ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಪ್ಪು ಮಾಹಿತಿಯಿಂದ ಸೇರಿದ ಜನಜಂಗುಳಿ

₹2 ಸಾವಿರ ಸಿಗುತ್ತದೆಂದು ಸರದಿಯಲ್ಲಿ ನಿಂತ ಕಾರ್ಮಿಕರು
Last Updated 15 ಏಪ್ರಿಲ್ 2020, 14:23 IST
ಅಕ್ಷರ ಗಾತ್ರ

ಮಂಗಳೂರು: ಬ್ಯಾಂಕ್‌ ಖಾತೆಗೆ ₹2 ಸಾವಿರ ಜಮೆ ಮಾಡಲಾಗುತ್ತದೆ ಎಂಬ ತಪ್ಪು ಮಾಹಿತಿಯಿಂದಾಗಿ ನಗರದ ಕೂಳೂರಿನ ಖಾಸಗಿ ಕಟ್ಟಡದ ಬಳಿ ಸುಮಾರು 700 ಕ್ಕೂ ಅಧಿಕ ಕೂಲಿಕಾರ್ಮಿಕರು ಗುಂಪಾಗಿ ಸೇರಿದ್ದರು. ಹಣ ಪಡೆಯುವ ಗಡಿಬಿಡಿಯಲ್ಲಿ ಅಂತರ ಕಾಯ್ದುಕೊಳ್ಳದೇ ನಿಂತಿದ್ದು, ಆತಂಕ ಹೆಚ್ಚುವಂತೆ ಮಾಡಿತು.

ಕೂಳೂರಿನ ಖಾಸಗಿ ಕಟ್ಟಡವೊಂದರಲ್ಲಿ ಕೂಲಿ ಕಾರ್ಮಿಕರ ಮಾಹಿತಿ ಪಡೆದು, ಅವರ ಖಾತೆಗೆ ಹಣ ಹಾಕಲಾಗುತ್ತದೆ ಎಂದು ಮಾಹಿತಿ ದೊರೆತಿದ್ದರಿಂದ ಜನರು ಒಮ್ಮೆಲೆ ಸರದಿಯಲ್ಲಿ ನಿಂತಿದ್ದರು. ‘ನಮ್ಮ ಬ್ಯಾಂಕ್ ಖಾತೆಗೆ ₹2ಸಾವಿರ ಹಣ ಬರುತ್ತದೆ ಎಂದು ನಾವೆಲ್ಲಾ ಇಲ್ಲಿ ಬಂದು ನಿಂತಿದ್ದೇವೆ’ ಎಂದು ಕಾರ್ಮಿಕರು ಹೇಳಿದರು. ಆದರೆ ಯಾರು ಹೇಳಿದ್ದು ಎಂಬುದು ಮಾತ್ರ ಯಾರೊಬ್ಬರಿಗೂ ಗೊತ್ತಿರಲಿಲ್ಲ.

ಎಲ್ಲರೂ ಬ್ಯಾಂಕ್ ಪಾಸ್ ಬುಕ್‌, ಆಧಾರ್ ಕಾರ್ಡ್‌ಗಳನ್ನು ಹಿಡಿದು ಬೆಳಿಗ್ಗೆ 11.30 ರಿಂದ ಮಧ್ಯಾಹ್ನ 3.30 ಯವರೆಗೆ ಸರದಿಯಲ್ಲಿ ನಿಂತಿದ್ದರು. ಕೂಲಿ ಕಾರ್ಮಿಕರ ಬ್ಯಾಂಕ್ ಖಾತೆ ಸಂಖ್ಯೆಯನ್ನು ಯಾವ ಕಾರಣಕ್ಕೆ ಪಡೆಯಲಾಗುತ್ತಿದೆ ಎಂಬ ಬಗ್ಗೆ ಅಲ್ಲಿ ಮಾಹಿತಿ ಪಡೆಯುತ್ತಿದ್ದವರನ್ನು ಕೇಳಿದರೆ, ‘ನಮಗೆ ಡಿಸಿ ಕಚೇರಿಯಿಂದ ಕೂಲಿ ಕಾರ್ಮಿಕರ ಮಾಹಿತಿ ಪಡೆಯಲು ಹೇಳಿದ್ದಾರೆ. ಆದರೆ ಯಾರಿಗೂ ₹2ಸಾವಿರ ಬ್ಯಾಂಕ್ ಖಾತೆಗೆ ಹಾಕುತ್ತಿಲ್ಲ’ ಎಂದು ತಿಳಿಸಿದರು.

ಸ್ಥಳಕ್ಕೆ ಬಂದ ಕಾರ್ಮಿಕ ಅಧಿಕಾರಿಗಳಿಗೂ ಕೂಲಿ ಕಾರ್ಮಿಕರು ಮುತ್ತಿಗೆ ಹಾಕಿದರು. ಆದರೆ ಅವರು ಕಾರಿನಲ್ಲಿ ಹೊರಟು ಹೋದರು. ಅಲ್ಲದೆ ಮಾಹಿತಿ ಪಡೆಯಲು ಬಂದಿದ್ದವರೂ ಬೈಕ್ ಏರಿ ಪರಾರಿ ಆಗಿದ್ದಾರೆ. ₹2ಸಾವಿರ ಸಿಗುತ್ತದೆ ಎಂದು ಬಂದವರು ಬರಿಗೈಲಿ ಮನೆಗೆ ತೆರಳಿದರು. ಈ ಬಗ್ಗೆ ಪೊಲೀಸ್ ಇಲಾಖೆಗೆ, ಸ್ಥಳೀಯ ಕಾರ್ಪೊರೇಟರ್, ಮಹಾನಗರ ಪಾಲಿಕೆಯ ಆಯುಕ್ತರು ಸೇರಿದಂತೆ ಯಾರೊಬ್ಬರಿಗೂ ಮಾಹಿತಿ ಇರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT