ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ವಾರದಲ್ಲಿ 4,962 ಮಂದಿಗೆ ಕೋವಿಡ್‌, ಪಾಸಿಟಿವಿಟಿ ದರ ಏರಿಳಿತ

ಜಿಲ್ಲೆಯಲ್ಲಿ ಕೋವಿಡ್–19 ಪರೀಕ್ಷೆ ಪ್ರಮಾಣ ಹೆಚ್ಚಳ
Last Updated 22 ಜೂನ್ 2021, 2:06 IST
ಅಕ್ಷರ ಗಾತ್ರ

ಮಂಗಳೂರು: ಜಿಲ್ಲೆಯಲ್ಲಿ ಕೋವಿಡ್–19 ಪರೀಕ್ಷೆ ಹೆಚ್ಚಾಗುತ್ತಿದ್ದು, ಕಳೆದ ಕೆಲ ದಿನಗಳಿಂದ ಹೊಸ ಸೋಂಕಿತರ ಸಂಖ್ಯೆಯಲ್ಲಿ ಏರಿಳಿತ ಕಂಡು ಬರುತ್ತಿತ್ತು. ಎರಡು ದಿನಗಳಿಂದ ಪಾಸಿಟಿವಿಟಿ ದರ ಕುಸಿತವಾಗುತ್ತಿದೆ. ಅದರಂತೆ ಭಾನುವಾರ ಶೇ 4.95ರಷ್ಟಿದ್ದ ಪಾಸಿಟಿವಿಟಿ ದರ, ಸೋಮವಾರ ಶೇ 6.44ಕ್ಕೆ ಏರಿಕೆಯಾಗಿದೆ.

ಒಂದು ವಾರದಲ್ಲಿ ಒಟ್ಟು 66,028 ಮಂದಿಯನ್ನು ತಪಾಸಣೆಗೆ ಒಳಪಡಿಸಿದ್ದು, ಒಟ್ಟು 4,962 ಮಂದಿಗೆ ಕೋವಿಡ್–19 ದೃಢವಾಗಿದೆ. ಈ ಮೂಲಕ ಒಂದು ವಾರದಲ್ಲಿ ಕೋವಿಡ್–19 ಪಾಸಿಟಿವಿಟಿ ದರ ಶೇ 7.51ರಷ್ಟಿದೆ.

ಮೊದಲನೇ ಅಲೆಗೆ ಹೋಲಿಸಿದರೆ ಎರಡನೇ ಅಲೆಯ ತೀವ್ರತೆ ಜೋರಾಗಿದೆ. ಆರೋಗ್ಯ ಇಲಾಖೆಯ ಮಾಹಿತಿಯಂತೆ ಜಿಲ್ಲೆಯಲ್ಲಿ ಮೂರೂವರೆ ತಿಂಗಳುಗಳಲ್ಲಿ ಅರ್ಧ ಲಕ್ಷಕ್ಕೂ ಹೆಚ್ಚಿನ ಮಂದಿಗೆ ಕೋವಿಡ್–19 ದೃಢಪಟ್ಟಿದೆ.

ಕೋವಿಡ್–19 ಮೊದಲನೇ ಅಲೆಯಲ್ಲಿ (2021ರ ಮಾರ್ಚ್‌ ಅಂತ್ಯದವರೆಗೆ) ಜಿಲ್ಲೆಯಲ್ಲಿ 35,697 ಮಂದಿಗೆ ಕೋವಿಡ್ ದೃಢಪಟ್ಟಿತ್ತು. ಬಳಿಕ ಮೂರೂವರೆ ತಿಂಗಳಿನಲ್ಲಿ ಅಂದರೆ, ಜೂನ್‌ 17ರವರೆಗೆ 51,903 ಮಂದಿಗೆ ಸೋಂಕು ತಗುಲಿದೆ.

ಮೊದಲ ಅಲೆಯಲ್ಲಿ ಹಿರಿಯ ನಾಗರಿಕರು ಹೆಚ್ಚಾಗಿ ಸೋಂಕಿಗೆ ಒಳಪಟ್ಟಿದ್ದರು. ಆದರೆ 2ನೇ ಅಲೆಯಲ್ಲಿ ಯುವಕರೇ ಹೆಚ್ಚಾಗಿ ಕೋವಿಡ್–19 ಬಾಧಿತರಾಗಿದ್ದಾರೆ. 21 ರಿಂದ 30 ವರ್ಷದೊಳಗಿನ 4,994 ಮಂದಿ ಮಹಿಳೆಯರು ಹಾಗೂ 5,437 ಮಂದಿ ಪುರುಷರು ಸೇರಿ ಒಟ್ಟು 10,431 ಮಂದಿಗೆ ಸೋಂಕು ಬಾಧಿಸಿದೆ. 31 ರಿಂದ 40 ವರ್ಷದೊಳಗಿನ 4,260 ಮಹಿಳೆಯರು ಮತ್ತು 5,220 ಪುರುಷರು ಸೇರಿದಂತೆ 9,480 ಮಂದಿಗೆ ಸೋಂಕು ತಗುಲಿದೆ.

ಯುವಕರು ಕೊರೊನಾ ಎರಡನೇ ಅಲೆ ಕುರಿತು ಸಾಕಷ್ಟು ಮುನ್ನೆಚ್ಚರಿಕೆ ವಹಿಸದೇ ಇರುವುದರಿಂದ ಅವರಿಗೆ ಹೆಚ್ಚಾಗಿ ಕೋವಿಡ್–19 ಬಾಧಿಸಿದೆ ಎಂದು ತಜ್ಞರು ಈಗಾಗಲೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹೆಚ್ಚುತ್ತಿರುವ ಸಾವು: ಜಿಲ್ಲೆಯಲ್ಲಿ ಪ್ರಕರಣ ಏರಿಳಿತದ ಮಧ್ಯೆ ಜತೆಗೆ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಸಾವಿನ ಸಂಖ್ಯೆ ಕೆಲದಿನಗಳಿಂದ ನಿತ್ಯ ಎರಡಂಕಿಗೆ ಏರಿದೆ.

ಸೋಂಕಿನ ಲಕ್ಷಣ ಕಾಣಿಸಿ ಕೊಂಡ ಕೂಡಲೇ ತಪಾಸಣೆಗೆ ಒಳಗಾಗದಿ ರುವುದು, ಉಲ್ಬಣಗೊಂಡ ಬಳಿಕವಷ್ಟೇ ಆಸ್ಪತ್ರೆಗೆ ದಾಖಲಾಗುವುದು, ಲಸಿಕೆ ಅಭಿಯಾನಕ್ಕೆ ವೇಗ ಸಿಗದಿರುವುದು, ಕೋವಿಡ್‌–19 ಬಗ್ಗೆ ಜನರಲ್ಲಿರುವ ನಿರ್ಲಕ್ಷ್ಯ, ಪ್ರಾಥಮಿಕ ಸಂಪರ್ಕ, ಪ್ರವಾಸದ ವಿವರವನ್ನು ಮುಚ್ಚಿಡುವುದು ಸೇರಿದಂತೆ ಹಲವು ವಿಷಯಗಳು ಇದಕ್ಕೆ ಕಾರಣ ಎನ್ನುವುದು ವೈದ್ಯರ ಅಭಿಪ್ರಾಯ.

ಖರೀದಿಗೆ ಅವಧಿ ಹೆಚ್ಚಳ: ಮುಗಿಬಿದ್ದ ಜನ

ನಗರದ ಸ್ಟೇಟ್‌ಬ್ಯಾಂಕ್, ಕಂಕನಾಡಿ, ಮಲ್ಲಿಕಟ್ಟೆ, ಉರ್ವ ಸೇರಿದಂತೆ ಹಲವೆಡೆ ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಸೋಮವಾರ ಜನರು ಮುಗಿಬಿದ್ದಿದ್ದರು. ನಗರದ ಸ್ಟೇಟ್‌ಬ್ಯಾಂಕ್ ಸಮೀಪದ ಮೀನು ಮಾರುಕಟ್ಟೆಯಲ್ಲಿ ಗ್ರಾಹಕರು ಖರೀದಿಯಲ್ಲಿ ಉತ್ಸುಕರಾಗಿದ್ದರು. ಮಾಂಸದಂಗಡಿ ಮುಂದೆಯೂ ಗ್ರಾಹಕರು ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡು ಬಂದವು.

ದಿನಸಿ ಹೊತ್ತ ಲಾರಿಗಳು, ಕಾರು, ರಿಕ್ಷಾಗಳು ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆಗೆ ಇಳಿದಿದ್ದವು. ಬಂದರು ರಸ್ತೆಯಂತೂ ವಾಹನಗಳಿಂದ ತುಂಬಿಹೋಗಿತ್ತು. ಸ್ಟೇಟ್‌ಬ್ಯಾಂಕ್‌ನಿಂದ ಬಂದರ್ ಠಾಣೆ ಮಾರ್ಗವಾಗಿ ವಾಹನಗಳು ಮುಂದೆ ಸಾಗಲು ಸಾಕಷ್ಟು ತೊಂದರೆ ಅನುಭವಿಸುವಂತಾಯಿತು. ಬಂದರು ಠಾಣೆಯ ಸಮೀಪದ ಜಂಕ್ಷನ್‌ನಲ್ಲಿ ಟ್ರಾಫಿಕ್ ನಿಯಂತ್ರಿಸಲು ಪೊಲೀಸರು ಹರಸಾಹಸ ಮಾಡುವಂತಾಗಿತ್ತು.

ಎಲಾಸ್ಟಿಕ್ ಬಟ್ಟೆ ಹಾಳಾಗಿದ್ದು, ಹಾಕಿದ ಬಂಡವಾಳವೇ ಕೈಸೇರದಂತಾಗಿದೆ. ಲಾಕ್‌ಡೌನ್ ಸಡಿಲಿಕೆ ಮಾಡಿ, ವ್ಯಾಪಾರಕ್ಕೆ ಅನುವು ಮಾಡಿಕೊಟ್ಟರೆ ಸಾಕು ಎಂದು ಬಟ್ಟೆ ವ್ಯಾಪಾರಿ ಪ್ರವೀಣ್‌ಚಂದ್ರ ರಾವ್ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT