ಮಂಗಳವಾರ, ಆಗಸ್ಟ್ 3, 2021
23 °C
104 ಮಂದಿ ಗುಣಮುಖ: ಸೋಂಕಿನಿಂದ ಇಬ್ಬರ ಸಾವು

ದಕ್ಷಿಣ ಕನ್ನಡ: ಮತ್ತೆ 285 ಮಂದಿಗೆ ಕೋವಿಡ್–19 ದೃಢ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊರೊನಾ ವೈರಸ್ ಸೋಂಕು ಪರೀಕ್ಷೆ– ಸಂಗ್ರಹ ಚಿತ್ರ

ಮಂಗಳೂರು: ಜಿಲ್ಲೆಯಲ್ಲಿ ಭಾನುವಾರ 285 ಮಂದಿಗೆ ಕೋವಿಡ್‌–19 ಸೋಂಕು ತಗುಲಿರುವುದು ದೃಢವಾಗಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 3,596ಕ್ಕೆ ಏರಿಕೆಯಾಗಿದೆ. ಇಬ್ಬರು ಮೃತಪಟ್ಟಿದ್ದು, 104 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ಹೊಸದಾಗಿ ಪತ್ತೆಯಾದ ಪ್ರಕರಣಗಳಲ್ಲಿ ತೀವ್ರ ಉಸಿರಾಟ ಸಮಸ್ಯೆ (ಸಾರಿ) ಮತ್ತು ಶೀತ, ಜ್ವರ (ಐಎಲ್‌ಐ) ಪ್ರಕರಣಗಳು ಹೆಚ್ಚಿದ್ದು, ಸೋಂಕು ಮೂಲ ಪತ್ತೆಯಾಗದ ಪ್ರಕರಣಗಳು ಕೂಡ 60ಕ್ಕೂ ಹೆಚ್ಚಿವೆ. ಸೋಂಕಿತರ ಪ್ರಾಥಮಿಕ ಸಂಪರ್ಕದಿಂದಲೂ ಅನೇಕರಿಗೆ ಸೋಂಕು ಹರಡಿದ್ದು, ಇಂಥವರ ಸಂಪರ್ಕದಲ್ಲಿರುವವರ ಗಂಟಲು ದ್ರವದ ಮಾದರಿ ಪರೀಕ್ಷೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾನುವಾರ ಪತ್ತೆಯಾಗಿರುವ 285 ಮಂದಿಯ ಪೈಕಿ, 3 ವರ್ಷದ ಬಾಲಕಿ, 5 ವರ್ಷದ ಇಬ್ಬರು ಬಾಲಕಿಯರು, 17 ವರ್ಷದ ಬಾಲಕಿ, 1 ವರ್ಷದ ಮತ್ತು 2 ವರ್ಷದ ಗಂಡು ಮಗು, 7, 9, 16, 16 ವರ್ಷದ ಬಾಲಕರು, 17 ವರ್ಷದ ಇಬ್ಬರು ಬಾಲಕರು ಸೇರಿದ್ದಾರೆ.

104 ಗುಣಮುಖ: ವಿವಿಧ ಆಸ್ಪತ್ರೆ, ಆರೈಕೆ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 104 ಮಂದಿ ಭಾನುವಾರ ಗುಣಮುಖರಾಗಿದ್ದು, ಮನೆಗೆ ಮರಳಿದ್ದಾರೆ. ಇದರೊಂದಿಗೆ ಒಟ್ಟು ಗುಣಮುಖರಾದವರ ಸಂಖ್ಯೆ 1,491ಕ್ಕೆ ಏರಿದೆ. 2,028 ಸಕ್ರಿಯ ಪ್ರಕರಣಗಳಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಬ್ಬರು ಸಾವು: ಜಿಲ್ಲೆಯ ಆಸ್ಪತ್ರೆಗಳಲ್ಲಿ ಮೃತರಾದ ಇಬ್ಬರಿಗೆ ಕೋವಿಡ್–19 ಸೋಂಕು ಇರುವುದು ಭಾನುವಾರ ದೃಢವಾಗಿದೆ. ಇದರಿಂದಾಗಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 78ಕ್ಕೆ ಏರಿಕೆಯಾಗಿದೆ.

ಮಂಗಳೂರಿನ 77 ವರ್ಷದ ಮಹಿಳೆ ಕ್ಯಾನ್ಸರ್, ಅಸ್ತಮಾದಿಂದ ಬಳಲುತ್ತಿದ್ದು, ಇದೇ 9 ರಂದು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 18ರಂದು ಅವರು ಮೃತಪಟ್ಟಿದ್ದರು. ಇದೀಗ ಅವರಿಗೆ ಕೋವಿಡ್‌–19 ಇರುವುದು ದೃಢವಾಗಿದೆ.

ಮಂಗಳೂರಿನ 53 ವರ್ಷದ ವ್ಯಕ್ತಿ ಅನಿಯಂತ್ರಿತ ಮಧುಮೇಹದಿಂದ ಬಳಲುತ್ತಿದ್ದರು. ಇವರನ್ನು ಇದೇ 15ರಂದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಭಾನುವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇವರಿಗೂ ಸೋಂಕು ಇರುವುದು ಭಾನುವಾರ ದೃಢವಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ತಿಳಿಸಿದ್ದಾರೆ.

ಚರ್ಚ್‌ ಆವರಣದಲ್ಲಿ ಅಂತ್ಯಕ್ರಿಯೆ: ಕೋವಿಡ್‌–19ನಿಂದ ಮೃತಪಟ್ಟ 67 ವರ್ಷದ ವ್ಯಕ್ತಿಯ ಅಂತ್ಯಕ್ರಿಯೆಯನ್ನು ಶನಿವಾರ ರಾತ್ರಿ ನಗರದ ಕುಲಶೇಖರ ಸಮೀಪದ ಕೋರ್ಡೆಲ್‌ ಚರ್ಚ್‌ ಆವರಣದಲ್ಲಿ ನಡೆಸಲಾಯಿತು.

67 ವರ್ಷದ ಕುಲಶೇಖರ ಶಕ್ತಿನಗರದ ನಿವಾಸಿ ಶನಿವಾರ ಕೋವಿಡ್–19 ನಿಂದ ಮೃತಪಟ್ಟಿದ್ದರು. ಮಂಗಳೂರು ಬಿಷಪ್ ಡಾ. ಪೀಟರ್ ಪಾವ್ಲ್‌ ಸಲ್ದಾನ ಮಾರ್ಗದರ್ಶನದಲ್ಲಿ ಕ್ರೈಸ್ತ ಸಮುದಾಯದ ಪ್ರಮುಖರಾದ ರಾಯ್ ಕ್ಯಾಸ್ಟಲಿನೊ ಮತ್ತು ಲೂವಿ ಪಿಂಟೋ ನೇತೃತ್ವದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಕಾಸರಗೋಡು: 57 ಮಂದಿಗೆ ಕೋವಿಡ್‌

ಕಾಸರಗೋಡು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಭಾನುವಾರ ಮತ್ತೆ 57 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

48 ಮಂದಿಗೆ ಸಂಪರ್ಕದಿಂದ ಸೋಂಕು ತಗುಲಿದೆ. ಈ ಪೈಕಿ ತಲಪಾಡಿ ಗಡಿಯಲ್ಲಿ ಕರ್ತವ್ಯದಲ್ಲಿದ್ದ ಸಶಸ್ತ್ರ ಮೀಸಲು ಪಡೆಯ ಪೊಲೀಸ್‌ ಸಿಬ್ಬಂದಿಯೊಬ್ಬರಿಗೆ ಸೋಂಕು ಇರುವುದು ದೃಢಪಟ್ಟಿದೆ. ಭಾನುವಾರ ಜಿಲ್ಲೆಯಲ್ಲಿ ಮತ್ತೆ 12 ಮಂದಿಗೆ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ನಿಗಾದಲ್ಲಿದ್ದ ಆರೋಪಿ ಆತ್ಮಹತ್ಯೆ: ಕಾಸರಗೋಡಿನ ಕೋವಿಡ್–19 ನಿಗಾ ಕೇಂದ್ರದಲ್ಲಿದ್ದ ಪೋಕ್ಸೊ ಪ್ರಕರಣದ ಆರೋಪಿ ಮಾಲೋಮ್‌ನ ಶೈಜು(38) ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ರಾಜಾಪುರ ಪೂಡಂಕಲ್ಲು ತಾಲ್ಲೂಕು ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಇದೇ 17ರಂದು ನಡೆದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ಬಂಧಿಸಲಾಗಿತ್ತು. ಬಳಿಕ ಆರೋಪಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿತ್ತು. ವೈದ್ಯಕೀಯ ತಪಾಸಣೆಯಲ್ಲಿ ಈತನಿಗೆ ನೆಗೆಟಿವ್ ವರದಿ ಬಂದಿತ್ತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು