ಶನಿವಾರ, ಜನವರಿ 25, 2020
15 °C

ಮಧ್ಯಮ ಮಾರ್ಗಿಗಳಿಗೆ ಸಂಕಷ್ಟದ ಕಾಲ: ನಟ ಪ್ರಕಾಶ್‌ ಬೆಳವಾಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ‘ಈಗಿನ ದಿನಗಳಲ್ಲಿ ಬಲವೂ ಅಲ್ಲದ, ಎಡವೂ ಅಲ್ಲದ ಮಧ್ಯಮ ಮಾರ್ಗಿಗಳು ಈ ಎರಡೂ ಪಂಥದವರ ದಾಳಿಯನ್ನು ಎದುರಿಸಬೇಕಾಗಿದೆ. ಇದರಿಂದಾಗಿ ಮಧ್ಯಮ ಮಾರ್ಗಿಗಳು ಯಾವುದೇ ಚರ್ಚೆಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದ ಸ್ಥಿತಿ ಇದೆ’ ಎಂದು ರಂಗಕರ್ಮಿ, ನಟ ಪ್ರಕಾಶ್‌ ಬೆಳವಾಡಿ ಆತಂಕ ವ್ಯಕ್ತಪಡಿಸಿದರು.

ನಗರದ ಸೇಂಟ್‌ ಆಗ್ನೆಸ್‌ ಕಾಲೇಜಿನಲ್ಲಿ ‘ನಾಲೆಜ್‌ ಫ್ಯಾಕ್ಟರಿ’ ಶುಕ್ರವಾರ ಆಯೋಜಿಸಿದ್ದ ಇಡೀ ದಿನದ ಕಾರ್ಯಕ್ರಮದಲ್ಲಿ ‘ಸ್ವತಂತ್ರ ಚಿಂತಕ ಗಿರೀಶ್‌ ಕಾರ್ನಾಡ್‌ ಅವರನ್ನು ಅರಿಯುವುದು’ ಕುರಿತು ಪತ್ರಕರ್ತೆ ಮಾನಸಿ ಪರೇಶ್‌ ಕುಮಾರ್‌ ಅವರೊಂದಿಗೆ ನಡೆಸಿದ ಸಂವಾದದಲ್ಲಿ ಪ್ರತಿಕ್ರಿಯಿಸಿದರು.

‘ಗುಂಪು ಹಲ್ಲೆ ನಡೆಸುವವರು ಬಲಪಂಥೀಯರಲ್ಲೂ ಇದ್ದಾರೆ. ಎಡಪಂಥೀಯರಲ್ಲೂ ಇದ್ದಾರೆ. ಇಂತಹ ಕಾಲಘಟ್ಟದಲ್ಲಿ ಗಿರೀಶ್‌ ಕಾರ್ನಾಡ್‌, ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಮತ್ತು ಕೆ.ವಿ. ಸುಬ್ಬಣ್ಣ ಅವರಂತಹ ವ್ಯಕ್ತಿಗಳು ಇಲ್ಲದೇ ಇರುವುದರಿಂದ ನನ್ನಂತಹವರು ಒಬ್ಬಂಟಿಯಾಗಿದ್ದೇವೆ’ ಎಂದರು.

ತಪ್ಪು ಗ್ರಹಿಕೆ

‘ಕಾರ್ನಾಡ್‌ ಹಿಂದುತ್ವದ ವಿರೋಧಿ ಎಂದು ಆರ್‌ಎಸ್‌ಎಸ್‌ ತಪ್ಪು ಗ್ರಹಿಸಿಕೊಂಡಿದೆ. ಆದರೆ, ಅವರು ಹಿಂದುತ್ವದ ವಿರೋಧಿ ಆಗಿರಲಿಲ್ಲ. ಬ್ರಾಹ್ಮಣ್ಯದ ವಿರೋಧಿ ಆಗಿದ್ದರು. ಅದರ ಜೊತೆಯಲ್ಲೇ, ಪ್ರಾಚೀನ ಭಾರತೀಯ ತತ್ವಶಾಸ್ತ್ರ ಕುರಿತು ಖಚಿತವಾಗಿ ಮಾತನಾಡಬಲ್ಲ ವ್ಯಕ್ತಿಯಾಗಿದ್ದರು. ಈ ದಿಸೆಯಲ್ಲಿ ಅವರ ಕೆಲಸಗಳು ದಾಖಲೆಗಳಾಗಿ ಉಳಿದಿವೆ’ ಎಂದು ಬೆಳವಾಡಿ ಹೇಳಿದರು.

ಪ್ರಗತಿಪರರ ವಿರುದ್ಧ ವಾಗ್ದಾಳಿ

ಯಾವುದೇ ಬರಹಗಾರನ ಕೃತಿಗೆ ನಿಷೇಧ ಹೇರುವುದಕ್ಕೆ ಕಾರ್ನಾಡ್‌ ವಿರೋಧವಿತ್ತು. ಈಗ ಅವರ ‘ತುಘಲಕ್‌’ ನಾಟಕ ಪ್ರಕಟವಾಗಿದ್ದರೆ, ಅದಕ್ಕೂ ನಿಷೇಧ ಹೇರುವ ಸಾಧ್ಯತೆ ಇತ್ತು. ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅವಧಿಯಲ್ಲಿ ಎರಡು ಕೃತಿಗಳಿಗೆ ನಿಷೇಧ ಹೇರಿದಾಗ ಪ್ರಗತಿಪರರು ಮೌನಕ್ಕೆ ಶರಣಾಗಿದ್ದರು. ಗೋಹತ್ಯೆಯನ್ನು ನಿಷೇಧಿಸುವ ಉಲ್ಲೇಖ ಸಂವಿಧಾನದ 48ನೇ ವಿಧಿಯಲ್ಲೇ ಇದೆ. ಅದನ್ನು ರದ್ದು ಮಾಡುವಂತೆ ಪ್ರಗತಿಪರರು ಏಕೆ ಮಾತನಾಡುವುದಿಲ್ಲ ಎಂದು ಪ್ರಶ್ನಿಸಿದರು.

ಪೌರತ್ವ (ತಿದ್ದುಪಡಿ) ಕಾಯ್ದೆ ಕುರಿತು ಸಂವಾದದಲ್ಲಿ ಪ್ರತಿಕ್ರಿಯಿಸಿದ ಬೆಳವಾಡಿ, ‘ಭಾರತ ಬಡ ರಾಷ್ಟ್ರ. ಬಾಂಗ್ಲಾದೇಶದ ನಿರಾಶ್ರಿತರ ಹೊರೆಯನ್ನು ಹೊತ್ತುಕೊಳ್ಳಲು ಸಾಧ್ಯವಿಲ್ಲ ಎಂದು ಇಂದಿರಾ ಗಾಂಧಿಯವರು 1972ರಲ್ಲೇ ಬಿಬಿಸಿಗೆ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದರು. ಈ ವಿಚಾರದಲ್ಲಿ ಅವರ ಅವಧಿಯಲ್ಲಿ ಏನನ್ನೂ ಮಾಡಲಿಲ್ಲ’ ಎಂದು ಟೀಕಿಸಿದರು.

1978ರಲ್ಲಿ ಈಶಾನ್ಯ ರಾಜ್ಯಗಳಲ್ಲಿ ದೊಡ್ಡ ಪ್ರಮಾಣದಲ್ಲಿ ನಿರಾಶ್ರಿತರ ವಿರೋಧಿ ಪ್ರತಿಭಟನೆಗಳು ನಡೆದಿದ್ದವು. ಅಕ್ರಮ ವಲಸಿಗರ ಸಮಸ್ಯೆಯಿಂದ ಹೊರಬರಲು ಆ ಭಾಗದ ಜನರು ಬಯಸಿದ್ದಾರೆ ಎಂದರು.

ಆದರೆ, ಭಾರತದ ಉಳಿದ ಪ್ರದೇಶಗಳ ಜನರು ವಿರುದ್ಧವಾದ ನಿಲುವು ತಾಳಿದ್ದಾರೆ. ರಾಷ್ಟ್ರೀಯ ಮಟ್ಟದ ಕೆಲವು ನಾಯಕರು ಎರಡೂ ಕಡೆಯ ಪ್ರತಿಭಟನೆಗಳಲ್ಲಿ ಭಾಗವಹಿಸುವುದನ್ನು ಕಂಡಾಗ ಗೊಂದಲ ಉಂಟಾಗುತ್ತದೆ ಎಂದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು