ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನ ಪತನ: 50ಕ್ಕೂ ಹೆಚ್ಚು ಸಾವು

ನೇಪಾಳದ ತ್ರಿಭುವನ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದುರ್ಘಟನೆ
Last Updated 12 ಮಾರ್ಚ್ 2018, 20:43 IST
ಅಕ್ಷರ ಗಾತ್ರ

ಕಠ್ಮಂಡು : ಇಲ್ಲಿನ ತ್ರಿಭುವನ್‌ ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ (ಟಿಐಎ) ಯುಎಸ್–ಬಾಂಗ್ಲಾ ವಿಮಾನಯಾನ ಸಂಸ್ಥೆಯ ವಿಮಾನ ಸೋಮವಾರ ಪತನಗೊಂಡಿದ್ದು, 50ಕ್ಕೂ ಅಧಿಕ ಮಂದಿ ಸಾವನ್ನಪ್ಪಿರುವ ಸಾಧ್ಯತೆ ಇದೆ.

ವಿಮಾನದಲ್ಲಿ 67 ಪ್ರಯಾಣಿಕರು ಮತ್ತು 4 ಸಿಬ್ಬಂದಿ ಇದ್ದರು. 31 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆಸ್ಪತ್ರೆಗೆ ಸಾಗಿಸುವಾಗ ಏಳು ಮಂದಿ ಕೊನೆಯುಸಿರೆಳೆದಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.

ಬಾಂಗ್ಲಾದೇಶದ ಢಾಕಾದಿಂದ ಕಠ್ಮಂಡುಗೆ ಬಂದಿದ್ದ ವಿಮಾನ ಮಧ್ಯಾಹ್ನ 2.20ಕ್ಕೆ ಭೂ ಸ್ಪರ್ಶ ಮಾಡಿತ್ತು.

‘ಭೂ ಸ್ಪರ್ಶ ಮಾಡುವ ವೇಳೆ ವಿಮಾನವು ರನ್‌ವೇಯಿಂದ ಜಾರಿದ್ದು, ಬೆಂಕಿ ಹೊತ್ತಿಕೊಂಡಿದೆ. ನಿಲ್ದಾಣದ ಪಕ್ಕದಲ್ಲಿರುವ ಫುಟ್‌ಬಾಲ್ ಮೈದಾನದಲ್ಲಿ ವಿಮಾನ ಪತನಗೊಂಡಿದೆ’ ಎಂದು ಟಿಐಎ ವಕ್ತಾರ ಪ್ರೇಮನಾಥ್ ಠಾಕೂರ್ ತಿಳಿಸಿದ್ದಾರೆ.

ತಪ್ಪು ಸ್ಥಳದಲ್ಲಿ ಭೂ ಸ್ಪರ್ಶ: ‘ರನ್‌ವೇನ ದಕ್ಷಿಣ ಭಾಗದಿಂದ ವಿಮಾನ ಭೂ ಸ್ಪರ್ಶಕ್ಕೆ ಅವಕಾಶ ನೀಡಲಾಗಿತ್ತು. ಆದರೆ ಉತ್ತರ ಭಾಗದಲ್ಲಿ ಭೂ ಸ್ಪರ್ಶ ಮಾಡಿಸಲಾಗಿದೆ’ ಎಂಬ ನೇಪಾಳ ನಾಗರಿಕ ವಿಮಾನಯಾನ ಪ್ರಾಧಿಕಾರದ ಪ್ರಧಾನ ನಿರ್ದೇಶಕ ಸಂಜೀವ್ ಗೌತಮ್‌ ಅವರ ಹೇಳಿಕೆಯನ್ನು ‘ಕಠ್ಮಂಡು ಪೋಸ್ಟ್’ ಉಲ್ಲೇಖಿಸಿದೆ.

‘ಕಪ್ಪುಪೆಟ್ಟಿಗೆ ದೊರೆತಿದ್ದು, ಅಪಘಾತದ ಕಾರಣವನ್ನು ಇನ್ನಷ್ಟೇ ಕಂಡುಕೊಳ್ಳಬೇಕಿದೆ. ತಾಂತ್ರಿಕ ದೋಷದಿಂದಾಗಿ ಬೆಂಕಿ ತಗುಲಿರುವ ಸಾಧ್ಯತೆ ಇದೆ’ ಎಂದು ಅವರು ಹೇಳಿದ್ದಾರೆ.

ಕಠ್ಮಂಡು ವಿಮಾನ ನಿಲ್ದಾಣಕ್ಕೆ ಬರುವ, ಇಲ್ಲಿಂದ ಹೊರಡುವ ಎಲ್ಲಾ ವಿಮಾನಗಳನ್ನು ಸ್ಥಗಿತಗೊಳಿಸಲಾಗಿತ್ತು.

ಅದೃಷ್ಟದಿಂದ ಬದುಕುಳಿದೆ: ‘ನನ್ನ ಅದೃಷ್ಟ; ಸಾವಿನಿಂದ ಪಾರಾದೆ. ವಿಮಾನ ರನ್‌ವೇಯಲ್ಲಿ ಇಳಿಯುವಾಗ ದೊಡ್ಡ ಶಬ್ದವಾಯಿತು’ –ಪತನಗೊಂಡ ವಿಮಾನದಲ್ಲಿದ್ದ ಪ್ರಯಾಣಿಕ ಬಸಂತ್‌ ಬೋಹಾರ ದುರಂತದ ಕ್ಷಣವನ್ನು ನೆನಪಿಸಿಕೊಂಡಿದ್ದು ಹೀಗೆ.

ದುರಂತದಲ್ಲಿ ಅವರ ತಲೆ ಮತ್ತು ಕಾಲಿಗೆ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

‘ಇದ್ದಂಕ್ಕಿದ್ದಂತೆ ವಿಮಾನ ವಿಚಿತ್ರವಾಗಿ ಅಲುಗಾಡಲು ಆರಂಭಿಸಿತು. ಜತೆಗೆ ದೊಡ್ಡ ಶಬ್ದ ಕೇಳಿಸಿತು. ನಾನು ಕಿಟಕಿ ಪಕ್ಕದ ಆಸನದಲ್ಲಿ ಕುಳಿತಿದ್ದೆ. ಹೀಗಾಗಿ ಕಿಟಕಿ ಒಡೆದು ಹೊರಬರಲು ಸಾಧ್ಯವಾಯಿತು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT