ಮಂಗಳೂರು: ‘ಹಿಂದೂ ಧರ್ಮ, ಸಂಸ್ಕೃತಿ, ಸ್ವಾಭಿಮಾನದ ರಕ್ಷಣೆಗಾಗಿ 1964ರ ಆ. 29ರಂದು ಮುಂಬೈ ಸಾಂದೀಪಿನಿ ಆಶ್ರಮದಲ್ಲಿ ಆರಂಭವಾದ ವಿಶ್ವ ಹಿಂದೂ ಪರಿಷತ್ತಿಗೆ ಈಗ ಷಷ್ಠಿಪೂರ್ತಿ ಸಂಭ್ರಮ. ಈ ಪ್ರಯುಕ್ತ ರಾಜ್ಯದಾದ್ಯಂತ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ’ ಎಂದು ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ತಿಳಿಸಿದರು.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಸಂಘಟನೆಯು ಜಗತ್ತಿನ 50ಕ್ಕೂ ಹೆಚ್ಚು ದೇಶಗಳಲ್ಲಿ ಹಿಂದುಗಳನ್ನು ಸಂಘಟಿಸುವುದರ ಜೊತೆಗೆ, ಹಿಂದೂ ಧಾರ್ಮಿಕ ಆಚರಣೆಗಳ ಮಹತ್ವವನ್ನು ಸಾರುತ್ತಿದೆ. ದೇಶದಲ್ಲಿ 90 ಸಾವಿರಕ್ಕೂ ಹೆಚ್ಚು ಕಡೆ ಚಟುವಟಿಕೆ ಹಮ್ಮಿಕೊಳ್ಳುತ್ತಿದೆ. ಗೋ ರಕ್ಷಣೆ ಹಾಗೂ ಶ್ರದ್ಧಾಕೇಂದ್ರಗಳನ್ನು ಉಳಿಸಲು ಹೋರಾಡುತ್ತಿದೆ. ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಆಂದೋಲನ, ಅಮರನಾಥ, ರಾಮಸೇತು, ತಿರುಪತಿ ಉಳಿಸಿ ಹೋರಾಟ ಹಾಗೂ ರಾಜ್ಯದಲ್ಲಿ ದತ್ತಪೀಠ ರಕ್ಷಣೆಯ ಹೋರಾಟಗಳಿಗೆ ನೇತೃತ್ವ ನೀಡಿದೆ’ ಎಂದರು.
ವಿಎಚ್‌ಪಿ ವಿಭಾಗ ಸಹ ಕಾರ್ಯದರ್ಶಿ ಶಿವಾನಂದ ಮೆಂಡನ್, ‘ಷಷ್ಠಿಪೂರ್ತಿ ಪ್ರಯುಕ್ತ ಸೆ.1ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯ 21 ಪ್ರಖಂಡಗಳಲ್ಲಿ ಹಿಂದೂ ಸಮಾವೇಶ, ಸಮ್ಮೇಳನ, ಶೋಭಾಯಾತ್ರೆ ಮೆರವಣಿಗೆ, ಕ್ರೀಡಾಕೂಟಗಳು, ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ’ ಎಂದರು.
ಕಾರ್ಕಳದಲ್ಲಿ ಯುವತಿಯ ಅತ್ಯಾಚಾರ ಪ್ರಕರಣದ ಆರೋಪಿಯೊಬ್ಬನಿಗೆ ಬಜರಂಗದಳದ ನಂಟು ಇರುವ ಆರೋಪಕ್ಕೆ ಪ್ರತಿಕ್ರಿಯಿಸಿದ ಶರಣ್ ಪಂಪ್‌ವೆಲ್, ‘ಅತ್ಯಾಚಾರ ಪ್ರಕರಣದ ಆರೋಪಿ, ಅಭಯ್ ಆಗಿರಲಿ ಅಥವಾ ಅಹಮದ್ ಆಗಿರಲಿ, ಅವರ ವಿರುದ್ಧ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ನಮ್ಮ ಸಂಘಟನೆ ಮಾದಕ ದ್ರವ್ಯ ಮುಕ್ತ ಸಮಾಜವನ್ನು ಬಯಸುತ್ತದೆ. ಮಾದಕ ಪದಾರ್ಥವನ್ನು ಆರೋಪಿ ಅಭಯ್ ಒದಗಿಸಿದ್ದಾನೆ ಎಂಬ ಕಾರಣಕ್ಕೆ ಈ ಪ್ರಕರಣವನ್ನೇ ತಿರುಚುವ ಪ್ರಯತ್ನ ಮಾಡಿದರೆ ಸುಮ್ಮನಿರುವುದಿಲ್ಲ. ನಮ್ಮ ಸಂಘಟನೆಯವರು ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿದರೆ, ನಿರ್ದಾಕ್ಷಿಣ್ಯವಾಗಿ ಹೊರಹಾಕುತ್ತೇವೆ’ ಎಂದು ಸ್ಪಷ್ಟಪಡಿಸಿದರು.
ರಾಜ್ಯಪಾಲರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಐವನ್ ಡಿಸೋಜ ವಿರುದ್ಧ ಕ್ರಮ ಕೈಗೊಳ್ಳುವ ವಿಚಾರದಲ್ಲಿ ಪೊಲೀಸರು ದ್ವಂದ್ವ ನಿಲುವು ಅನುಸರಿಸಿದ್ದಾರೆ. ಹಿಂದುತ್ವವಾದಿ ಸಂಘಟನೆಗಳಿಗೆ ಒಂದು ಕಾನೂನು ಐವನ್‌ಗೆ ಒಂದು ಕಾನೂನು ಇದೆಯೇ’ ಎಂದು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಎಚ್‌ಪಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಕೆ.ಪುರುಷೋತ್ತಮ್, ಉಪಾಧ್ಯಕ್ಷ ಮನೋಹರ್ ಸುವರ್ಣ, ಕಾರ್ಯದರ್ಶಿ ರವಿ ಅಸೈಗೋಳಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.