ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರವಿ ಪೂಜಾರಿ ವಿರುದ್ಧ 35 ಪ್ರಕರಣ

ವಶಕ್ಕೆ ಪಡೆಯಲು ಮಂಗಳೂರು, ದ.ಕ. ಪೊಲೀಸರ ಸಿದ್ಧತೆ
Last Updated 25 ಫೆಬ್ರುವರಿ 2020, 4:08 IST
ಅಕ್ಷರ ಗಾತ್ರ

ಮಂಗಳೂರು: ಹಲವು ವರ್ಷಗಳಿಂದ ವಿದೇಶಗಳಲ್ಲಿ ತಲೆಮರೆಸಿಕೊಂಡು ಪಾತಕ ಕೃತ್ಯಗಳನ್ನು ಎಸಗುತ್ತಿದ್ದ ಭೂಗತ ಪಾತಕಿ ರವಿ ಪೂಜಾರಿ ವಿರುದ್ಧ ಮಂಗಳೂರು ನಗರ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವ್ಯಾಪ್ತಿಯಲ್ಲಿ ಒಟ್ಟು 35 ಪ್ರಕರಣಗಳು ಬಾಕಿ ಇವೆ.

ಮಂಗಳೂರು ನಗರದ ವ್ಯಾಪ್ತಿಯಲ್ಲೇ 33 ಪ್ರಕರಣಗಳಲ್ಲಿ ಆತನ ವಿರುದ್ಧ ಆರೋಪಗಳಿವೆ. ಜಿಲ್ಲಾ ಪೊಲೀಸ್‌ ವ್ಯಾಪ್ತಿಯಲ್ಲಿ ಎರಡು ಪ್ರಕರಣಗಳಿವೆ. ಸೆನೆಗಲ್‌ನಿಂದ ಕರೆತಂದಿರುವ ರವಿ ಪೂಜಾರಿಯನ್ನು ಬಾಕಿ ಇರುವ ಪ್ರಕರಣಗಳ ಸಂಬಂಧ ವಶಕ್ಕೆ ಪಡೆಯುವುದಕ್ಕಾಗಿ ಮಂಗಳೂರು ನಗರ ಪೊಲೀಸ್‌ ಕಮಿಷನರೇಟ್‌ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಸಿದ್ಧತೆ ನಡೆಸಿದ್ದಾರೆ.

ನೆರೆಯ ಉಡುಪಿ ಜಿಲ್ಲೆಯ ಮಲ್ಪೆಯಲ್ಲಿ ಜನಿಸಿದ್ದ ರವಿ ಪೂಜಾರಿ, ಬಾಲ್ಯದಲ್ಲೇ ಮುಂಬೈ ಸೇರಿದ್ದ. ಯೌವ್ವನದ ದಿನಗಳಲ್ಲೇ ಭೂಗತ ಲೋಕ ಪ್ರವೇಶಿಸಿದ್ದ. ಆರಂಭದ ದಿನಗಳಿಂದಲೂ ಈತ ಮಂಗಳೂರಿನ ಮೇಲೆ ಹಿಡಿತ ಸಾಧಿಸಲು ಯತ್ನಿಸುತ್ತಿದ್ದ. ಕೊಲೆ, ಕೊಲೆಯತ್ನ, ಕೊಲೆ ಬೆದರಿಕೆ, ಹಫ್ತಾ ವಸೂಲಿಗೆ ಬೆದರಿಕೆ ಸೇರಿದಂತೆ ಹಲವು ಆರೋಪಗಳಿಗೆ ಸಂಬಂಧಿಸಿದ ಪ್ರಕರಣಗಳು ಈತನ ವಿರುದ್ಧ ಜಿಲ್ಲೆಯಲ್ಲಿ ದಾಖಲಾಗಿವೆ.

2007ರಲ್ಲಿ ಮಂಗಳೂರಿನ ಶಬನಮ್‌ ಡೆವಲಪರ್ಸ್‌ ಮೇಲೆ ನಡೆದ ಗುಂಡಿನ ದಾಳಿ, 2009ರಲ್ಲಿ ನಡೆದ ವಕೀಲ ನೌಶಾದ್‌ ಖಾಸಿಮ್ ಕೊಲೆ ಪ್ರಕರಣ ಸೇರಿದಂತೆ ಮಂಗಳೂರು ನಗರದ ವ್ಯಾಪ್ತಿಯಲ್ಲೇ 33 ಪ್ರಕರಣಗಳು ಈತನ ವಿರುದ್ಧ ದಾಖಲಾಗಿವೆ. ಪುತ್ತೂರಿನಲ್ಲಿ ಆಭರಣ ಮಳಿಗೆ ಮೇಲೆ ಗುಂಡಿನ ದಾಳಿ ಸೇರಿದಂತೆ ಜಿಲ್ಲಾ ಪೊಲೀಸ್‌ ವ್ಯಾಪ್ತಿಯಲ್ಲಿ ಎರಡು ಪ್ರಕರಣಗಳಿವೆ.

ಬೆದರಿಕೆ ಪ್ರಕರಣಗಳೇ ಹೆಚ್ಚು: ಹಫ್ತಾ ವಸೂಲಿಗಾಗಿ ಬೆದರಿಕೆ ಹಾಕಿರುವುದು ಮತ್ತು ಹಿಂದುತ್ವ ಪರ ಸಂಘಟನೆಗಳ ಕಾರ್ಯಕರ್ತರ ಕೊಲೆ, ಕೊಲೆಯತ್ನ ಪ್ರಕರಣಗಳು ನಡೆದಾಗ ರಾಜಕೀಯ ಮುಖಂಡರಿಗೆ ಬೆದರಿಕೆ ಹಾಕಿರುವ ಹೆಚ್ಚು ಪ್ರಕರಣಗಳು ರವಿ ಪೂಜಾರಿ ವಿರುದ್ಧ ಬಾಕಿ ಇವೆ.

ಮೂಡುಬಿದಿರೆಯ ಬಜರಂಗದಳದ ಕಾರ್ಯಕರ್ತ ಪ್ರಶಾಂತ್‌ ಪೂಜಾರಿ ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ವಿಳಂಬವಾಗಿದೆ ಎಂದು ಆರೋಪಿಸಿ ಸಚಿವರಾಗಿದ್ದ ಬಿ.ರಮಾನಾಥ ರೈ, ಕೆ.ಅಭಯಚಂದ್ರ ಜೈನ್‌ ಸೇರಿದಂತೆ ಹಲವರಿಗೆ ಬೆದರಿಕೆ ಹಾಕಿದ್ದ ಆರೋಪವಿದೆ. ಈ ಸಂಬಂಧ ಕೂಡ ಪ್ರಕರಣಗಳು ಬಾಕಿ ಇವೆ.

ರವಿ ಪೂಜಾರಿಯ ಬಂಧನಕ್ಕಾಗಿ ಮಂಗಳೂರು ನಗರ ಪೊಲೀಸರು ಇಂಟರ್‌ಪೋಲ್‌ ನೆರವಿನಲ್ಲಿ 2012ರಲ್ಲೇ ರೆಡ್‌ ಕಾರ್ನರ್‌ ನೋಟಿಸ್‌ ಹೊರಡಿಸಿದ್ದರು. 2017ರಲ್ಲಿ ಅದನ್ನು ನವೀಕರಿಸಲಾಗಿತ್ತು.

‘ರವಿ ಪೂಜಾರಿ ವಿರುದ್ಧ ಮಂಗಳೂರು ನಗರ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವ್ಯಾಪ್ತಿಯಲ್ಲಿ ಬಾಕಿ ಇರುವ ಪ್ರಕರಣಗಳ ವಿವರವನ್ನು ಬಹಳ ಹಿಂದೆಯೇ ಗೃಹ ಇಲಾಖೆಗೆ ಸಲ್ಲಿಸಲಾಗಿದೆ. ಈಗ ನ್ಯಾಯಾಲಯಕ್ಕೆ ದಾಖಲೆ ಸಲ್ಲಿಸಿ ಆತನನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಬೇಕಿದೆ. ಅದಕ್ಕೆ ಸಿದ್ಧತೆ ಮಾಡಲಾಗುತ್ತಿದೆ’ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT