ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಕನ್ನಡ: 201 ಜನರಲ್ಲಿ ಕೋವಿಡ್‌ ಪತ್ತೆ, ಆರು ಜನರ ಸಾವು

ಸೋಂಕಿನಿಂದ 241 ಮಂದಿ ಗುಣಮುಖ
Last Updated 24 ಆಗಸ್ಟ್ 2020, 16:53 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ 201 ಜನರಿಗೆ ಕೋವಿಡ್‌–19 ಸೋಂಕು ತಗುಲಿರುವುದು ಸೋಮವಾರ ಲಭಿಸಿದ ಪರೀಕ್ಷಾ ವರದಿಗಳಿಂದ ದೃಢಪಟ್ಟಿದೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 10,531ಕ್ಕೆ ತಲುಪಿದೆ.

‘ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ 59, ಶೀತ ಜ್ವರದಿಂದ ಬಳಲುತ್ತಿದ್ದ 70, ಉಸಿರಾಟದ ತೀವ್ರ ತೊಂದರೆ ಎದುರಿಸುತ್ತಿದ್ದ ಒಂಭತ್ತು ಹಾಗೂ ಹೊರ ರಾಜ್ಯದಿಂದ ಹಿಂದಿರುಗಿ ರುವ ಒಬ್ಬರಲ್ಲಿ ಕೋವಿಡ್‌ ಸೋಂಕು ಪತ್ತೆಯಾಗಿದೆ. ಉಳಿದ 72 ಜನರಿಗೆ ಯಾವ ಮೂಲದಿಂದ ಸೋಂಕು ತಗುಲಿದೆ ಎಂಬುದನ್ನು ಪತ್ತೆಹಚ್ಚಲಾಗುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.

ಮಂಗಳೂರು ತಾಲ್ಲೂಕಿನ 144, ಬಂಟ್ವಾಳ 22, ಬೆಳ್ತಂಗಡಿ 7, ಪುತ್ತೂರು ಮತ್ತು ಸುಳ್ಯ ತಾಲ್ಲೂಕುಗಳ ತಲಾ ಐದು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರೀಕ್ಷೆಗೊಳಗಾಗಿರುವ ಹೊರ ಜಿಲ್ಲೆಗಳ 18 ಜನರಲ್ಲಿ ಕೋವಿಡ್‌ ಸೋಂಕು ಇರುವುದು ಸೋಮವಾರ ಖಚಿತವಾಗಿದೆ. ಜಿಲ್ಲೆಯಲ್ಲಿ ಕೋವಿಡ್‌ ಸೋಂಕು ಪತ್ತೆಗಾಗಿ ಈವರೆಗೆ 83,598 ಜನರ ಗಂಟಲು ಮತ್ತು ಮೂಗಿನ ದ್ರವದ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಈ ಪೈಕಿ 10,531 ಜನರಲ್ಲಿ ಸೋಂಕು ಪತ್ತೆಯಾಗಿದೆ. 57,678 ‘ನೆಗೆಟಿವ್‌’ ವರದಿಗಳು ಬಂದಿವೆ.

73 ಮಂದಿ ಆಸ್ಪತ್ರೆಗೆ ದಾಖಲು: ಸೋಮವಾರ ಸೋಂಕು ದೃಢಪಟ್ಟವರಲ್ಲಿ 47 ಪುರುಷರು ಮತ್ತು 26 ಮಹಿಳೆಯರು ಸೇರಿ 73 ಜನರಲ್ಲಿ ಕೋವಿಡ್‌ ಸೋಂಕಿನ ಗುಣ ಲಕ್ಷಣಗಳು ಕಂಡುಬಂದಿವೆ. ಅವರನ್ನು ಜಿಲ್ಲೆಯ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ, ಚಿಕಿತ್ಸೆ ಆರಂಭಿಸಲಾಗಿದೆ.88 ಪುರುಷರು ಮತ್ತು 40 ಮಹಿಳೆಯರು ಸೇರಿ 128 ಜನರಲ್ಲಿ ಕೋವಿಡ್‌ ಸೋಂಕಿನ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ಅವರನ್ನು ಮನೆಗಳಲ್ಲೇ ಪ್ರತ್ಯೇಕವಾಸ ಹಾಗೂ ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ ಇರಿಸಿ, ಆರೋಗ್ಯದ ಮೇಲೆ ನಿಗಾ ಇರಿಸಲಾಗಿದೆ.

241 ಜನರು ಗುಣಮುಖ:ಕೋವಿಡ್‌ ಸೋಂಕು ತಗುಲಿದ್ದ 241 ಜನರ ಗಂಟಲು ಮತ್ತು ಮೂಗಿನ ದ್ರವದ ಪರೀಕ್ಷಾ ವರದಿಗಳು ‘ನೆಗೆಟಿವ್‌’ ಬಂದಿವೆ. ಈ ಪೈಕಿ ಆಸ್ಪತ್ರೆಗಳಲ್ಲಿದ್ದ 58 ಹಾಗೂ ಕೋವಿಡ್‌ ಆರೈಕೆ ಕೇಂದ್ರದ
ಲ್ಲಿದ್ದ ಮೂವರನ್ನು ಮನೆಗಳಿಗೆ ಕಳುಹಿಸಲಾಗಿದೆ. ಮನೆಗಳಲ್ಲೇ ಪ್ರತ್ಯೇಕವಾಸದಲ್ಲಿದ್ದ 180 ಜನರ ಆರೋಗ್ಯದ ಮೇಲಿನ ನಿಗಾ ಸ್ಥಗಿತಗೊಳಿಸಲಾಗಿದೆ. 14 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇರುವಂತೆ ಎಲ್ಲರಿಗೂ ಆರೋಗ್ಯ ಇಲಾಖೆಯಿಂದ ಸೂಚನೆ ನೀಡಲಾಗಿದೆ.

ಜಿಲ್ಲೆಯಲ್ಲಿ ಈವರೆಗೆ 7,918 ಜನರು ಕೋವಿಡ್‌ ಸೋಂಕಿನಿಂದ ಗುಣಮುಖರಾಗಿದ್ದಾರೆ. ಈಗ 2,297 ಸಕ್ರಿಯ ಪ್ರಕರಣಗಳಿವೆ. ಅವರಲ್ಲಿ ಅರ್ಧಕ್ಕಿಂತಲೂ ಹೆಚ್ಚು ಜನರಲ್ಲಿ ಸೋಂಕಿನ ಯಾವುದೇ ಲಕ್ಷಣಗಳಿಲ್ಲ. ಅಂತಹ ಎಲ್ಲರನ್ನೂ ಮನೆಗಳಲ್ಲೇ ಪ್ರತ್ಯೇಕವಾಸದಲ್ಲಿ ಇರಿಸಲಾಗಿದೆ.

ಆರು ಸಾವು: ಕೋವಿಡ್‌ ಸೋಂಕು ತಗುಲಿದ್ದ ಆರು ಜನರು ಮೃತಪಟ್ಟಿರುವುದನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಅವರು ಸೋಮವಾರ ಅಧಿಕೃತವಾಗಿ ಘೋಷಿಸಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಾವಿನ ಸಂಖ್ಯೆ 316ಕ್ಕೇರಿದೆ.

‘ಕೋವಿಡ್‌ ಸೋಂಕು ತಗುಲಿದ್ದ ಮಂಗಳೂರು ತಾಲ್ಲೂಕಿನ ಮೂವರು, ಬಂಟ್ವಾಳ ತಾಲ್ಲೂಕಿನ ಇಬ್ಬರು ಮತ್ತು ಹೊರ ಜಿಲ್ಲೆಯ ಒಬ್ಬರು ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT