ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯಕೀಯ ಉಪಕರಣಗಳಿಗೆ ಸುಂಕ ಬೇಡ: ಎನ್‌.ವಿನಯ್ ಹೆಗ್ಡೆ ಆಗ್ರಹ

Last Updated 25 ಜನವರಿ 2019, 15:04 IST
ಅಕ್ಷರ ಗಾತ್ರ

ಮಂಗಳೂರು: ‘ವಿದೇಶಗಳಿಂದ ಆಮದು ಮಡಿಕೊಳ್ಳುವ ವೈದ್ಯಕೀಯ ಉಪಕರಣಗಳ ಮೇಲೆ ವಿಧಿಸುವ ಕಸ್ಟಮ್ಸ್ ಸುಂಕವನ್ನು ಆಸ್ಪತ್ರೆಗಳು ರೋಗಿಗಳಿಗೆ ವರ್ಗಾಯಿಸುತ್ತಿವೆ. ವೈದ್ಯಕೀಯ ಉಪಕರಣಗಳ ಮೇಲೆ ಸುಂಕ ವಿಧಿಸುವುದನ್ನು ಬಡವರ ಅನುಕೂಲಕ್ಕಾಗಿ ನಿಲ್ಲಿಸಬೇಕು’ ಎಂದು ನಿಟ್ಟೆ ಡೀಮ್ಡ್ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್‌.ವಿನಯ್‌ ಹೆಗ್ಡೆ ಒತ್ತಾಯಿಸಿದರು.

ನಗರದ ಪಣಂಬೂರಿನಲ್ಲಿರುವ ಕಸ್ಟಮ್ಸ್ ಹೌಸ್‌ ಆವರಣದಲ್ಲಿ ಶುಕ್ರವಾರ ನಡೆದ ಅಂತರರಾಷ್ಟ್ರೀಯ ಕಸ್ಟಮ್ಸ್ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ‘ಕೆಲವು ವರ್ಷಗಳ ಹಿಂದಿನವರೆಗೂ ವೈದ್ಯಕೀಯ ಉಪಕರಣಗಳಿಗೆ ಕಸ್ಟಮ್ಸ್ ಸುಂಕ ಇರಲಿಲ್ಲ. ಈಗ ಈ ಸುಂಕದಿಂದ ಬಡ ರೋಗಿಗಳಿಗೆ ಅನ್ಯಾಯವಾಗುತ್ತಿದೆ. ಇದನ್ನು ಗಮನದಲ್ಲಿರಿಸಿಕೊಂಡು ಸೂಕ್ತ ಬದಲಾವಣೆ ಮಾಡಬೇಕು’ ಎಂದರು.

ರಫ್ತು ಮತ್ತು ಆಮದು ಚಟುವಟಿಕೆಗಳಲ್ಲಿನ ತೆರಿಗೆ ವಂಚನೆ ಪತ್ತೆಗೆ ಕಸ್ಟಮ್ಸ್ ಅಧಿಕಾರಿಗಳು, ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಮಂಗಳೂರಿನಲ್ಲಿ ರಫ್ತು ಚಟುವಟಿಕೆ ಹೆಚ್ಚಿದೆ. ಅಷ್ಟೇ ಪ್ರಮಾಣದಲ್ಲಿ ತೆರಿಗೆ ವಂಚನೆ ಪ್ರಕರಣಗಳನ್ನೂ ಪತ್ತೆಹಚ್ಚಲಾಗಿದೆ. ಕಸ್ಟಮ್ಸ್ ಇಲಾಖೆಯು ಸರಿಯಾದ ಕ್ರಮದಲ್ಲಿ ವಿದೇಶಿ ವ್ಯಾಪಾರ ನಡೆಸುವವರ ಜೊತೆ ಸ್ನೇಹಮಯಿಯಾಗಿ ವರ್ತಿಸುವ ಪ್ರವೃತ್ತಿ ಆರಂಭಿಸಿರುವುದು ಸ್ವಾಗತಾರ್ಹ ಎಂದು ಹೇಳಿದರು.

ಗೌರವದಿಂದ ನಡೆಸಿಕೊಳ್ಳುತ್ತಿದ್ದಾರೆ:

ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ವೈದ್ಯ ಡಾ.ಬಿ.ಎಂ.ಹೆಗ್ಡೆ ಮಾತನಾಡಿ, ‘ಕೆಲವು ವರ್ಷಗಳ ಹಿಂದಿನವರೆಗೂ ವಿದೇಶದಿಂದ ಬರುವ ಎಲ್ಲರನ್ನೂ ಕಲ್ಳರಂತೆ ನೋಡುವ ಮನೋಭಾವ ಕಸ್ಟಮ್ಸ್ ಅಧಿಕಾರಿಗಳಲ್ಲಿತ್ತು. ಈಗ ಇಲಾಖೆ ಸಂಪೂರ್ಣ ಬದಲಾಗಿದೆ. ಜನರನ್ನು ಅತ್ಯಂತ ಗೌರವದಿಂದ ನಡೆಸಿಕೊಳ್ಳುವುದನ್ನು ಕಲಿತಿದ್ದಾರೆ. ತಿಂಗಳಿಗೆ ನಾಲ್ಕಾರು ಬಾರಿ ವಿದೇಶಕ್ಕೆ ಹೋಗಿಬರುವ ನನಗೆ ಇದು ಅನುಭವವಾಗಿದೆ’ ಎಂದರು.

ವಂಚನೆಯ ವಿಧಾನಗಳು ದಿನದಿಂದ ದಿನಕ್ಕೆ ಬದಲಾಗುತ್ತಿವೆ. ತೆರಿಗೆ ವಂಚಿಸುವವರು, ಅಕ್ರಮ ಎಸಗುವವರು ತನಿಖಾ ಸಂಸ್ಥೆಗಳ ಕಣ್ತಪ್ಪಿಸಲು ಹೊಸ ವಿಧಾನಗಳನ್ನು ಕಂಡುಕೊಳ್ಳುತ್ತಲೇ ಇರುತ್ತಾರೆ. ಅಷ್ಟೇ ವೇಗವಾಗಿ ಕಸ್ಟಮ್ಸ್‌ ಇಲಾಖೆಯೂ ತನಿಖಾ ವಿಧಾನಗಳಲ್ಲಿ ಸುಧಾರಣೆ ತಂದುಕೊಂಡು ಅಕ್ರಮಗಳನ್ನು ಪತ್ತೆ ಮಾಡುತ್ತಿದೆ ಎಂದು ಶ್ಲಾಘಿಸಿದರು.

ಮನುಷ್ಯನ ಮಾನಸಿಕ ಆರೋಗ್ಯ ಸರಿ ಇದ್ದರೆ, ದೈಹಿಕ ಆರೋಗ್ಯ ಸರಿಯಾಗಿ ಇರುತ್ತದೆ. ಅದು ಸಾಧ್ಯವಾದರೆ ದೇಶದ ಆರೋಗ್ಯವೂ ಸುಸ್ಥಿತಿಯಲ್ಲಿ ಇರುತ್ತದೆ. ಪ್ರೀತಿಯಿಂದ ಕೆಲಸ ಮಾಡುವುದನ್ನು ಕಲಿಯಿರಿ. ನಿವೃತ್ತಿಯ ನಂತರವೂ ಜನರ ಅನುಕೂಲಕ್ಕಾಗಿ ಶ್ರಮವಹಿಸಿ. ಆಗ ಎಲ್ಲರೂ ಆರೋಗ್ಯ ಮತ್ತು ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತದೆ ಎಂದು ಸಭಿಕರಿಗೆ ಕಿವಿಮಾತು ಹೇಳಿದರು.

ಕಸ್ಟಮ್ಸ್‌ ಮಂಗಳೂರು ವಲಯದ ಹೆಚ್ಚುವರಿ ಆಯುಕ್ತ ಇಮಾಮುದ್ದೀನ್‌ ಅಹಮ್ಮದ್‌ ಮತ್ತು ಜಂಟಿ ಆಯುಕ್ತ ವಿನಾಯಕ ಭಟ್‌ ಉಪಸ್ಥಿತರಿದ್ದರು. ಎಂಆರ್‌ಪಿಎಲ್‌, ಕೆಐಒಸಿಎಲ್‌ ಸೇರಿದಂತೆ ವಿದೇಶಿ ವ್ಯಾಪಾರದಲ್ಲಿ ಸಕ್ರಿಯವಾಗಿರುವ ವಿವಿಧ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಹಿರಿಯ ಅಧಿಕಾರಿಗಳು ಮತ್ತು ಖಾಸಗಿ ಕಂಪೆನಿಗಳ ಪ್ರತಿನಿಧಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

₹ 3,000 ಕೋಟಿ ಸುಂಕ ಸಂಗ್ರಹ

‘ಮಂಗಳೂರಿನಿಂದ ಉತ್ತರ ಕನ್ನಡ ಜಿಲ್ಲೆಯವರೆಗೆ ವ್ಯಾಪ್ತಿ ಹೊಂದಿರುವ ಮಂಗಳೂರು ಕಸ್ಟಮ್ಸ್ ವಲಯದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಕಸ್ಟಮ್ಸ್ ಸುಂಕ ಸಂಗ್ರಹದಲ್ಲಿ ಶೇಕಡ 44ರಷ್ಟು ಹೆಚ್ಚಳವಾಗಿದೆ. ಈ ವರ್ಷ ಒಟ್ಟು ₹ 3,000 ಕೋಟಿ ಸುಂಕ ಸಂಗ್ರಹಿಸಲಾಗಿದೆ’ ಎಂದು ಕಸ್ಟಮ್ಸ್ ಮಂಗಳೂರು ವಲಯದ ಹೆಚ್ಚುವರಿ ಆಯುಕ್ತ ಇಮಾಮುದ್ದೀನ್‌ ಅಹಮ್ಮದ್ ವಿವರ ನೀಡಿದರು.

ಒಂದು ವರ್ಷದ ಅವಧಿಯಲ್ಲಿ 110 ತೆರಿಗೆ ವಂಚನೆ ಯತ್ನ ಮತ್ತು ಕಳ್ಳಸಾಗಣೆ ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ. ಶೇ 80ರಷ್ಟು ಚಿನ್ನ ಕಳ್ಳಸಾಗಣೆ ಪ್ರಕರಣಗಳು. ಉಳಿದಂತೆ ಮಾದಕವಸ್ತು, ವಿದೇಶಿ ಕರೆನ್ಸಿ ಕಳ್ಳಸಾಗಣೆ ಯತ್ನಗಳನ್ನಯ ಪತ್ತೆಹಚ್ಚಲಾಗಿದೆ. ಈ ಪ್ರಕರಣಗಳಲ್ಲಿ ಒಟ್ಟು ₹ 11 ಕೋಟಿ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT