ಮಂಗಳೂರು: ದೇಶವು ಒಟ್ಟು ಆಂತರಿಕ ಉತ್ಪನ್ನದಲ್ಲಿ ಇಂಗ್ಲೆಂಡ್ ಅನ್ನು ಹಿಂದಿಕ್ಕಿ ಜಗತ್ತಿನಲ್ಲೇ ಐದನೇ ಸ್ಥಾನಕ್ಕೇರಿದೆ. ಆದರೆ ತಲಾ ಆದಾಯವನ್ನು ಪರಿಗಣಿಸಿದರೆ ಬಹಳ ಹಿಂದಿದ್ದೇವೆ. ದೇಶದ ತಲಾ ಆದಾಯವನ್ನು ಹೆಚ್ಚಿಸಲು ಕ್ರಮವಹಿಸುವ ಅಗತ್ಯವಿದೆ ಎಂದು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಸಹಕುಲಾಧಿಪತಿ ಡಾ.ಶಾಂತಾರಾಮ ಶೆಟ್ಟಿ ಹೇಳಿದರು.
ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯವು ಇಲ್ಲಿ ಗುರುವಾರ ಆಯೋಜಿಸಿದ್ದ ‘ಕರಾವಳಿ ನವೋದ್ಯಮ ಕಾರ್ಯಕ್ರಮ 2024’ರ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ‘ಜಗತ್ತಿನ ಪ್ರಬಲ ಆರ್ಥಿಕತೆಗಳಲ್ಲಿ ಒಂದಾಗಿರುವ ಜರ್ಮನಿಯನ್ನೂ ಭಾರತ ಇನ್ನು ಕೆಲವೇ ವರ್ಷಗಳಲ್ಲಿ ಹಿಂದಿಕ್ಕಲಿದೆ. ಆದರೆ ಈ ಸಾಧನೆಯಿಂದ ತೃಪ್ತರಾಗುವಂತಿಲ್ಲ. ತಲಾ ಆದಾಯ ಹೆಚ್ಚಳವಾಗದೇ, ಕೇವಲ ಜಿಡಿಪಿ ಹೆಚ್ಚಳವಾದರೆ ಸಾಲದು ಎಂದರು.
ನವೋದ್ಯಮ ನಮ್ಮ ಬದುಕಿನ ಮಹತ್ವದ ಭಾಗವಾಗಿದೆ. ದೇಶದ ಪ್ರಮುಖ ಉದ್ಯಮಿಗಳಾದ ಜೆಮ್‌ಷೆಡ್‌ಜಿ ಟಾಟಾ ಅವರಿಂದ ಹಿಡಿದು ಈಗಿನ ಉದ್ಯಮಿಗಳಾದ ಅದಾನಿ, ಅಂಬಾನಿ, ನಾರಾಯಣಮೂರ್ತಿ, ಅಜೀಮ್ ಪ್ರೇಮ್‌ಜಿವರೆಗೂ ಎಲ್ಲರೂ ಸಣ್ಣ ಉದ್ದಿಮೆಗಳನ್ನು ಸ್ಥಾಪಿಸಿಯೇ ಉದ್ಯಮ ಸಾಮ್ರಾಜ್ಯಗಳನ್ನು ಕಟ್ಟಿದವರು. ಉದ್ದಿಮೆ ಸ್ಥಾಪಿಸಲು ದೂರದರ್ಶಿತ್ವ ಬೇಕು. ಭವಿಷ್ಯವನ್ನು ಮುಂಗಾಣಬೇಕು. ಮಲ್ಪೆಯ ಸಣ್ಣ ಗ್ರಾಮದ ಟಿ.ಎಂ.ಎ ಪೈ ಅವರು ಆರೋಗ್ಯ ಕ್ಷೇತ್ರದ ಬಗ್ಗೆ ಹೊಂದಿದ್ದ ಮುಂದಾಲೋಚನೆಯಿಂದಾಗಿ ಈ ಪ್ರದೇಶದವು ಆರೋಗ್ಯ ಸೇವೆಯಲ್ಲಿ ಮಹತ್ವದ ಸ್ಥಾನಪಡೆಯುವಂತಾಗಿದೆ ಎಂದರು.
ಎಂಆರ್‌ಪಿಎಲ್‌ನ ನಿರ್ದೇಶಕ (ಸಂಸ್ಕರಣೆ) ನಂದಕುಮಾರ್ ವಿ., ‘ನವೋದ್ಯಮಿಗಳಾಗ ಹೊರಟವರಿಗೆ ಹೊಸತನ ಹುಡುಕುವ ಹಸಿವು ಇರಬೇಕು. ಹಿಡಿದ ಕಾರ್ಯವನ್ನು ಛಲಬಿಡದೆ ಸಾಧಿಸುವ ತುಡಿತವಿರಬೇಕು’ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಜಿ.ಸಂತೋಷ್ ಕುಮಾರ್, ‘ದೇಸಿ, ಸಾಂಪ್ರದಾಯಿಕ ಜ್ಞಾನವನ್ನು ಬಳಸಿ ರಫ್ತು ಮಾಡುವಂತಹ ಹೊಸ ಉತ್ಪನ್ನಗಳನ್ನು ತಯಾರಿಸಲು ಸಾಕಷ್ಟು ಅವಕಾಶಗಳಿವೆ. ನವೋದ್ಯಮಿಗಳು ಈ ನಿಟ್ಟಿನಲ್ಲಿ ಪ್ರಯತ್ನಿಸಬೇಕು’ ಎಂದರು.
ಕೆಸಿಸಿಐ ಅಧ್ಯಕ್ಷ ಅನಂತೇಶ್ ವಿ.ಪ್ರಭು, ಸಿಐಐ ಮಂಗಳೂರು ಜಿಲ್ಲಾ ಮಂಡಳಿಯ ಅಧ್ಯಕ್ಷ ಅಜಿತ್ ಕಾಮತ್, ಯುಸಿಸಿಐ ನಿರ್ದೇಶಕ ಡಾ.ವಿಜಯೇಂದ್ರ ವಸಂತ್, ಗೋಪಾಲ ಮೊಗೆರಾಯ ಮಾತನಾಡಿದರು.
ನಿಟ್ಟೆ ಅಟಲ್ ಇನ್ಕುಬೇಷನ್ ಸೆಂಟರ್‌ನ (ಎಐಸಿ) ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಪಿ.ಆಚಾರ್ ಸ್ವಾಗತಿಸಿದರು. ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಆವಿಷ್ಕಾರ ಮತ್ತು ಉತ್ತೇಜನಾ ಕೇಂದ್ರ (ಐಐಸಿ) ಅಧ್ಯಕ್ಷ ಶ್ರೀನಿಕೇತನ್ ಜಿ. ಧನ್ಯವಾದ ಸಲ್ಲಿಸಿದರು.
ವಿದ್ಯಾರ್ಥಿಗಳ ಸ್ವಯಂ ಹಾಗೂ ಸಮಗ್ರ ಕಲಿಕೆಗೆ ನೆರವಾಗಲು ಎಕ್ಸ್ಪರಿಮೈಂಡ್‌ಲ್ಯಾಬ್ಸ್ ಸಂಸ್ಥೆಯು ಅಭಿವೃದ್ಧಿಪಡಿಸಿದ ‘ಪೋರ್ಟಬಲ್ ಟಿಂಕರಿಂಗ್ ಲ್ಯಾಬ್’ ಅನ್ನು ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು.
ಹೊಸ ಉತ್ಪನ್ನ ‘ಪೋರ್ಟಬಲ್ ಟಿಂಕರಿಂಗ್ ಲ್ಯಾಬ್’ ಬಿಡುಗಡೆ ‘ನವೋದ್ಯಮಿಗಳಿಗೆ ಹೊಸತನ ಹುಡುಕುವ ಹಸಿವು ಇರಬೇಕು’
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.