ಕುದ್ರೋಳಿ ಕಸಾಯಿಖಾನೆ ಆಧುನೀಕರಣ ವಿವಾದ: ಸಚಿವ ಯು.ಟಿ.ಖಾದರ್‌ಗೆ ಜೆಡಿಎಸ್‌ ಬೆಂಬಲ

7

ಕುದ್ರೋಳಿ ಕಸಾಯಿಖಾನೆ ಆಧುನೀಕರಣ ವಿವಾದ: ಸಚಿವ ಯು.ಟಿ.ಖಾದರ್‌ಗೆ ಜೆಡಿಎಸ್‌ ಬೆಂಬಲ

Published:
Updated:

ಮಂಗಳೂರು: ಸ್ಮಾರ್ಟ್‌ ಸಿಟಿ ಯೋಜನೆಯಡಿ ನಗರದ ಕುದ್ರೋಳಿ ಕಸಾಯಿಖಾನೆಯನ್ನು ಆಧುನೀಕರಣೊಗೊಳಿಸುವುದಕ್ಕೆ ಸಂಬಂಧಿಸಿದ ವಿವಾದದಲ್ಲಿ ಜೆಡಿಎಸ್‌ ದಕ್ಷಿಣ ಕನ್ನಡ ಜಿಲ್ಲಾ ಘಟಕ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್‌ ಅವರ ಬೆಂಬಲಕ್ಕೆ ನಿಂತಿದೆ.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಮುಹಮ್ಮದ್ ಕುಂಞಿ, ‘ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿರುವ ಯು.ಟಿ.ಖಾದರ್‌ ಅವರು ಯಾವುದೇ ತಾರತಮ್ಯ ಇಲ್ಲದೇ ಎಲ್ಲರನ್ನೂ ಸಮಾನವಾಗಿ ಕಾಣುತ್ತಿದ್ದಾರೆ. ನಗರದ ಹಿತದೃಷ್ಟಿಯಿಂದ ಕಸಾಯಿಖಾನೆ ಆಧುನೀಕರಣಕ್ಕೆ ಸಲಹೆ ನೀಡಿದ್ದರು. ಅದನ್ನು ಬಿಜೆಪಿ ಸದಸ್ಯರೂ ಇರುವ ಸ್ಮಾರ್ಟ್‌ ಸಿಟಿ ಮಂಡಳಿ ಒಪ್ಪಿಕೊಂಡಿದೆ. ಈ ವಿಚಾರದಲ್ಲಿ ನಮ್ಮ ಪಕ್ಷ ಸಂಪೂರ್ಣವಾಗಿ ಸಚಿವರ ಬೆಂಬಲಕ್ಕೆ ನಿಲ್ಲುತ್ತದೆ’ ಎಂದರು.

ನಗರದ ನೈರ್ಮಲ್ಯ ಕಾಯುವ ಉದ್ದೇಶದಿಂದ ಸಚಿವರು ಇಂತಹ ಸಲಹೆ ನೀಡಿದ್ದರು. ಅದನ್ನು ಮಂಡಳಿ ಒಪ್ಪಿದೆ. ಆದರೆ, ಸ್ಮಾರ್ಟ್ ಸಿಟಿ ಯೋಜನೆಯ ₹ 15 ಕೋಟಿಯನ್ನು ಖಾದರ್‌ ಅವರು ಈ ಕಾಮಗಾರಿಗೆ ನೀಡಿದ್ದಾರೆ ಎಂಬ ಅರ್ಥದಲ್ಲಿ ಅಪಪ್ರಚಾರ ನಡೆಯುತ್ತಿದೆ. ಜಿಲ್ಲೆಯ ಸಂಸದ ನಳಿನ್‌ಕುಮಾರ್‌ ಕಟೀಲ್‌ ಅವರು ರಾಜಕೀಯ ದುರುದ್ದೇಶದಿಂದ ಇಂತಹ ಅಪಪ್ರಚಾರ ಮಾಡುತ್ತಿದ್ದಾರೆ. ಚುನಾವಣೆಯಲ್ಲಿ ಲಾಭ ಪಡೆಯುವ ಉದ್ದೇಶದಿಂದ ಮಾಡುವ ಈ ರೀತಿಯ ಕುತಂತ್ರಗಳಿಗೆ ಜನರು ಬೆಂಬಲ ನೀಡಬಾರದು ಎಂದು ಹೇಳಿದರು.

ಕುತ್ತಾರು ನಿವಾಸಿ ಕಾರ್ತಿಕ್‌ ರಾಜ್ ಕೊಲೆ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳಲು ಯತ್ನಿಸಿದ್ದ ಸಂಸದರು, ಜಿಲ್ಲೆಗೆ ಬೆಂಕಿ ಹಚ್ಚುವ ಮಾತನಾಡಿದ್ದರು. ಈಗ ಕಸಾಯಿಖಾನೆ ಆಧುನೀಕರಣ ವಿಚಾರ ಮುಂದಿಟ್ಟುಕೊಂಡು ಸಚಿವ ಖಾದರ್‌ ವಿರುದ್ಧ ಜನರನ್ನು ಎತ್ತಿಕಟ್ಟಲು ಯತ್ನಿಸುತ್ತಿದ್ದಾರೆ. ಸಂಸದರು ಜನರನ್ನು ಭಾವನಾತ್ಮಕವಾಗಿ ಪ್ರಚೋದಿಸುವ ಬದಲಿಗೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪೂರಕವಾದ ಸಲಹೆಗಳನ್ನು ನೀಡಬೇಕು ಎಂದರು.

ಜೆಡಿಎಸ್‌ ಮುಖಂಡರಾದ ವಸಂತ ಪೂಜಾರಿ ಮತ್ತು ಎಂ.ಕೆ.ಖಾದರ್‌ ಪತ್ರಿಕಾಗೋಷ್ಠಿಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !