ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಡೆ ಇಲ್ಲದಿದ್ದರೂ ನಗೆ ಚೆಲ್ಲಿದ ಕೈತೋಟ!

ನಾಡಿಗೆ ಮಾದರಿಯಾದ ಸುರಿಬೈಲು ಶಾಲೆ– ಮಕ್ಕಳಿಗೆ ನಿಜ ಅರ್ಥದ ಬದುಕಿನ ಪಾಠ
Last Updated 1 ಡಿಸೆಂಬರ್ 2018, 9:13 IST
ಅಕ್ಷರ ಗಾತ್ರ

ವಿಟ್ಲ: ಇಲಾಖೆಗಳು ಶಾಲಾ ಆವರಣದಲ್ಲಿ ಅಕ್ಷರ ಕೈತೋಟ ನಿರ್ಮಿಸುವಂತೆ ಸೂಚನೆ ನೀಡುತ್ತಿದೆ. ಆದರೆ ಬಹುತೇಕ ಶಾಲೆಗಳಲ್ಲಿ ಸಮರ್ಪಕ ಆವರಣ ಗೋಡೆ, ಸ್ಥಳದ ಕೊರತೆಯಿಂದ ಅವುಗಳು ನಿರ್ಮಾಣವಾಗುತ್ತಿಲ್ಲ.

ಬಂಟ್ವಾಳ ತಾಲ್ಲೂಕಿನ ಕೊಳ್ನಾಡು ಗ್ರಾಮದ ಸುರಿಬೈಲು ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇದಕ್ಕೆ ವಿರುದ್ಧವಾದ ಸನ್ನಿವೇಶವೊಂದು ನಿರ್ಮಾಣವಾಗಿದೆ. ಯಾವುದೇ ಆವರಣ ಗೋಡೆ ಇಲ್ಲದಿದ್ದರೂ, ಶಾಲೆಗೆ ತಾಗಿಕೊಂಡಿರುವ ರಸ್ತೆ ಬದಿಯಲ್ಲಿ ತರಕಾರಿ ಹಾಗೂ ಗಿಡಮೂಲಿಕೆಗಳನ್ನು ಎಸ್‌ಡಿಎಂಸಿ ಅಧ್ಯಕ್ಷರ, ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ನೇತೃತ್ವದಲ್ಲಿ ಬೆಳೆಸಲಾಗಿದೆ.

ಸುರಿಬೈಲು ಶಾಲೆಗೆ ಈ ಹಿಂದೆ ಎರಡು ಪ್ರಶಸ್ತಿಗಳು ಲಭಿಸಿ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿತ್ತು. ನಾಲ್ಕು ಎಕರೆ ಜಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾಲೆಗೆ ಸುಸಜ್ಜಿತ ಕಟ್ಟಡವಿದೆ. ಕುಡಿಯುವ ನೀರಿಗೆ ಕೊಳವೆ ಬಾವಿ, ಸುತ್ತಲೂ ಅಡಿಕೆ ಮರಗಳಿವೆ. ಪೂರ್ವ ಪ್ರಾಥಮಿಕದಿಂದ 10ನೇ ತರಗತಿವರೆಗೆ 505 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.

ಶಾಲೆಯ ಒಂದು ಭಾಗದಲ್ಲಿ ಸುಸಜ್ಜಿತ ಅಡಿಕೆ ತೋಟ ಉತ್ತಮ ಫಲ ನೀಡುತ್ತಿದೆ. ಇನ್ನೂ 50 ಸೆನ್ಸ್ ಜಾಗದಲ್ಲಿ ಅಕ್ಷರ ಕೈತೋಟ ನಿರ್ಮಿಸಲಾಗಿದೆ. ತೋಟದಲ್ಲಿ ಪಪ್ಪಾಯಿ, ಅನಾನಸು, ಬಾಳೆ, ನುಗ್ಗೆ, ಬದನೆ, ಬಸಳೆ, ಬೆಂಡೆ ಸೇರಿದಂತೆ ವಿವಿಧ ತರಕಾರಿ ಮತ್ತು ಗಿಡಮೂಲಿಕೆಗಳನ್ನು ಬೆಳೆಸಲಾಗುತ್ತಿದೆ. ಶಾಲಾ ಆವರಣದಲ್ಲಿ ಕೊಳವೆ ಬಾವಿಯಿದ್ದು, ಮಕ್ಕಳು ಕೈಕಾಲು ತೊಳೆಯುವ ನೀರನ್ನು ತೋಟಗಳಿಗೆ ಬಿಡುವ ಮೂಲಕ ಮರುಬಳಕೆ ಮಾಡಲಾಗುತ್ತಿದೆ. ನೀರು ನೇರವಾಗಿ ತೋಟಗಳಿಗೆ ಹೋಗಲು ಪ್ರತ್ಯೇಕ ಪೈಪ್‌ಲೈನ್‌ ವ್ಯವಸ್ಥೆ ಮಾಡಲಾಗಿದೆ. ನೀರಿನ ಸದ್ಭಳಕೆ ಬಗ್ಗೆ ಇದು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ. ಇದರಿಂದ ಗಿಡಗಳು ಉತ್ತಮ ಫಲ ನೀಡುತ್ತಿದೆ. ಇಂಗುಗುಂಡಿಗಳನ್ನು ನಿರ್ಮಿಸಿರುವುದರಿಂದ ಕೊಳವೆ ಬಾವಿಯಲ್ಲಿ ನೀರಿನ ಅಂಶ ಹೆಚ್ಚಾಗಿದೆ.

ಶಾಲೆಯ ಮೈದಾನದ ಸುತ್ತ ಆವರಣಗೋಡೆ ಇದೆ. ಅದರ ಹೊರಗಡೆ ಅಂದರೆ ರಸ್ತೆಗೆ ತಾಗಿಕೊಂಡಿರುವ ಜಾಗದಲ್ಲಿ ತರಕಾರಿ ಬೆಳೆಸಲಾಗುತ್ತಿದೆ. ಬಿಸಿಲಿಗೆ ಅಳವಡಿಸುವ ನೆಟ್ ಕಟ್ಟಿ ಅದರ ಮೂಲಕ ತರಕಾರಿಗಳಿಗೆ ರಕ್ಷಣೆ ಒದಗಿಸಲಾಗಿದೆ. ಆವರಣಗೋಡೆ ಹೊರಗಡೆ ಎರಡು ಬದಿಗಳಲ್ಲಿಯೂ ಇದೇ ರೀತಿಯಾಗಿ ತರಕಾರಿ ಬೆಳೆಸಲಾಗುತ್ತಿದೆ. ಶಾಲೆಯ ಮೈದಾನದ ಮತ್ತೊಂದು ಕಡೆ ಬಸಳೆ ಹಾಗೂ ಬದನೆ ಗಿಡಗಳನ್ನು ಬೆಳೆಸಲಾಗುತ್ತಿದೆ. ಪ್ರತಿದಿನ ವಿದ್ಯಾರ್ಥಿಗಳೇ ತರಕಾರಿ ಗಿಡಗಳನ್ನು ಪೋಷಣೆ ಮಾಡುತ್ತಿದ್ದಾರೆ. ತೋಟದಲ್ಲಿ ತರಕಾರಿಗಳನ್ನು ಮಧ್ಯಾಹ್ನದ ಬಿಸಿಯೂಟಕ್ಕೆ ಬಳಕೆ ಮಾಡಲಾಗುತ್ತಿದೆ. ಪಪ್ಪಾಯಿ ಹೆಚ್ಚಿನ ಸಂಖ್ಯೆಯಲ್ಲಿ ಫಸಲು ಬಿಡುತ್ತಿದೆ. ಮಾರುಕಟ್ಟೆಯಲ್ಲಿ ಒಂದು ಕೆಜಿ ಪಪ್ಪಾಯಿಗೆ ₹ 40 ಬೆಲೆ ನೀಡುತ್ತಾರೆ. ಆದರೆ ಮಕ್ಕಳಿಗೆ ಬಿಸಿಯೂಟಕ್ಕೆ ಸಹಕಾರಿಯಾಗಲೆಂದು ಯಾವುದನ್ನು ಮಾರಾಟ ಮಾಡುತ್ತಿಲ್ಲ. ಪಪ್ಪಾಯಿ ಬೀಜಗಳ ಮೂಲಕ ಗಿಡಗಳನ್ನು ಬೆಳೆಸಿ ಅವುಗಳನ್ನು ಸುರಿಬೈಲು ಕ್ಲಸ್ಟರ್ ಮಟ್ಟದ ಶಾಲೆಗಳಿಗೆ ವಿತರಿಸುವ ಯೋಜನೆಯನ್ನು ಹಮ್ಮಿಕೊಂಡಿದ್ದಾರೆ.

ಶಾಲಾವೃದ್ಧಿ ಸಮಿತಿ ಅಧ್ಯಕ್ಷ ಎಸ್.ಎಂ ಅಬೂಬಕ್ಕರ್, ಶಾಲಾ ಮುಖ್ಯ ಶಿಕ್ಷಕ ಗೋಪಾಲ ಬಿ. ನೇತೃತ್ವದಲ್ಲಿ ಕೊಳ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಎಸ್‌ಡಿಎಂಸಿ ಸದಸ್ಯರ, ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ಗ್ರಾಮಸ್ಥರ ಸಹಕಾರದಲ್ಲಿ ಶಾಲೆ ದಿನೇ ದಿನೇ ಅಭಿವೃದ್ಧಿ ಹೊಂದುತ್ತಿದೆ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ
ನಿರ್ವಹಣಾಧಿಕಾರಿಗಳು ಶಾಲೆಯ ಸುತ್ತ ಅಕ್ಷರ ಕೈತೋಟ ನಿರ್ಮಿಸುವಂತೆ ಈ ಹಿಂದೆ ಸೂಚನೆ ನೀಡಿದ್ದರು. ಕೆಲವು ಶಾಲೆಗಳಲ್ಲಿ ಆವರಣಗೋಡೆ ಸಮಸ್ಯೆ, ಜಾಗದ ಸಮಸ್ಯೆಯಿಂದ ಅದು ನಡೆಯುತ್ತಿಲ್ಲ. ಆದರೆ ಸುರಿಬೈಲು ಶಾಲೆಗೆ ಈ ಸಮಸ್ಯೆಯೇ ಇಲ್ಲ.

* ಇಲ್ಲಿ ಅಡಿಕೆ ತೋಟದ ಜತೆ ಅಕ್ಷರ ಕೈತೋಟ ಬೆಳೆಸಲಾಗುತ್ತಿದೆ. ಸುರಿಬೈಲು ಸುತ್ತಮುತ್ತಲಿನ ಶಾಲೆಗಳಿಗೆ ಪಪ್ಪಾಯಿ ಗಿಡಗಳನ್ನು ಹಂಚುವ ಉದ್ದೇಶ ಇದೆ

–ಎಸ್ಎಂ ಅಬೂಬಕ್ಕರ್, ಅಧ್ಯಕ್ಷರು, ಶಾಲಾಭಿವೃದ್ಧಿ ಸಮಿತಿ

* ಈ ಶಾಲೆಯ ಪ್ರೇರಣೆಯಿಂದ ಗ್ರಾಮದ ಇತರ ಶಾಲೆಗಳಿಗೆ ಉದ್ಯೋಗ ಖಾತರಿ ಯೋಜನೆಯಲ್ಲಿ ತೋಟ ಮಾಡಲು ಮಾರ್ಗದರ್ಶನ ನೀಡಲಾಗಿದೆ. ಈ ಶಾಲೆಯಲ್ಲಿದೆ ಬದುಕುವ ಶಿಕ್ಷಣ

ಸುಭಾಶ್ಚಂದ್ರ ಶೆಟ್ಟಿ ಕುಳಾಲು,ಅಧ್ಯಕ್ಷರು, ಕೊಳ್ನಾಡು ಗ್ರಾಮ ಪಂಚಾಯಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT