ಉಪ್ಪಿನಂಗಡಿ: 34-ನೆಕ್ಕಿಲಾಡಿಯಲ್ಲಿ ಹರಿಯುವ ಕುಮಾರಧಾರಾ ನದಿಯಿಂದ ಪುತ್ತೂರಿಗೆ ಕೊಂಡೊಯ್ಯುವ ಶುದ್ಧ ಕುಡಿಯುವ ನೀರನ್ನು ನೆಕ್ಕಿಲಾಡಿ ಗ್ರಾಮದವರಿಗೂ ನೀಡಬೇಕು. ಇದನ್ನು ಕಡೆಗಣಿಸಿದರೆ ನಾವು ಹೈಕೋರ್ಟ್ ಮೊರೆ ಹೋಗುತ್ತೇವೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದರು.
34-ನೆಕ್ಕಿಲಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಾತಾ ರೈ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮ ಸಭೆಯಲ್ಲಿ ಶುದ್ಧ ಕುಡಿಯುವ ನೀರು ಸರಬರಾಜು ಆಗದ ಬಗ್ಗೆ ಅಳಲು ತೋಡಿಕೊಂಡ ಗ್ರಾಮಸ್ಥರು, ಗ್ರಾಮದಿಂದ ಪುತ್ತೂರಿಗೆ ಕೊಂಡೊಯ್ಯುವ ಜಲಸಿರಿ ಯೋಜನೆಯ ನೀರನ್ನು ಗ್ರಾಮಕ್ಕೂ ನೀಡಬೇಕು ಎಂದು ಆಗ್ರಹಿಸಿದರು.
ಗ್ರಾಮ ಸಭೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ವಿಷಯ ಪ್ರಸ್ತಾಪಿಸಿದ ಗ್ರಾಮಸ್ಥರು 34-ನೆಕ್ಕಿಲಾಡಿಯಲ್ಲಿ ಕೊಳವೆ ಬಾವಿಯಲ್ಲಿ ಗುಣಮಟ್ಟದ ಕುಡಿಯುವ ನೀರು ಸಿಗುತ್ತಿಲ್ಲ ಎಂದರು. ಇದಕ್ಕೆ ಗ್ರಾಮಸ್ಥರಾದ ರಫೀಕ್, ಅಸ್ಕರ್ ಅಲಿ ದನಿ ಗೂಡಿಸಿದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸತೀಶ ಬಂಗೇರ ಮಾತನಾಡಿ, ಜಲಸಿರಿಯ ಸಭೆಯಲ್ಲಿ ನೆಕ್ಕಿಲಾಡಿಗೆ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ನೀರು ಕೊಡುವುದು. ಜಲಸಿರಿಯಿಂದ ಕೊಡುವುದು ಬೇಡ ಎಂದು ನಿರ್ಧಾರ ಆಗಿದೆ ಎಂದರು.
ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಆರಂಭವೇ ಆಗಿಲ್ಲ. ಅದಕ್ಕೆ ಸುಮಾರು 15 ವರ್ಷ ಆಗಬಹುದು. ಜಲಸಿರಿ ಅಧಿಕಾರಿಗಳು ನೆಕ್ಕಿಲಾಡಿಗೆ ಬಂದು ಇಲ್ಲಿನ ಗ್ರಾಮಸ್ಥರೊಂದಿಗೆ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಬೇಕು ಅಸ್ಕರ್ ಅಲಿ ಆಗ್ರಹಿಸಿದರು.
ಉಪ್ಪಿನಂಗಡಿ ಮೆಸ್ಕಾಂ ಉಪ ವಿಭಾಗವಾಗಲಿ: ಕರ್ವೇಲುವಿನಲ್ಲಿ ನಿರ್ಮಾಣವಾಗಲಿರುವ 110 ಕೆ.ವಿ. ವಿದ್ಯುತ್ ಉಪಕೇಂದ್ರದ ಪ್ರಕ್ರಿಯೆಗಳನ್ನು ಶೀಘ್ರವೇ ಪೂರ್ಣಗೊಳಿಸಿ, ಅಲ್ಲಿ ವಿದ್ಯುತ್ ಉಪಕೇಂದ್ರ ನಿರ್ಮಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
ಮೆಸ್ಕಾಂ ಉಪ್ಪಿನಂಗಡಿ ಶಾಖೆಯ ಸಹಾಯಕ ಎಂಜಿನಿಯರ್ ನಿತಿನ್ ಕುಮಾರ್ ಮಾತನಾಡಿ, ಕರ್ವೇಲುನಲ್ಲಿ 110 ಕೆ.ವಿ. ವಿದ್ಯುತ್ ಉಪಕೇಂದ್ರಕ್ಕೆ ಜಾಗ ಮಂಜೂರಾಗಿದ್ದು, ಡಿ.ಪಿ.ಆರ್. ಅನುಮೋದನೆಗೆ ಬಾಕಿ ಇದೆ ಎಂದರು.
ಪುತ್ತೂರು ವಲಯ ಅರಣ್ಯಾಧಿಕಾರಿ ಕಿರಣ್ ನಿಯಂತ್ರಣಾಧಿಕಾರಿಯಾಗಿದ್ದರು. ಪ್ರಮುಖರಾದ ಹರೀಶ್ ಡಿ., ಅನಿ ಮಿನೇಜಸ್, ಪ್ರಶಾಂತ್, ಸ್ವಪ್ನ, ತುಳಸಿ, ರತ್ನಾವತಿ, ರಮೇಶ್ ನಾಯ್ಕ, ವೇದಾವತಿ, ಗೀತಾ, ಹರೀಶ್ ಕೆ., ವಿಜಯಕುಮಾರ್, ಮುಹಮ್ಮದ್ ಫಯಾಜ್, ಅಬ್ದುಲ್ ಖಾದರ್, ಶರೀಕ್ ಅರಫಾ, ವಿಶ್ವನಾಥ, ಧರ್ಣಪ್ಪ ಗೌಡ, ಅಬ್ದುಲ್ ರಹಿಮಾನ್ ಮೇದರಬೆಟ್ಟು, ಜೆರಾಲ್ಡ್ ಮಸ್ಕರೇನಸ್, ರಾಜೀವ ನಾಯ್ಕ, ನಾರಾಯಣ ನಾಯ್ಕ ಭಾಗವಹಿಸಿದ್ದರು. ಗ್ರಾಮ ಪಂಚಾಯಿತಿ ಲೆಕ್ಕ ಸಹಾಯಕ ದೇವಪ್ಪ ನಾಯ್ಕ ಸ್ವಾಗತಿಸಿ, ಪಿಡಿಒ ಸತೀಶ ಬಂಗೇರ ವರದಿ ವಾಚಿಸಿದರು.
ದ.ಕ. ಜಿಲ್ಲೆಗೆ ಮೆಡಿಕಲ್ ಕಾಲೇಜು ಮಂಜೂರು ಮಾಡುವುದಾದರೆ ಅದನ್ನು ಪುತ್ತೂರು ತಾಲ್ಲೂಕಿಗೆ ಮಂಜೂರುಗೊಳಿಸಬೇಕು ಎಂದು ಆಗ್ರಹಿಸಿ ನಿರ್ಣಯ ಅಂಗೀಕರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.