ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

57 ಸಂತ್ರಸ್ತರಿಗೆ ಆಶ್ರಯ ನೀಡಿದ ‘ಅಗರಿಮಾರು ಮನೆ’

ಪರ್ಲ, ಇಲ್ಯರಕಂಡ, ಕೆಳಗಿನಮಕ್ಕಿ ಪ್ರದೇಶಗಳಲ್ಲಿನ 14 ಕುಟುಂಬ
Last Updated 19 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಬೆಳ್ತಂಗಡಿ: ತಾಲ್ಲೂಕಿನ ದಿಡುಪೆ, ಚಾರ್ಮಾಡಿ ಭಾಗದಲ್ಲಿ ಸಂಭವಿಸಿದ ಭೀಕರ ಪ್ರವಾಹವು ಕೇವಲ ಹಾನಿ ಮಾತ್ರವಲ್ಲ, ಹಲವಾರು ಮಾನವೀಯ ಮುಖಗಳನ್ನೂ ಪರಿಚಯಿಸಿದೆ. ಜೀವದ ಹಂಗು ತೊರೆದು ರಕ್ಷಿಸಿದ, ನಿರಾಶ್ರಿತರಿಗೆ ಆಶ್ರಯ–ನೆರವು ನೀಡಿದ ಹಲವಾರು ಘಟನೆಗಳಿವೆ.

ಅಗರಿಮಾರು ಜಲಜಾಕ್ಷಿ ಅವರು ಮಲವಂತಿಗೆ ಗ್ರಾಮದ ಪರ್ಲ, ಇಲ್ಯರಕಂಡ, ಕೆಳಗಿನಮಕ್ಕಿ ಪ್ರದೇಶಗಳಲ್ಲಿ ಪ್ರವಾಹಕ್ಕೆ ಕೃಷಿ ಭೂಮಿ ಹಾಗೂ ಮನೆ ಕಳೆದುಕೊಂಡು ಉಟ್ಟ ಬಟ್ಟೆಯಲ್ಲೇ ಓಡಿ ಬಂದ ಸುಮಾರು 14 ಮನೆಗಳ 57 ಜನರನ್ನು ಮನೆಗೆ ಕರೆದುಕೊಂಡು ಆಶ್ರಯ ನೀಡಿದ್ದಾರೆ.

’ಮನೆಗೆ ನೆಂಟರು ಬಂದರೆ ಸಂಜೆ ವಾಪಾಸ್ ಹೋಗ್ತಾರೋ, ನಾಳೆ ಬೆಳಿಗ್ಗೆ ಹೊಗ್ತಾರೋ...’ ಎಂಬ ಮನೋಸ್ಥಿತಿಯ ಇಂದಿನ ಕಾಲದಲ್ಲಿ ಪರಿಚಯವಿಲ್ಲದ ನಿರಾಶ್ರಿತರಿಗೆ ತನ್ನ ಮನೆಯಲ್ಲೇ ಆಶ್ರಯ ನೀಡಿದ್ದಾರೆ. ಸರ್ಕಾರದ ಸವಲತ್ತುಗಳು ಬರುವವರೆಗೂ, ತನ್ನ ಮನೆ ಖರ್ಚಿನಲ್ಲೇ ಅವರನ್ನೆಲ್ಲ ಪ್ರೀತಿಯಿಂದ ನೋಡಿಕೊಂಡಿದ್ದಾರೆ.

ಆಶ್ರಯ ಪಡೆದವರ ಪೈಕಿ 23 ಶಾಲಾ ಮಕ್ಕಳಿದ್ದು, ಇಲ್ಲಿಂದಲೇ ಶಾಲೆಗೆ ಹೋಗುತ್ತಿದ್ದಾರೆ. ಮಕ್ಕಳು, ಯುವಕರು, ಮಧ್ಯ ವಯಸ್ಕರು ಮಾತ್ರವಲ್ಲ, 103 ಹರೆಯದ ಮಕ್ಕಿಮನೆ ಸೀತಮ್ಮ ಅಜ್ಜಿಯೂ ಇರುವುದು ವಿಶೇಷ.

‘ಪ್ರವಾಹ ಬಂದ ದಿನದಿಂದ ಈ ತನಕವೂ ಆಶ್ರಯ ನೀಡಿರುವ ಅಗರಿಮಾರು ಜಲಜಾಕ್ಷಿಯವರು ನಿಜವಾಗಿಯೂ ಸಮಾಜದ ಶ್ರೇಷ್ಠ ವ್ಯಕ್ತಿ’ ಎಂದು ಆಶ್ರಯ ಪಡೆದ ಸಂತ್ರಸ್ತರು ಕೃತಜ್ಞತೆ ವ್ಯಕ್ತಪಡಿಸುತ್ತಾರೆ.

‘ದಾನಿಗಳಿಂದ ಎಲ್ಲ ರೀತಿಯಲ್ಲಿ ಸಹಕಾರ ಸಿಕ್ಕಿದೆ. ಅಧಿಕಾರಿಗಳು, ಶಾಸಕರು, ಮಾಜಿ ಶಾಸಕರು, ಆದಿಚುಂಚನಗಿರಿ ಮಠಾಧೀಶರು ಭೇಟಿ ನೀಡಿ ಸಂತ್ರಸ್ತರಿಗೆ ಪರಿಹಾರ ನೀಡಿದ್ದಾರೆ’ ಎಂದು ಜಲಜಾಕ್ಷಿಯವರು ತಿಳಿಸಿದರು.

‘ನೋವಿನಿಂದ ಕೂಡಿದೆ’

‘ಸಂತೋಷಕ್ಕಾಗಿ ಹಲವರು ಸೇರುತ್ತಿದ್ದ ಮನೆ ಇಂದು ನೋವಿನಿಂದ ಕೂಡಿದೆ. 57 ಮಂದಿ ಸಂತ್ರಸ್ತರು ನಮ್ಮ ಮನೆಯಲ್ಲಿ ಆಶ್ರಯಿಸಿದ್ದಾರೆ. ನಮ್ಮ 40 ಎಕರೆ ಜಾಗದ ಪೈಕಿ ಎಲ್ಲೆಲ್ಲಿ ಹಾನಿಯಾಗಿದೆ ಎಂಬುದನ್ನು ಇನ್ನೂ ಪರಿಶೀಲಿಸಿಲ್ಲ. ಅದನ್ನು ಲೆಕ್ಕಿಸದೇ ಸಂತ್ರಸ್ತರ ಸಲಹುತ್ತಿದ್ದೇವೆ’ ಎನ್ನುತ್ತಾರೆ ಅಗರಿಮಾರು ಮನೆಯ ಜಲಜಾಕ್ಷಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT