ್ ಮತ್ತಿತರ ವೃತ್ತಿಪರ ಕೋರ್ಸ್ ಮಾಡುವವರಿಗೆ ₹ 7,500, ಎಂ.ಬಿ.ಬಿ.ಎಸ್, ಎಂಜಿನಿಯರಿಂಗ್, ಬಿ.ಟೆಕ್ ಮತ್ತು ಎಲ್ಲ ಸ್ನಾತಕೋತ್ತರ ಕೋರ್ಸ್ ಅಭ್ಯಾಸ ಮಾಡುತ್ತಿರುವವರಿಗೆ ₹10 ಸಾವಿರ ವಿದ್ಯಾರ್ಥಿವೇತನ ದೊರೆಯುತ್ತದೆ. ಹೆಣ್ಣು ಮಕ್ಕಳಿಗೆ ಗಂಡು ಮಕ್ಕಳಿಗಿಂತ ತುಸು ಹೆಚ್ಚು ಮೊತ್ತ ನಿಗದಿಪಡಿಸಲಾಗಿದೆ. ದಾಖಲೆ ಸರಿಯಾಗಿ ಪೂರೈಸಿರುವ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮೆ ಆಗುತ್ತದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

‘ಇ–ಕುಟುಂಬದ ಮಾಹಿತಿ ಫ್ರುಟ್ಸ್ ಪೋರ್ಟಲ್‌ಗೆ ಲಿಂಕ್ ಆಗಿದೆ. ಇಲ್ಲಿನ ಮಾಹಿತಿಯನ್ನು ಪಡೆದು ಸಿದ್ಧಪಡಿಸಿದ ಪಟ್ಟಿಯಲ್ಲಿ ಹೆಸರಿರುವ ವಿದ್ಯಾರ್ಥಿಗಳಿಗೆ ನೇರವಾಗಿ ವಿದ್ಯಾರ್ಥಿವೇತನ ದೊರೆಯುತ್ತದೆ. ಆಧಾರ್ ಸೀಡಿಂಗ್ ಅಥವಾ ಹೆಸರು ತಪ್ಪಾಗಿ ನಮೂದಾಗಿದ್ದರೆ, ಅಂತಹ ಅರ್ಜಿಗಳು ಆಯಾ ಜಿಲ್ಲೆಯ ಕೃಷಿ ಇಲಾಖೆಗೆ ಬರುತ್ತವೆ. ಕಾಲೇಜುಗಳಿಂದ ಮಾಹಿತಿ ಪಡೆದು, ಅದನ್ನು ಆದಷ್ಟು ಶೀಘ್ರ ಸರಿಪಡಿಸಿ, ನಾವು ಪುನಃ ಕಳುಹಿಸುತ್ತೇವೆ’ ಎನ್ನುತ್ತಾರೆ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಡಾ. ಸೀತಾ.

‘ಇದು ಅತ್ಯುತ್ತಮ ಯೋಜನೆಯಾಗಿದ್ದು, ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಇಲಾಖೆಯಿಂದ ಸಾಕಷ್ಟು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದ್ದೇವೆ. ವಿದ್ಯಾರ್ಥಿಗಳು ಕೂಡ ನೇರವಾಗಿ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸುತ್ತಿದ್ದಾರೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT