ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: 34 ಮಂದಿ ಬಿಡುಗಡೆ, ಮತ್ತೆ 33 ಮಂದಿಗೆ ಕೊರೊನಾ ಸೋಂಕು

ವಿದೇಶದಿಂದ ಬಂದ 15, ಸಂಪರ್ಕದಿಂದ 10 ಮಂದಿಗೆ ಕೋವಿಡ್‌–19 ದೃಢ
Last Updated 26 ಜೂನ್ 2020, 15:48 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ 33 ಮಂದಿಗೆ ಕೋವಿಡ್–19 ದೃಢವಾಗಿದ್ದು, 34 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ.

ಸೌದಿ ಅರೇಬಿಯಾ, ದಮಾಮ್‌, ಕತಾರ್‌ನಿಂದ ನಗರಕ್ಕೆ ಬಂದು ಹೋಟೆಲ್‌ ಕ್ವಾರಂಟೈನ್‌ನಲ್ಲಿ ಇರುವ 15 ಮಂದಿಗೆ ಕೋವಿಡ್‌–19 ಸೋಂಕು ದೃಢವಾಗಿದೆ. ಐಎಲ್‌ಐನ ನಾಲ್ಕು ಹಾಗೂ ಎಸ್‌ಎಆರ್‌ಐನ 2 ಪ್ರಕರಣಗಳು ವರದಿಯಾಗಿವೆ. ಇನ್ನೂ ಇಬ್ಬರಿಗೆ ಸೋಂಕು ತಗಲಿರುವ ಬಗ್ಗೆ ಸಂಪರ್ಕದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಉಳಿದಂತೆ 10 ಮಂದಿಗೆ ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ ಕೋವಿಡ್–19 ತಗಲಿದೆ.

ಐಎಲ್‌ಐ ಸಂಪರ್ಕ: ಇನ್‌ಫ್ಲುಯೆಂಜಾ ಲೈಕ್‌ ಇಲ್‌ನೆಸ್‌ (ಐಎಲ್‌ಐ)ನಿಂದ ಬಳಲುತ್ತಿರುವ ರೋಗಿಗಳ ಸಂಪರ್ಕದಿಂದಲೇ 9 ಮಂದಿಗೆ ಕೊವಿಡ್‌–19 ಸೋಂಕು ದೃಢವಾಗಿದೆ.

ಐಎಲ್‌ಐನಿಂದ ಬಳಲುತ್ತಿದ್ದ 47 ವರ್ಷದ ವ್ಯಕ್ತಿ (ರೋಗಿ ಸಂಖ್ಯೆ 9735) ಸಂಪರ್ಕದಿಂದ ಐವರಿಗೆ ಸೋಂಕು ತಗಲಿದೆ. ಐಎಲ್‌ಐ ಪ್ರಕರಣವಾಗಿರುವ 26 ವರ್ಷದ ಮಹಿಳೆ (ರೋಗಿ ಸಂಖ್ಯೆ 9739), 22 ವರ್ಷದ ಯುವಕ (ರೋಗಿ ಸಂಖ್ಯೆ 8005), 78 ವರ್ಷದ ವೃದ್ಧ (ರೋಗಿ ಸಂಖ್ಯೆ 8004), 68 ವರ್ಷದ ವೃದ್ಧ (ರೋಗಿ ಸಂಖ್ಯೆ 10275) ಸಂಪರ್ಕದಿಂದ ತಲಾ ಒಬ್ಬರಿಗೆ ಸೋಂಕು ತಗಲಿದೆ. ಇನ್ನು ಶಾರ್ಜಾದಿಂದ ಬಂದಿದ್ದ 34 ವರ್ಷದ ಮಹಿಳೆ (ರೋಗಿ ಸಂಖ್ಯೆ 8006) ಸಂಪರ್ಕದಿಂದ ಒಬ್ಬರಿಗೆ ಕೋವಿಡ್–19 ದೃಢವಾಗಿದೆ.

34 ಮಂದಿ ಗುಣಮುಖ: ಕೋವಿಡ್‌–19 ಸೋಂಕು ದೃಢಪಟ್ಟು, ನಗರದ ವೆನ್ಲಾಕ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 1, 4 ಮತ್ತು 12 ವರ್ಷದ ಮಕ್ಕಳು ಸೇರಿದಂತೆ 34 ಮಂದಿ ಗುಣಮುಖರಾಗಿ, ಶುಕ್ರವಾರ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ತಿಳಿಸಿದ್ದಾರೆ.

ನಾಲ್ವರಿಗೆ ಐಸಿಯುನಲ್ಲಿ ಚಿಕಿತ್ಸೆ: ಕೋವಿಡ್–19 ಸೋಂಕಿನಿಂದ ಬಳಲುತ್ತಿರುವ ನಾಲ್ವರಿಗೆ ವೆನ್ಲಾಕ್‌ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

49 ವರ್ಷದ ವ್ಯಕ್ತಿ (ರೋಗಿ ಸಂಖ್ಯೆ 9588) ಮಧುಮೇಹ, ನ್ಯೂಮೋನಿಯಾದಿಂದ ಬಳಲುತ್ತಿದ್ದು, ಎಚ್‌ಎಫ್‌ಎನ್‌ಸಿ ಮೂಲಕ ಆಮ್ಲಜನಕ ನೀಡಿ, ಚಿಕಿತ್ಸೆ ನೀಡಲಾಗುತ್ತಿದೆ.

57 ವರ್ಷದ ಮಹಿಳೆ (ರೋಗಿ ಸಂಖ್ಯೆ 9590) ಲಿವರ್‌ ಕಾಯಿಲೆ, ಮಧುಮೇಹ, ಹೃದ್ರೋಗ ಹಾಗೂ ನ್ಯೂಮೋನಿಯಾದಿಂದ ಬಳಲು
ತ್ತಿದ್ದು, ವೆಂಟಿಲೇಟರ್‌ ಅಳವಡಿಸಲಾಗಿದೆ.

59 ವರ್ಷದ ವ್ಯಕ್ತಿ (ರೋಗಿ ಸಂಖ್ಯೆ 9736) ಹೃದ್ರೋಗ ಮತ್ತು ನ್ಯೂಮೋನಿಯಾದಿಂದ ಬಳಲುತ್ತಿದ್ದಾರೆ. 78 ವರ್ಷದ ವ್ಯಕ್ತಿ (ರೋಗಿ ಸಂಖ್ಯೆ 8004) ಮಧುಮೇಹ, ಅಧಿಕ ರಕ್ತದೊತ್ತಡ, ಪಾರ್ಕಿನ್ಸನ್‌ ಹಾಗೂ ನ್ಯೂಮೋನಿಯಾದಿಂದ ಬಳಲುತ್ತಿದ್ದು, ಇಬ್ಬರಿಗೂ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮಾಜಿ ಶಾಸಕನ ಪುತ್ರನಿಗೆ ಸೋಂಕು

ಸುರತ್ಕಲ್: ಮಾಜಿ ಶಾಸಕರೊಬ್ಬರ ಪುತ್ರನಿಗೆ ಕೋವಿಡ್‌–19 ಸೋಂಕು ಕಂಡುಬಂದಿದ್ದು, ಇಲ್ಲಿನ ಅವರ ಮನೆಯನ್ನು ಸಂಪೂರ್ಣ ಸೀಲ್‌ಡೌನ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಾಜಿ ಶಾಸಕರ ಪುತ್ರ ಈ ಮೊದಲು ಬೆಂಗಳೂರಿನಲ್ಲಿದ್ದರು. ಅವರ ಗಂಟಲಿನ ದ್ರವದ ಪರೀಕ್ಷಾ ವರದಿಯಲ್ಲಿ ಸೋಂಕು ಇರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಅವರನ್ನು ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ಮನೆಯ ಇತರ ಸದಸ್ಯರ ವರದಿ ನೆಗೆಟಿವ್ ಬಂದಿದ್ದು, ಸಾರ್ವಜನಿಕರು ಮನೆಗೆ ಭೇಟಿ ನೀಡುವುದನ್ನು ಬಂದ್‌ ಮಾಡಲಾಗಿದೆ. ಬ್ಯಾರಿಕೇಡ್ ಹಾಕಿ ಸೀಲ್‌ಡೌನ್ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT