ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಮರಳು ದಂಧೆ ಮುಚ್ಚಿಹಾಕಲು ಹುನ್ನಾರ

ಅಡ್ಯಾರ್ ದೋಣಿ ದುರಂತ: ಡಿವೈಎಫ್ಐ ಆರೋಪ
Last Updated 3 ಜುಲೈ 2022, 15:59 IST
ಅಕ್ಷರ ಗಾತ್ರ

ಮಂಗಳೂರು: ‘ಅಡ್ಯಾರ್ ಬಳಿ ನೇತ್ರಾವತಿ ನದಿಯಲ್ಲಿ ಅಕ್ರಮ ಮರಳುಗಾರಿಕೆಯ ದೋಣಿ ಮಗುಚಿ ವಲಸೆ ಕಾರ್ಮಿಕ ನೀರುಪಾಲಾದ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ. ಅಕ್ರಮ ಮರಳುಗಾರಿಕೆಯನ್ನು ಉಲ್ಲೇಖಿಸುವ ಬದಲಿಗೆ ನದಿಯಲ್ಲಿದ್ದ ದೋಣಿಯನ್ನು ದಂಡೆಯ ಮೇಲೆ ಎಳೆಯುವಾಗ ದೋಣಿ ಮಗುಚಿ ಕಾರ್ಮಿಕ ಕಣ್ಮರೆ ಎಂದುಪೊಲೀಸರು ಪ್ರಕರಣವನ್ನು ತಿರುಚಿದ್ದಾರೆ’ ಎಂದು ಡಿವೈಎಫ್ಐ ರಾಜ್ಯ ಸಮಿತಿ ಅಧ್ಯಕ್ಷ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.

ನಿಷೇಧಿತ ಅವಧಿಯಲ್ಲಿ ಜಿಲ್ಲೆಯ ನದಿಗಳಲ್ಲಿ‌ ನೇತ್ರಾವತಿ, ಪಲ್ಗುಣಿ, ಶಾಂಭವಿ ನದಿಗಳಲ್ಲಿ ಅಕ್ರಮ ಮರಳುಗಾರಿಕೆ ದಂದೆ ವ್ಯಾಪಕವಾಗಿ ನಡೆಯುತ್ತಿದೆ.‌ ಆಡಳಿತ ಪಕ್ಷದ ಪ್ರಭಾವಿ ಜನಪ್ರತಿನಿಧಿಗಳ ಆಪ್ತರು ಮರಳು ದಂಧೆಯ ಸೂತ್ರದಾರರು ಎಂಬುದು ತಿಳಿಯದ ವಿಷಯವೇನಲ್ಲ. ಸಾರ್ವಜನಿಕವಾಗಿಯೆ ಹಿಟಾಚಿ, ಜೆಸಿಬಿಗಳಂತಹ ಯಂತ್ರಗಳನ್ನು ಮರಳುಗಾರಿಕೆಗೆ ಬಳಸುತ್ತಿದ್ದರೂ ಪೊಲೀಸ್ ಇಲಾಖೆಯೂ ಸೇರಿ, ಸಂಬಂಧ ಪಟ್ಟ ಇಲಾಖೆಗಳ ಅಧಿಕಾರಿಗಳು ಮೌನ ವಹಿಸಿದ್ದಾರೆ ಎಂದು ನಾಗರಿಕರಿಂದ ವ್ಯಾಪಕ ದೂರುಗಳು ಕೇಳಿಬಂದಿವೆ. ಪೊಲೀಸ್ ಠಾಣೆಗಳ ಮುಂಭಾಗದಲ್ಲೇ ರಾಜಾರೋಷವಾಗಿ ಅಕ್ರಮ ಮರಳು ಸಾಗಾಟ ನಡೆದರೂ ತಡೆಯಲು ಮುಂದಾಗದಿರುವುದು ಮರಳು ದಂದೆಕೋರರಿಗೆ ಉನ್ನತ ಮಟ್ಟದ ಸಂಪರ್ಕ, ಆಡಳಿತದ ಶಾಮೀಲಾತಿಯನ್ನು ಎತ್ತಿತೋರಿಸುತ್ತದೆ. ಇದರಿಂದಾಗಿ ಜಿಲ್ಲೆಯ ಜೀವನದಿಗಳಿಗೆ, ಪರಿಸರಕ್ಕೆ ವ್ಯಾಪಕ ಹಾನಿ ಒಂದಡೆಯಾದರೆ, ಜನಸಾಮಾನ್ಯರಿಗೆ ಮರಳು ಕೈಗೆಟುಕದಷ್ಟು ದುಬಾರಿಯಾಗಿದೆ’ ಎಂದು ಅವರು ತಿಳಿಸಿದ್ದಾರೆ.

‘ಅಡ್ಯಾರ್ ದೋಣಿ ದುರಂತ ಅಕ್ರಮ ಮರಳುಗಾರಿಕೆಯ ಸಂದರ್ಭದಲ್ಲೇ ನಡೆದಿರುವುದು ಸಾರ್ವಜನಿಕವಾಗಿ ಎಲ್ಲರಿಗೂ ತಿಳಿದಿದೆ. ಆದರೂ, ಅದನ್ನು ನದಿಯಲ್ಲಿದ್ದ ದೋಣಿ ದಂಡೆಗೆ ಎಳೆಯುವಾಗ ನಡೆದಿರುವ ದುರ್ಘಟನೆ ಎಂದು ಬಿಂಬಿಸುವುದು ಖಂಡನೀಯ. ಇದು ಜಿಲ್ಲೆಯಲ್ಲಿ ಪ್ರಭಾವಿ ಮಾಫಿಯಾ ಆಗಿರುವ ಮರಳು ದಂದೆಕೋರರ ಹಿತ ರಕ್ಷಿಸುವ ಪ್ರಯತ್ನವಲ್ಲದೇ ಮತ್ತೇನೂ ಅಲ್ಲ. ಈ ದುರಂತದ ಕುರಿತು ವಸ್ತುನಿಷ್ಠ ತನಿಖೆ ನಡೆಯಬೇಕು, ಮರಳುಗಾರಿಕೆಗೆ ನಿಷೇಧ ಹೇರಿರುವ ಜಿಲ್ಲಾಧಿಕಾರಿಗಳು ವಿವಿಧ ಇಲಾಖೆಗಳ ಶಾಮೀಲಾತಿಯಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ತಡೆಯಲು ಕಟ್ಟನಿಟ್ಟಿನ ಕ್ರಮ ವಹಿಸಿ ನದಿಗಳ ಸುರಕ್ಷತೆಗೆ ಮುಂದಾಗಬೇಕು. ದೋಣಿ ದುರಂತಕ್ಕೆ ಬಲಿಯಾದ ವಲಸೆ ಕಾರ್ಮಿಕನ ಮೃತದೇಹದ ಪತ್ತೆ ಹಾಗೂ ಕುಟುಂಬಕ್ಕೆ ಪರಿಹಾರ ಒದಗಿಸಿಕೊಡಬೇಕು’ ಎಂದು ಡಿವೈಎಫ್ಐ ಆಗ್ರಹಿಸುತ್ತದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT