ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ತಿಂಗಳಲ್ಲಿ 362 ಪ್ರಕರಣ: ವಿಮಾನ ನಿಲ್ದಾಣದಲ್ಲಿ ಕಟ್ಟುನಿಟ್ಟಿನ ತಪಾಸಣೆ

ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಟ್ಟುನಿಟ್ಟಿನ ತಪಾಸಣೆ
Last Updated 19 ಮಾರ್ಚ್ 2021, 13:44 IST
ಅಕ್ಷರ ಗಾತ್ರ

ಮಂಗಳೂರು: ವಿದೇಶ ಹಾಗೂ ಬೇರೆ ರಾಜ್ಯಗಳಿಂದ ವಿಮಾನದ ಮೂಲಕ ನಗರಕ್ಕೆ ಬರುವ ಪ್ರಯಾಣಿಕರ ಕೋವಿಡ್–19 ತಪಾಸಣೆಯನ್ನ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಬಿಗಿಗೊಳಿಸಲಾಗಿದೆ. ಡಿಸೆಂಬರ್‌ 28 ರಿಂದ ಮಾರ್ಚ್‌ 13 ರವರೆಗೆ ಒಟ್ಟು 362 ಮಂದಿಗೆ ಕೋವಿಡ್–19 ಇರುವುದು ದೃಢವಾಗಿದೆ.

ವಿಮಾನದ ಮೂಲಕ ಬಂದಿಳಿಯುವ ಪ್ರಯಾಣಿಕರ ಮೇಲೆ ಜಿಲ್ಲಾಡಳಿತ ನಿಗಾ ವಹಿಸಿದ್ದು, ಕೋವಿಡ್–19 ನೆಗೆಟಿವ್‌ ಪ್ರಮಾಣಪತ್ರ ಪಡೆಯಲಾಗುತ್ತಿದೆ. ಜೊತೆಗೆ ಪ್ರಮಾಣಪತ್ರ ಇಲ್ಲದವರ ಗಂಟಲು ದ್ರವ ಪರೀಕ್ಷೆ ಮಾಡಲಾಗುತ್ತಿದೆ.

ಮೂರು ತಿಂಗಳಲ್ಲಿ ವಿದೇಶದಿಂದ ಬಂದ 16 ಸಾವಿರ ಮಂದಿಯ ಗಂಟಲು ದ್ರವ ಪರೀಕ್ಷೆ ಮಾಡಲಾಗಿದ್ದು, ಒಟ್ಟಾರೆ 362 ಜನರಿಗೆ ಕೋವಿಡ್–19 ಇರುವುದು ಪತ್ತೆಯಾಗಿದೆ. ಜನವರಿಯಲ್ಲಿ 4,214 ಮಂದಿಯನ್ನು ತಪಾಸಣೆಗೆ ಒಳಪಡಿಸಿದ್ದು, 123 ಪ್ರಕರಣ ಪತ್ತೆಯಾಗಿವೆ. ಫೆಬ್ರುವರಿಯಲ್ಲಿ 5,829 ಜನರ ತಪಾಸಣೆ ಮಾಡಿದ್ದು, 157 ಮಂದಿಗೆ ಕೋವಿಡ್–19 ಖಚಿತವಾಗಿದೆ. ಮಾರ್ಚ್‌ ಮೊದಲ ಎರಡು ವಾರದಲ್ಲಿ 5,829 ಜನರ ಪರೀಕ್ಷೆ ಮಾಡಿದ್ದು, 79 ಜನರಿಗೆ ಕೋವಿಡ್–19 ದೃಢವಾಗಿದೆ.

ಆರೋಗ್ಯ ಇಲಾಖೆಯು ವಿಮಾನ ನಿಲ್ದಾಣದಲ್ಲಿ ತಾಂತ್ರಿಕ ಸಿಬ್ಬಂದಿಯನ್ನು ನಿಯೋಜಿಸಿದ್ದು, ಬೆಂಗಳೂರಿನ ಏಜೆನ್ಸಿಯೊಂದು ಕೋವಿಡ್–19 ಪರೀಕ್ಷಾ ಕೇಂದ್ರವನ್ನು ಆರಂಭಿಸಿದೆ. 24 ಗಂಟೆಯಲ್ಲಿ ವರದಿ ನೀಡಲಾಗುತ್ತಿದೆ. ಗುರುವಾರ ವಿಮಾನ ನಿಲ್ದಾಣದಲ್ಲಿ 13 ಪ್ರಕರಣಗಳು ವರದಿಯಾಗಿವೆ ಎಂದು ಜಿಲ್ಲಾ ನೋಡೆಲ್‌ ಅಧಿಕಾರಿ ಡಾ.ಎಚ್‌. ಅಶೋಕ ತಿಳಿಸಿದ್ದಾರೆ.

ವಿಮಾನ ನಿಲ್ದಾಣದ ಅಧಿಕಾರಿಗಳು, ಸಿಬ್ಬಂದಿಯ ಜೊತೆಗೆ ಸಭೆ ನಡೆಸಲಾಗಿದ್ದು, ಕೋವಿಡ್–19 ಮಾರ್ಗಸೂಚಿ ಪಾಲಿಸಲು ಸೂಚನೆ ನೀಡಲಾಗಿದೆ. ವಿದೇಶದಿಂದ ಬರುವವರ ಜೊತೆಗೆ ಮುಂಬೈನಿಂದ ಬರುವವರ ಮೇಲೂ ನಿಗಾ ಇಡಲಾಗಿದೆ. ಆರ್‌ಟಿಪಿಸಿಆರ್‌ ನೆಗೆಟಿವ್‌ ಪ್ರಮಾಣಪತ್ರ ಸಲ್ಲಿಸದೇ ಇದ್ದವರನ್ನು ಇಲ್ಲಿನ ವಿಮಾನ ನಿಲ್ದಾಣದಲ್ಲಿ ತಪಾಸಣೆಗೆ ಒಳಪಡಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಬೆಂಗಳೂರು ವಿಮಾನ ನಿಲ್ದಾಣದ ಬಳಿಕ ಗಲ್ಫ್‌ ರಾಷ್ಟ್ರಗಳಿಂದ ಹೆಚ್ಚು ಜನರು ಮಂಗಳೂರು ವಿಮಾನ ನಿಲ್ದಾಣಕ್ಕೆ ಬರುತ್ತಾರೆ. ಈ ಪೈಕಿ ಕೇರಳದವರೇ ಅಧಿಕವಾಗಿದ್ದಾರೆ. ಬೇರೆ ರಾಜ್ಯದ ವ್ಯಕ್ತಿಗೆ ಕೋವಿಡ್–19 ದೃಢವಾದರೆ, ಅವರ ಸಂಪರ್ಕಿತರನ್ನು ಪತ್ತೆ ಮಾಡುವುದು ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

‘ಲಸಿಕೆ: ಮಸೀದಿಗಳಲ್ಲಿ ಜಾಗೃತಿ ಮೂಡಿಸಿ’

ಜಿಲ್ಲೆಯ ಎಲ್ಲ ಮಸೀದಿಗಳಲ್ಲಿ ಲಸಿಕೆ ಪಡೆಯುವ ಬಗ್ಗೆ ಜನಜಾಗೃತಿ ಮೂಡಿಸಲು ವಕ್ಫ್ ಸಮಿತಿ ಮನವಿ ಮಾಡಿದೆ.

ಕೋವಿಡ್‌–19 ನಾಗರಿಕ ಸಮಾಜವನ್ನು ತಲ್ಲಣಗೊಳಿಸಿದ್ದು, ಈ ವಿಕೋಪದ ನಿಯಂತ್ರಣಕ್ಕಾಗಿ ಸರ್ಕಾರದ ಮುಂಜಾಗ್ರತಾ ಕ್ರಮ ಅನುಸರಿಸುವುದರ ಜೊತೆಗೆ ಲಸಿಕೆ ಹಾಕಿಸಿಕೊಳ್ಳಬೇಕು. ಈಗಾಗಲೇ 3ನೇ ಹಂತದ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮ ಆರಂಭವಾಗಿದ್ದು, 45ರಿಂದ 59 ವಯಸ್ಸಿನವರು ಹಾಗೂ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಲಸಿಕೆ ಪಡೆಯಬಹುದು.

ಜಿಲ್ಲೆಯ ಎಲ್ಲ ಮಸೀದಿಗಳಲ್ಲಿ ಜುಮಾ ನಮಾಝಿನ ನಂತರ ಈ ವಿಷಯವನ್ನು ಪ್ರಚುರ ಪಡಿಸಲು ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಯು.ಕೆ. ಮೋನು ಕಣಚೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಲಸಿಕೆ ಪಡೆದ ನಳಿನ್‌ಕುಮಾರ್‌

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ, ಸಂಸದ ನಳಿನ್‌ಕುಮಾರ್ ಕಟೀಲ್, ಕೋವಿಡ್–19 ನಿರೋಧಕ ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ. ನಗರದ ಎ.ಜೆ ಆಸ್ಪತ್ರೆಯಲ್ಲಿ ಶುಕ್ರವಾರ ನಳಿನ್ ಅವರಿಗೆ ಲಸಿಕೆ ನೀಡಲಾಯಿತು.

ನಂತರ ಮಾತನಾಡಿದ ಅವರು, ‘ಕೋವಿಡ್–19 ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲರೂ ಲಸಿಕೆ ಸ್ವೀಕರಿಸಬೇಕು. ರಾಜ್ಯದ ಹಿರಿಯ ನಾಗರಿಕರು, ಅರ್ಹ ವ್ಯಕ್ತಿಗಳು ಆದಷ್ಟು ಬೇಗ ನೋಂದಣಿ ಮಾಡಿಕೊಂಡು ಲಸಿಕೆ ಪಡೆಯುವ ಮೂಲಕ ದೇಶವನ್ನು ಕೋವಿಡ್–19 ಮುಕ್ತವಾಗಿಸಲು ನಾವೆಲ್ಲರೂ ಕೈಜೋಡಿಸೋಣ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT