ಭಾನುವಾರ, ಸೆಪ್ಟೆಂಬರ್ 15, 2019
30 °C
ಮಾಧ್ಯಮದ ಹೆಸರಿನಲ್ಲೂ ತಂಡ ಇರಿಸಿಕೊಂಡಿದ್ದ ಆರೋಪಿ!

ಪೀಟರ್‌ ವಿರುದ್ಧ 14 ಪ್ರಕರಣ ಬಾಕಿ

Published:
Updated:

ಮಂಗಳೂರು: ಕೇಂದ್ರೀಯ ಅಪರಾಧ ತನಿಖಾ ಬ್ಯೂರೊ (ಎನ್‌ಸಿಐಬಿ) ನಿರ್ದೇಶಕನೆಂದು ಹೇಳಿಕೊಂಡು ಜನರನ್ನು ವಂಚಿಸುತ್ತಿದ್ದ ಆರೋಪದ ಮೇಲೆ ಬಂಧಿತನಾಗಿರುವ ಸ್ಯಾಮ್‌ ಪೀಟರ್‌ ವಿರುದ್ಧ ಒಂಬತ್ತು ರಾಜ್ಯಗಳಲ್ಲಿ 14 ಅಪರಾಧ ಪ್ರಕರಣಗಳಿವೆ.

ಈ ಕುರಿತು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಡಾ.‍ಪಿ.ಎಸ್‌.ಹರ್ಷ, ‘ಸಿಬಿಐನ ಘಾಜಿಯಾಬಾದ್ ಘಟಕ, ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶ, ಛತ್ತೀಸ್‌ಗಡ, ಬಿಹಾರ, ಜಾರ್ಖಂಡ್‌, ಮಧ್ಯಪ್ರದೇಶ, ತಮಿಳುನಾಡು ರಾಜ್ಯಗಳಲ್ಲಿ ಸ್ಯಾಮ್‌ ಪೀಟರ್‌ ವಿರುದ್ಧ ವಂಚನೆ, ಸುಲಿಗೆ ಪ್ರಕರಣಗಳಿವೆ’ ಎಂದರು.

ಉತ್ತರ ಪ್ರದೇಶದ ಸದರ್‌ಬಜಾರ್‌ ಪೊಲೀಸ್‌ ಠಾಣೆಯಲ್ಲಿ 1997ರಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಸಿಬಿಐ ಮತ್ತು ಇಂಟರ್‌ಪೋಲ್‌ ಸಂಸ್ಥೆಗಳಿಂದ ಸ್ಯಾಮ್‌ ಪೀಟರ್‌ ವಿರುದ್ಧ ರೆಡ್‌ ಕಾರ್ನರ್‌ ನೋಟಿಸ್‌ ಜಾರಿ ಮಾಡಲಾಗಿತ್ತು. ಮಹಾರಾಷ್ಟ್ರದ ಸಾವಂಗಿ ಪೊಲೀಸ್ ಠಾಣೆಯಲ್ಲಿ 2017ರಲ್ಲಿ ದಾಖಲಾದ ಪ್ರಕರಣದಲ್ಲಿ ಉದ್ಘೋಷಿತ ಅಪರಾಧಿ ಎಂದು ಸಾರಲಾಗಿತ್ತು ಎಂದು ತಿಳಿಸಿದರು.

ಮಾಧ್ಯಮದ ಹೆಸರಿನಲ್ಲೂ ಬೆದರಿಕೆ:

ಆರೋಪಿಯು ಹಲವರನ್ನು ಬೆದರಿಸಿ ಹಣ ಸುಲಿಗೆ ಮಾಡಿರುತ್ತಾನೆ. ದೃಶ್ಯ ಮಾಧ್ಯಮಗಳಲ್ಲಿ ವರದಿ ಪ್ರಸಾರ ಮಾಡುವುದಾಗಿ ಬೆದರಿಸುವುದಕ್ಕಾಗಿ ತಂಡವೊಂದನ್ನು ಇರಿಸಿಕೊಂಡಿದ್ದ. ಸುದ್ದಿ ವಾಹಿನಿಯ ವರದಿಗಾರರ ರೀತಿಯಲ್ಲೇ ಸ್ಥಳಕ್ಕೆ ಬರುತ್ತಿದ್ದ ಕೆಲವರು ಅಲ್ಲಿನ ದೃಶ್ಯಗಳನ್ನು ಚಿತ್ರೀಕರಿಸಿಕೊಂಡು, ಪೀಟರ್‌ ಪರವಾಗಿ ಬೆದರಿಕೆ ಹಾಕುತ್ತಿದ್ದರು ಎಂದರು.

ಚಿಕ್ಕಬಳ್ಳಾಪುರ ತಾಲ್ಲೂಕಿನ ದಿಬ್ಬೂರಹಳ್ಳಿ ಪೊಲೀಸ್‌ ಠಾಣೆಯಲ್ಲಿ ದಾಖಲಾದ ಪ್ರಕರಣವೊಂದರಲ್ಲಿ ಉಡುಪಿಯ ನಿಖಿಲ್‌, ಅಬೂಬಕ್ಕರ್‌ ಮತ್ತು ಭಾರತಿ ಎಂಬುವವರು ಆತನಿಗೆ ಸಹಾಯ ಮಾಡಿದ್ದರು. ಅವರನ್ನು ದಿಬ್ಬೂರಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಿಖಿಲ್‌, ಅಬೂಬಕ್ಕರ್‌ ಮತ್ತು ಮಂಗಳೂರಿನ ತಲಪಾಡಿಯ ಸಿದ್ದಿಕ್‌ ಎಂಬುವವರು ಪೀಟರ್‌ಗೆ ಹಣ ನೀಡಿ ಮೋಸ ಹೋಗಿದ್ದರು. ಈ ಬಗ್ಗೆಯೂ ಪ್ರತ್ಯೇಕ ಪ್ರಕರಣ ದಾಖಲಿಸಲು ಸೂಚನೆ ನೀಡಲಾಗಿದೆ ಎಂದು ಕಮಿಷನರ್‌ ತಿಳಿಸಿದರು.

ಪೀಟರ್‌ ಈಗ ಮಂಗಳೂರು ಪೂರ್ವ (ಕದ್ರಿ) ಠಾಣೆ ಪೊಲೀಸರ ವಶದಲ್ಲಿದ್ದಾನೆ. ವಿಚಾರಣೆ ಮುಗಿದ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು. ಸಿಬಿಐ ಹಾಗೂ ವಿವಿಧ ರಾಜ್ಯಗಳ ಪೊಲೀಸರಿಗೆ ಈತನ ಬಂಧನದ ಕುರಿತು ಮಾಹಿತಿ ನೀಡಲಾಗಿದೆ. ಸಿಬಿಐ ಅಧಿಕಾರಿಗಳ ತಂಡ ಈಗಾಗಲೇ ಮಂಗಳೂರಿಗೆ ಬಂದು ಹೋಗಿದೆ. ಅವರು ನ್ಯಾಯಾಲಯದ ಅನುಮತಿ ಪಡೆದು ಆತನನ್ನು ವಶಕ್ಕೆ ಪಡೆಯಲಿದ್ದಾರೆ ಎಂದರು.

ಡಿಸಿಪಿಗಳಾದ ಅರುಣಾಂಗ್ಷು ಗಿರಿ ಮತ್ತು ಲಕ್ಷ್ಮೀಗಣೇಶ್‌ ಪತ್ರಿಕಾಗೋಷ್ಠಿಯಲ್ಲಿದ್ದರು.

 

Post Comments (+)