ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನ:ಹಲ್ಲೆ ಆರೋಪಿ ನದಿಗೆ ಜಿಗಿದು ಸಾವು

Last Updated 15 ಜುಲೈ 2019, 19:48 IST
ಅಕ್ಷರ ಗಾತ್ರ

ಮಂಗಳೂರು: ಪತ್ನಿಗೆ ಹಲ್ಲೆ ನಡೆಸಿ ಪರಾರಿಯಾಗುತ್ತಿದ್ದ ವ್ಯಕ್ತಿಯೊಬ್ಬ ಪೊಲೀಸರು ವಶಕ್ಕೆ ಪಡೆದು ಕರೆತರುತ್ತಿದ್ದಾಗ ತಪ್ಪಿಸಿಕೊಳ್ಳುವ ಯತ್ನದಲ್ಲಿ ಭಾನುವಾರ ರಾತ್ರಿ ಕೂಳೂರು ಸೇತುವೆಯಿಂದ ಫಲ್ಗುಣಿ ನದಿಗೆ ಜಿಗಿದಿದ್ದು, ಮುಳುಗಿ ಮೃತಪಟ್ಟಿದ್ದಾನೆ.

ಕುದ್ರೋಳಿ ನಿವಾಸಿ ಮುನೀರ್‌ (42) ಮೃತ ವ್ಯಕ್ತಿ. ಕೂಳೂರು ಸೇತುವೆಯಿಂದ ಜಿಗಿದಿದ್ದ ಆರೋಪಿಯ ಮೃತದೇಹ ಬೆಂಗರೆ ಸಮೀಪ ಸೋಮವಾರ ಪತ್ತೆಯಾಗಿದೆ.

ಮುನೀರ್ ಭಾನುವಾರ ಸಂಜೆ ತನ್ನ ಪತ್ನಿಗೆ ಹಲ್ಲೆ ನಡೆಸಿ ಬಳಿಕ ಬಟ್ಟೆಬರೆಗಳೊಂದಿಗೆ ಆಟೋರಿಕ್ಷಾದಲ್ಲಿ ಪರಾರಿಯಾಗುತ್ತಿದ್ದ. ಹಿಂದೆಯೂ ಹಲವು ಬಾರಿ ಪತ್ನಿಗೆ ಹಲ್ಲೆ ನಡೆಸಿದ್ದ ಆರೋಪಿ, ದೀರ್ಘ ಕಾಲ ಕುಟುಂಬದಿಂದ ದೂರ ಉಳಿದಿದ್ದ. ಇದೇ ಕಾರಣಕ್ಕೆ ಹಲ್ಲೆಗೊಳಗಾದ ಮಹಿಳೆಯ ಅಕ್ಕನ ಗಂಡ ಮುಹಮ್ಮದ್ ಅವರು ಮುನೀರ್ ವಿರುದ್ಧ ಮಂಗಳೂರು ಉತ್ತರ (ಬಂದರು) ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ದೂರು ದಾಖಲಿಸಿಕೊಂಡ ಪೊಲೀಸರು ತಕ್ಷಣವೇ ಎಲ್ಲ ಠಾಣೆಗಳಿಗೂ ಮಾಹಿತಿ ರವಾನಿಸಿದ್ದರು. ಆರೋಪಿಯು ಹಳೆಯಂಗಡಿ ಸಮೀಪ ಹೋಗುತ್ತಿದ್ದಾಗ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದರು. ಆರೋಪಿಯನ್ನು ಆತನ ಆಟೊದಲ್ಲಿ ಮಂಗಳೂರಿನ ಬಂದರು ಠಾಣೆಗೆ ಕರೆತರಲಾಗುತ್ತಿತ್ತು. ಆತನೊಂದಿಗೆ ಒಬ್ಬ ಕಾನ್‌ಸ್ಟೆಬಲ್‌ ಇದ್ದರು.

‘ರಾತ್ರಿ 12.30ರ ಸುಮಾರಿಗೆ ಕೂಳೂರು ಸೇತುವೆ ಬಳಿ ಬಂದಾಗ ಮೂತ್ರ ವಿಸರ್ಜನೆಯ ನೆಪದಲ್ಲಿ ಮುನೀರ್‌ ಆಟೊದಿಂದ ಕೆಳಕ್ಕೆ ಇಳಿದಿದ್ದ. ಕ್ಷಣಮಾತ್ರದಲ್ಲಿ ಸೇತುವೆಯಿಂದ ನದಿಗೆ ಧುಮುಕಿದ್ದ. ಆ ಬಳಿಕ ಆತ ಪತ್ತೆಯಾಗಿರಲಿಲ್ಲ. ಸೋಮವಾರ ಸಂಜೆ ಬೆಂಗರೆ ಬಳಿ ಮೃತದೇಹ ಪತ್ತೆಯಾಗಿದೆ’ ಎಂದು ಪೊಲೀಸ್‌ ಕಮಿಷನರ್‌ ಸಂದೀಪ್‌ ಪಾಟೀಲ್‌ ತಿಳಿಸಿದ್ದಾರೆ.

ಪಣಂಬೂರು ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಪೊಲೀಸರು ಸೋಮವಾರ ಸಂಜೆ ಸ್ಥಳ ಮಹಜರು ನಡೆಸಿ, ಮೃತದೇಹವನ್ನು ಸ್ಥಳಾಂತರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT