ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ದೇಶ ವಿಭಜನೆಯ ಕರಾಳತೆ ಕಟ್ಟಿಕೊಡುವ ಪ್ರದರ್ಶನ

Last Updated 12 ಆಗಸ್ಟ್ 2022, 11:47 IST
ಅಕ್ಷರ ಗಾತ್ರ

ಮಂಗಳೂರು: ಭಾರತ ದೇಶ ವಿಭಜನೆಯ ಸಂದರ್ಭದಲ್ಲಿ ಜನರು ಅನುಭವಿಸುವ ನೋವು ನಲಿವುಗಳ ಕರಾಳತೆಯ ಚಿತ್ರಣವನ್ನು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಅಂಚೆ ಇಲಾಖೆ ವತಿಯಿಂದ ನಗರದ ಪಾಂಡೇಶ್ವರದ ಕೇಂದ್ರ ಅಂಚೆ ಕಚೇರಿಯಲ್ಲಿ ಏರ್ಪಡಿಸಿರುವ ಪ್ರದರ್ಶನವು ಕಟ್ಟಿಕೊಟ್ಟಿತು.

ಕೇಂದ್ರ ಸಂಸ್ಕೃತಿ ಸಚಿವಾಲಯದ ನಿರ್ದೇಶನದ ಮೇರೆಗೆ ಏರ್ಪಡಿಸಿದ್ದ ಈ ಅಂಚೆ ಚೀಟಿ ಪ್ರದರ್ಶನವನ್ನು ಜಿಲ್ಲಾಧಿಕಾರಿ ಡ.ರಾಜೇಂದ್ರ ಕೆ.ವಿ ಅವರು ಶುಕ್ರವಾರ ಉದ್ಘಾಟಿಸಿದರು. ದೇಶ ವಿಭಜನೆ ಸಂದರ್ಭದಲ್ಲಿ ಲಕ್ಷಾಂತರ ಜನರು ಅನುಭವಿಸಿದ ಸಂಕಟ, ನರಳಾಟಗಳನ್ನು ತೋರಿಸುವ ಸಚಿತ್ರ ಮಾಹಿತಿಗಳು ಪ್ರದರ್ಶನದಲ್ಲಿವೆ. ಪ್ರದರ್ಶನವು ಆ.15ರವರೆಗೆ ಮುಂದುವರಿಯಲಿದೆ.

‘ದೇಶ ವಿಭಜನೆಯು ಬಲವಂತದ ವಲಸೆ ಹಾಗೂ ಮಾನವ ಸ್ಥಳಾಂತರದ ಅರಾಜಕ ಸ್ಥಿತಿಯನ್ನು ಸೃಷ್ಟಿಸಿತು. ಲಕ್ಷಾಂತರ ಮಂದಿ ಅಪರಿಚಿತ ಪ್ರದೇಶಗಳಲ್ಲಿ ಪ್ರತಿರೋಧಗಳ ನಡುವೆ ಹೊಸ ನೆಲೆಯನ್ನು ಕಂಡುಕೊಳ್ಳಬೇಕಾಯಿತು. ಇದು ನಂಬಿಕೆ ಹಾಗೂ ಧರ್ಮದ ಆಧಾರದಲ್ಲಿ ನಡೆದ ಹಿಂಸಾತ್ಮಕ ವಿಭಜನೆಯಷ್ಟೇ ಅಲ್ಲ, ಶತಮಾನಗಳ ಕಾಲ ಮುಂದುವರಿದಿದ್ದ ಬದುಕು, ಸಹಬಾಳ್ವೆ ಹಠಾತ್ತಾಗಿ ಹಾಗೂ ನಾಟಕೀಯವಾಗಿ ಕೊನೆಗೊಂಡಿದ್ದರೆ ವ್ಯಥೆಯ ಕಥೆ ಇದು....’ ಎಂಬ ಸಾಲುಗಳು ದೇಶ ವಿಭಜನೆಯ ಕರಾಳತೆಗೆ ಕನ್ನಡಿ ಹಿಡಿಯುತ್ತದೆ.

‘ದೇಶ ವಿಭಜನೆಯಿಂದ 60 ಲಕ್ಷ ಮುಸ್ಲಿಮೇತರರು ಪಶ್ಚಿಮ ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದರು. 65 ಲಕ್ಷ ಮುಸ್ಲೀಮರು ದೆಹಲಿ, ಪಂಜಾಬ್‌ ತೊರೆದು ಪಶ್ಚಿಮ ಪಾಕಿಸ್ತಾನದತ್ತ ವಲಸೆ ಹೋದರು. 20 ಲಕ್ಷ ಮುಸ್ಲಿಮೇತರರು ಪೂರ್ವ ಬಂಗಾಳದಿಂದ ಭಾರತಕ್ಕೆ ವಲಸೆ ಬಂದರು. 1950ರಲ್ಲಿ ಮತ್ತೆ 20 ಲಕ್ಷದಷ್ಟು ಹಿಂದೂಯೇತರರು ಭಾರತದ ಪಶ್ಚಿಮ ಬಂಗಾಳಕ್ಕೆ ವಲಸೆ ಬಂದರು. ಸುಮಾರು 10 ಲಕ್ಷ ಮುಸ್ಲೀಮರು ಪಶ್ಚಿಮ ಬಂಗಾಳದಿಂದ ವಲಸೆ ಹೋದರು. ಮಹಾ ವಲಸೆ ಸಂದರ್ಭದಲ್ಲಿ ಉಂಟಾದ ನೂಕುನುಗ್ಗಲಿನಿಂದಾಗಿ 5 ಲಕ್ಷಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ ಎಂದು ಅಂದಾಜಿಸಲಾಗಿದೆ ಎಂಬ ಮಾಹಿತಿಯನ್ನು ಪ್ರದರ್ಶನದಲ್ಲಿ ನೀಡಲಾಗಿದೆ.

ದೇಶ ವಿಭಜನೆ ಸಂದರ್ಭದಲ್ಲಿ ಬಂಗಾಳದಲ್ಲಿ ಜಲಮಾರ್ಗವನ್ನು ಬಳಸಿ ನಿರಾಶ್ರಿತರನ್ನು ಸಾವಿರಾರು ದೋಣಿಗಳ ಮೂಲಕ ಸಾಗಿಸಿದ, ನಿರಾಶ್ರಿತರು ಎತ್ತಿನ ಬಂಡಿಗಳಲ್ಲಿ ಸಾಗಿದ, ರೈಲುಗಳಿಗೆ ಮುಗಿಬಿದ್ದ, ಜನ ಸಾಲು ಸಾಲಾಗಿ ನಡೆದೇ ಸಾಗಿದ ಚಿತ್ರಗಳು ಪ್ರದರ್ಶನದಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT