ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಸೌಂದರ್ಯ ದಂತ ವೈದ್ಯಕೀಯ ಸಮಾವೇಶದಲ್ಲಿ ಡಾ. ದಿಬ್ಯೇಂದು ಮಜುಂದಾರ್

Last Updated 4 ಫೆಬ್ರುವರಿ 2023, 6:50 IST
ಅಕ್ಷರ ಗಾತ್ರ

ಮಂಗಳೂರು: ‘ದಂತ ವೈದ್ಯ ಶಿಕ್ಷಣ ಪಡೆದವರಿಗೆ ಕುಟುಂಬ ವೈದ್ಯರಾಗಿ ಸೇವೆ ಸಲ್ಲಿಸಲು ಅವಕಾಶ ನೀಡುವ ಕುರಿತಂತೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುವ ನಿರೀಕ್ಷೆ ಇದೆ’ ಎಂದು ಭಾರತೀಯ ದಂತ ವೈದ್ಯಕೀಯ ಪರಿಷತ್ ಅಧ್ಯಕ್ಷ ಡಾ. ದಿಬ್ಯೇಂದು ಮಜುಂದಾರ್ ಹೇಳಿದರು.

ನಗರದ ಟಿಎಂಎ ಪೈ ಸಭಾಭವನ ದಲ್ಲಿ ಭಾರತೀಯ ಸೌಂದರ್ಯ ದಂತ ಚಿಕಿತ್ಸಾ ಸಂಘ (ಎಸ್ತೆಟಿಕ್ ಡೆಂಟಿಸ್ಟ್ರಿ ಅಸೋಸಿಯೇಷನ್ ಆಫ್ ಇಂಡಿಯಾ) ಶುಕ್ರವಾರದಿಂದ 4 ದಿನ ಆಯೋಜಿಸಿರುವ ರಾಷ್ಟ್ರೀಯ ಸೌಂದರ್ಯ ದಂತ ವೈದ್ಯಕೀಯ ಸಮಾವೇಶ ದಲ್ಲಿ ಅವರು ಮಾತನಾಡಿ ದರು. ‘ದಂತ ವೈದ್ಯ ಶಿಕ್ಷಣದೆಡೆಗೆ ವಿದ್ಯಾರ್ಥಿಗಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಕೋರ್ಸ್‌ನ ಅವಧಿಯನ್ನು 4.5 ವರ್ಷಕ್ಕೆ ಪರಿಷ್ಕರಿಸುವ ಸಾಧ್ಯತೆ ಇದೆ’ ಎಂದರು.

ಸರ್ಕಾರವು ಎಂಬಿಬಿಎಸ್ ಸೀಟ್‌ಗಳನ್ನು 60 ಸಾವಿರದಿಂದ 80 ಸಾವಿರಕ್ಕೆ ಏರಿಕೆ ಮಾಡಿದ್ದರಿಂದ ದಂತ ವೈದ್ಯ ಶಿಕ್ಷಣಕ್ಕೆ ತುಸು ಹಿನ್ನಡೆಯಾಗಿದೆ. ಎಂಬಿಬಿಎಸ್ ವೈದ್ಯರು ಗ್ರಾಮಾಂತರ ಪ್ರದೇಶಗಳಿಗೆ ಹೋಗಿ ಕೆಲಸ ಮಾಡಲು ಮುಂದೆ ಬರದಿದ್ದರೆ, ದಂತ ವೈದ್ಯ ಶಿಕ್ಷಣ ಪಡೆದವರನ್ನು ಅದಕ್ಕೆ ಪರಿಗಣಿಸುವುದು, ಅದಕ್ಕಾಗಿ ಅವರು ಆರು ತಿಂಗಳ ಪ್ರತ್ಯೇಕ ಕೋರ್ಸ್‌ ಪಡೆಯುವುದು, ಅಂಥವರಿಗೆ ಕುಟುಂಬ ವೈದ್ಯರಾಗಲು ಅವಕಾಶ ನೀಡುವ ಬಗ್ಗೆ ಕೇಂದ್ರದ ಆರೋಗ್ಯ ಸಚಿವಾಲಯ ಸಲಹೆ ಪಡೆದುಕೊಂಡಿದೆ. ಇದು ಶೀಘ್ರ ಜಾರಿಯಾಗುವ ನಿರೀಕ್ಷೆ ಇದೆ ಎಂದರು.

ಎಂಬಿಬಿಎಸ್, ಬಿಡಿಎಸ್ ಕೋರ್ಸ್ ಪೂರೈಸಿದ ವಿದ್ಯಾರ್ಥಿಗಳು ಇನ್ನು ಮುಂದೆ ನೀಟ್ ಬದಲಾಗಿ, ಅಂತಿಮ ಎಕ್ಸಿಟ್ ಪರೀಕ್ಷೆಯನ್ನು ಬರೆಯುವುದು, ಅದರಲ್ಲಿ ಪಡೆದ ಅಂಕಗಳು ಹಾಗೂ ಇಂಟರ್ನ್‌ಷಿಪ್ ನಂತರದ ಪರೀಕ್ಷೆಯ ಅಂಕಗಳನ್ನು ಫಲಿತಾಂಶದಲ್ಲಿ ಪರಿಗಣಿಸುವ ಹೊಸ ವ್ಯವಸ್ಥೆ ಕೂಡ ಸದ್ಯ ಜಾರಿಗೆ ಬರಲಿದೆ ಎಂದು ತಿಳಿಸಿದರು.

ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ಕುಲಪತಿ ಎನ್. ವಿನಯ್ ಹೆಗ್ಡೆ ಅವರು ಸಮಾವೇಶ ಉದ್ಘಾಟಿಸಿದರು. ದಂತ ವೈದ್ಯ ವಿದ್ಯಾರ್ಥಿಗಳಿಗೆ ಹೈಬ್ರಿಡ್ ಎಂಬಿಬಿಎಸ್ ಕೋರ್ಸ್ ಮಾಡಲು ಅವಕಾಶ ನೀಡುವ ಮೂಲಕ ಅವರು ಗ್ರಾಮೀಣ ಭಾಗದಲ್ಲಿ ಕುಟುಂಬ ವೈದ್ಯರಾಗಿ ಕೆಲಸ ಮಾಡಲು ಅವಕಾಶ ದೊರೆಯುವಂತಾಗಬೇಕು. ಸೌಂದರ್ಯ ದಂತ ವೈದ್ಯಕೀಯ ಹೆಚ್ಚು ಬೇಡಿಕೆಯ ಕ್ಷೇತ್ರವಾಗಿದ್ದು, ಭವಿಷ್ಯದಲ್ಲಿ ಸಾಕಷ್ಟು ಬದಲಾವಣೆ ಈ ಕ್ಷೇತ್ರದಲ್ಲಿ ಬರಲಿದೆ ಎಂದರು.

ಅಡಾಯ್ ಅಧ್ಯಕ್ಷೆ ಡಾ. ಮಿತ್ರಾ ಎನ್. ಹೆಗ್ಡೆ ಸ್ವಾಗತಿಸಿದರು. ಉಪಾಧ್ಯಕ್ಷ ಡಾ.ಪಿ. ಕರುಣಾಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘಟನಾ ಕಾರ್ಯದರ್ಶಿ ಡಾ. ಶಶಿರಶ್ಮಿ ಆಚಾರ್ಯ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT