ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಕನ್ನಡ | ಕೋವಿಡ್‌: 243 ಹೊಸ ಪ್ರಕರಣ ಪತ್ತೆ

519 ಸೋಂಕಿತರು ಗುಣಮುಖ: 9 ಮಂದಿಯ ಸಾವು ಘೋಷಣೆ
Last Updated 11 ಆಗಸ್ಟ್ 2020, 16:34 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 243 ಜನರಿಗೆ ಕೋವಿಡ್‌–19 ಸೋಂಕು ತಗುಲಿರುವುದು ಮಂಗಳವಾರ ಲಭಿಸಿರುವ ಪರೀಕ್ಷಾ ವರದಿಗಳಿಂದ ದೃಢಪಟ್ಟಿದೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 7,596ಕ್ಕೆ ತಲುಪಿದೆ.

‘ಮಂಗಳೂರು ತಾಲ್ಲೂಕಿನ 189, ಬಂಟ್ವಾಳ 30, ಬೆಳ್ತಂಗಡಿ 10, ಪುತ್ತೂರು 6 ಹಾಗೂ ಸುಳ್ಯ ತಾಲ್ಲೂಕಿನ 4 ಜನರಿಗೆ ಸೋಂಕು ತಗುಲಿರುವುದು ಮಂಗಳವಾರ ದೃಢಪಟ್ಟಿದೆ. ಹೊರ ಜಿಲ್ಲೆಗಳ ನಾಲ್ವರಲ್ಲಿ ಸೋಂಕು ಪತ್ತೆಯಾಗಿದೆ’ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದ್ದಾರೆ.

‘ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ 23, ಶೀತ ಜ್ವರದಿಂದ ಬಳಲುತ್ತಿದ್ದ (ಐಎಲ್‌ಐ) 123, ಉಸಿರಾಟದ ತೀವ್ರ ತೊಂದರೆ ಎದುರಿಸುತ್ತಿದ್ದ (ಎಸ್‌ಎಆರ್‌ಐ) 9 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇತರ 88 ಜನರಿಗೆ ಯಾವ ಮೂಲದಿಂದ ಕೋವಿಡ್‌ ಸೋಂಕು ತಗುಲಿದೆ ಎಂಬುದನ್ನು ಪತ್ತೆಹಚ್ಚಲಾಗುತ್ತಿದೆ’ ಎಂದು ಮಾಹಿತಿ ನೀಡಿದ್ದಾರೆ.

94 ಪುರುಷರು ಮತ್ತು 43 ಮಹಿಳೆಯರು ಸೇರಿ 137 ಜನರಲ್ಲಿ ಕೋವಿಡ್‌ ಸೋಂಕಿನ ಲಕ್ಷಣಗಳು ಕಂಡುಬಂದಿವೆ. ಅವರನ್ನು ಚಿಕಿತ್ಸೆಗಾಗಿ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. 75 ಪುರುಷರು ಮತ್ತು 31 ಮಹಿಳೆಯರು ಸೇರಿ 106 ಜನರಲ್ಲಿ ಸೋಂಕಿನ ಯಾವುದೇ ಲಕ್ಷಣಗಳಿಲ್ಲ. ಅವರನ್ನು ಮನೆಗಳು ಮತ್ತು ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ ಪ್ರತ್ಯೇಕ ವಾಸದಲ್ಲಿ ಇರಿಸಲಾಗಿದೆ.

519 ಮಂದಿ ಗುಣಮುಖ:ಜಿಲ್ಲೆಯಲ್ಲಿ ಒಟ್ಟು 519 ಜನರು ಕೋವಿಡ್‌ ಸೋಂಕಿನಿಂದ ಗುಣಮುಖರಾಗಿರುವುದು ಮಂಗಳವಾರ ದೃಢಪಟ್ಟಿದೆ. ಈ ಪೈಕಿ 394 ಜನರು ತಮ್ಮ ಮನೆಗಳಲ್ಲೇ ಪ್ರತ್ಯೇಕವಾಸದಲ್ಲಿ ಇದ್ದರು. ಸೋಂಕಿನ ಲಕ್ಷಣಗಳಿದ್ದ 62 ಜನರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 63 ಜನರು ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ ಪ್ರತ್ಯೇಕ ವಾಸದಲ್ಲಿದ್ದರು.

ಮನೆಗಳಲ್ಲೇ ಪ್ರತ್ಯೇಕ ವಾಸದಲ್ಲಿ ಇದ್ದವರ ಮೇಲಿನ ನಿಗಾ ಸ್ಥಗಿತಗೊಳಿಸಲಾಗಿದೆ. ಆಸ್ಪತ್ರೆಗಳು ಮತ್ತು ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ ಇದ್ದವರನ್ನು ಬಿಡುಗಡೆ ಮಾಡಿ, ಮನೆಗೆ ಕಳುಹಿಸಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಸೋಮವಾರ ಜಿಲ್ಲೆಯಲ್ಲಿ 533 ಜನರು ಕೋವಿಡ್‌ ಸೋಂಕಿನಿಂದ ಗುಣಮುಖರಾಗಿದ್ದರು. ಈವರೆಗೆ ಒಟ್ಟು 4,734 ಜನರು ಗುಣಮುಖರಾಗಿದ್ದಾರೆ. 2,625 ಸಕ್ರಿಯ ಪ್ರಕರಣಗಳಿವೆ. ಅವರಲ್ಲಿ ಸೋಂಕಿನ ಲಕ್ಷಣಗಳಿರುವವರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರಿದಿದೆ. ಸೋಂಕಿನ ಲಕ್ಷಣಗಳಿಲ್ಲದೇ ಇರುವವರನ್ನು ಮನೆಗಳು ಮತ್ತು ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ ಪ್ರತ್ಯೇಕವಾಸದಲ್ಲಿ ಇರಿಸಲಾಗಿದೆ.

ಒಂಭತ್ತು ಮಂದಿಯ ಸಾವು ಘೋಷಣೆ:ಜಿಲ್ಲೆಯಲ್ಲಿನ ಕೋವಿಡ್‌ ಸೋಂಕಿತರ ಪೈಕಿ ಒಂಭತ್ತು ಮೃತಪಟ್ಟಿರುವುದಾಗಿ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ಮಂಗಳವಾರ ಅಧಿಕೃತವಾಗಿ ಪ್ರಕಟಿಸಿದ್ದಾರೆ. ಇದರೊಂದಿಗೆ ಸೋಂಕಿತರ ಸಾವಿನ ಒಟ್ಟು ಸಂಖ್ಯೆ 237ಕ್ಕೆ ತಲುಪಿದೆ.

‘ಕೋವಿಡ್‌ ಸೋಂಕು ತಗುಲಿದ್ದವರಲ್ಲಿ ಮಂಗಳೂರು ತಾಲ್ಲೂಕಿನ ಎಂಟು ಜನರು ಮತ್ತು ಹೊರ ಜಿಲ್ಲೆಯ ಒಬ್ಬ ವ್ಯಕ್ತಿ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ಮಂಗಳೂರು ತಾಲ್ಲೂಕಿನ ಎಂಟು ಜನರೂ ಗಂಭೀರ ಸ್ವರೂಪದ ಅನ್ಯ ಕಾಯಿಲೆಗಳಿಂದ ಬಳಲುತ್ತಿದ್ದರು. ಹೊರ ಜಿಲ್ಲೆಯ ವ್ಯಕ್ತಿಯಲ್ಲಿ ಗಂಭೀರ ಸ್ವರೂಪದ ಯಾವುದೇ ಅನ್ಯ ಕಾಯಿಲೆಗಳು ಪತ್ತೆಯಾಗಿಲ್ಲ’ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT