ಭಾನುವಾರ, ಆಗಸ್ಟ್ 14, 2022
26 °C
ತುಳು, ಕನ್ನಡ, ಗ್ರಾಮೀಣ ಸಿನಿಪ್ರಿಯರ ‘ಮಂದಿರ’

ನೆನಪಿನಂಗಳಕೆ ಜಾರಲಿದೆ ‘ಜ್ಯೋತಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಕರಾವಳಿಯ ತುಳು–ಕನ್ನಡ ಸಿನಿಪ್ರಿಯರ ಅಚ್ಚುಮೆಚ್ಚಿನ ಮಂದಿರವಾಗಿದ್ದ ‘ಜ್ಯೋತಿ’ ನೆನಪಿನಂಗಳಕ್ಕೆ ಜಾರಲಿದೆ.

50 ವರ್ಷಗಳ ಕಾಲ ಹೊಚ್ಚ ಹೊಸ ಕನ್ನಡ, ತುಳು, ಹಿಂದಿ ಸಿನಿಮಾಗಳನ್ನು ಪ್ರದರ್ಶಿಸಿದ್ದ ‘ಜ್ಯೋತಿ’ ಜನರ ಬಾಯಲ್ಲಿ ಸ್ಥಳನಾಮವೇ ಆಗಿ ಬದಲಾಗಿತ್ತು. ಕೇವಲ ಚಿತ್ರಮಂದಿರ ಮಾತ್ರವಲ್ಲ, ಈ ವೃತ್ತವನ್ನೇ ಜನರು ‘ಜ್ಯೋತಿ’ ಎನ್ನುತ್ತಿದ್ದರು. ಹೀಗೆ ಜನಮಾನಸದಲ್ಲಿ ಹಾಸುಹೊಕ್ಕಿದ್ದ ‘ಜ್ಯೋತಿ’ಯಲ್ಲಿ ಕೊರೊನಾ ಲಾಕ್‌ಡೌನ್ ಬಳಿಕ ಯಾವುದೇ ಸಿನಿಮಾಗಳು ತೆರೆ ಕಂಡಿಲ್ಲ. ಲಾಕ್‌ಡೌನ್‌ ಪೂರ್ವದ ಮಾ.14ರಂದು ಮುಚ್ಚಿದ ಬಾಗಿಲು, ತೆರೆಯುವ ಲಕ್ಷಣಗಳಿಲ್ಲ.

‘ದಿ ಕರ್ನಾಟಕ ಥಿಯೇಟರ್ಸ್ ಲಿಮಿಟೆಡ್ ಭಾಗೀದಾರರು ಜ್ಯೋತಿ ಚಿತ್ರಮಂದಿರದ ಮಾಲೀಕತ್ವ ಹೊಂದಿದ್ದರು. ಆದರೆ, ಈ ಸ್ಥಳದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸುವ ಉದ್ದೇಶದಿಂದ ಮುಂಬೈ ಮೂಲದ ನಿರ್ಮಾಣಕಾರರ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ತಾಂತ್ರಿಕ ತೊಂದರೆಗಳಿಂದಾಗಿ ಈ ಹಿಂದೆ ಒಪ್ಪಂದ ಜಾರಿಗೆ ಬಂದಿರಲಿಲ್ಲ. ಲಾಕ್‌ಡೌನ್ ಬಳಿಕ ವಾಣಿಜ್ಯ ಸಂಕೀರ್ಣ ನಿರ್ಮಾಣದ ಮಾತುಕತೆಗೆ ಚಾಲನೆ ದೊರೆತಿದ್ದು, 2021ರ ಆರಂಭದಲ್ಲಿ ಕಾಮಗಾರಿಗಳು ಶುರುವಾಗಬಹುದು’ ಎಂದು ಮೂಲಗಳು ತಿಳಿಸಿವೆ.

ಗ್ರಾಮೀಣ ಭಾಗದಿಂದ ಬರುವ ಸಿನಿಪ್ರಿಯರ ಅಚ್ಚುಮೆಚ್ಚಿನ ಮಂದಿರವಾಗಿದ್ದ ಜ್ಯೋತಿಯಲ್ಲಿ, ಕೌಟುಂಬಿಕ ಚಿತ್ರಗಳೇ ತೆರೆ ಕಾಣುತ್ತಿತ್ತು. ಈ ಪೈಕಿ ತುಳು–ಕನ್ನಡ ಸಿನಿಮಾಗಳೇ ಹೆಚ್ಚಾಗಿರುತ್ತಿತ್ತು. ಹೀಗಾಗಿ, ಕೋಸ್ಟಲ್‌ವುಡ್ ಪಾಲಿಗೆ ‘ಜ್ಯೋತಿ’ಯು ಅಕ್ಷರಶಃ ‘ಮಂದಿರ’ವಾಗಿತ್ತು. ಈ ಚಿತ್ರಮಂದಿರ ಮುಚ್ಚುವುದು ತುಳು ಸಿನಿಮಾ ರಂಗಕ್ಕೊಂದು ಹಿನ್ನಡೆ ಎಂದೇ ವಿಶ್ಲೇಷಿಸಲಾಗಿದೆ.

ಗಂಧದ ಗುಡಿಯ ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಷ್ ಮತ್ತಿತರರ ಸಿನಿಮಾಗಳ ಪ್ರದರ್ಶನ, ಭೇಟಿಗೂ ಸಾಕ್ಷಿಯಾಗಿತ್ತು. ಇಲ್ಲಿ ತೆರೆಕಂಡ ಕೋಸ್ಟಲ್‌ವುಡ್‌ನ ‘ಕೋಟಿ ಚೆನ್ನಯ’ ದಂತಹ ಸಿನಿಮಾಗಳು ಜನತೆ ಮೇಲೆ ಅಪಾರ ಪ್ರಭಾವ ಬೀರಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು