ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಸ್ಥ, ಸುಂದರ ಗ್ರಾಮ; ಸ್ಥಳೀಯ ಸರ್ಕಾರದ ಹೊಣೆ

ಪಂಚಾಯಿತಿ ಸದಸ್ಯರ ಮೇಲಿದೆ ಬೆಟ್ಟದಷ್ಟು ನಿರೀಕ್ಷೆ: ಯೋಜನೆಗಳ ತಿಳಿವಳಿಕೆಯೂ ಅಗತ್ಯ
Last Updated 3 ಜನವರಿ 2021, 4:18 IST
ಅಕ್ಷರ ಗಾತ್ರ

ಮಂಗಳೂರು: ಗ್ರಾಮ ಪಂಚಾಯಿತಿ ಚುನಾವಣೆಗಳು ಮುಗಿದಿವೆ, ಫಲಿತಾಂಶವೂ ಬಂದಾಗಿದೆ. ನೂರಾರು ನಿರೀಕ್ಷೆಗಳನ್ನು ಇಟ್ಟು ಮತ ನೀಡಿದ ಮತದಾರರ ಭರವಸೆಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ಹೊಸ ಜನಪ್ರತಿನಿಧಿಗಳ ಹೆಗಲೇರಿದೆ. ಸ್ವಸ್ಥ, ಸುಂದರ ಗ್ರಾಮವನ್ನು ರೂಪಿಸುವ ಹೊಣೆಗಾರಿಕೆಯೂ ಹೆಚ್ಚಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ, ಚರಂಡಿಯ ತೊಂದರೆ, ಉದ್ಯೋಗ ಖಾತರಿಯಡಿ ಕೆಲಸ ಕೊಡುವುದು ಸೇರಿದಂತೆ ಅನೇಕ ಸಮಸ್ಯೆಗಳು ಎದುರಾಗಿವೆ. ಇದೀಗ ಬೇಸಿಗೆಯು ಎದುರಾಗಲಿದ್ದು, ಈ ಸಂದರ್ಭದಲ್ಲಿ ಗ್ರಾಮಗಳ ಜನರಿಗೆ ಶುದ್ಧವಾದ ಕುಡಿಯುವ ನೀರು ಸಮರ್ಪಕವಾಗಿ ದೊರೆಯುವಂತೆ ಮಾಡಬೇಕಿರುವುದು ತುರ್ತಿನ ಕೆಲಸ.

ಇನ್ನು ಕೋವಿಡ್–19 ನಿಂದಾಗಿ ಅನೇಕ ಜನರು ತಮ್ಮ ಉದ್ಯೋಗ ಕಳೆದುಕೊಂಡು, ಊರಿನ ಹಾದಿ ಹಿಡಿದಿದ್ದಾರೆ. ಅದರಲ್ಲೂ ಯುವಕ, ಯುವತಿಯರ ಸಂಖ್ಯೆ ಹೆಚ್ಚಾಗಿದೆ. ಇವರಿಗೆ ಕೌಶಲ ಅಭಿವೃದ್ಧಿ, ಕೆಲಸ ಕೊಡುವ ಅಗತ್ಯವೂ ಹೆಚ್ಚಾಗಿದೆ. ಬಹುದಿನಗಳ ನಂತರ ಇದೀಗ ಶಾಲೆಗಳು ಆರಂಭವಾಗಿದ್ದು, ಮಕ್ಕಳಿಗೆ ಅಗತ್ಯವಾದ ಮೂಲಸೌಕರ್ಯವನ್ನು ಕಲ್ಪಿಸುವುದೂ ಅಗತ್ಯವಾಗಿದೆ.

ಮಹಿಳೆಯರೇ ಅಧಿಕ:ಪಂಚಾಯಿತಿ ಚುನಾವಣೆಯಲ್ಲಿ ಈ ಬಾರಿ ಶೇ 50ಕ್ಕಿಂತ ಅಧಿಕ ಮಹಿಳೆಯರು ಆಯ್ಕೆಯಾಗಿದ್ದಾರೆ. ಮನೆಯನ್ನು ನೋಡಿಕೊಳ್ಳುತ್ತಿದ್ದ ಮಹಿಳೆಯರು ಗ್ರಾಮದ ಆಡಳಿತವನ್ನು ವಹಿಸಿಕೊಳ್ಳಬೇಕಾಗಿದೆ.

‘ಮನೆಗಳಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅರಿವು ಇರುವುದರಿಂದ, ಗ್ರಾಮೀಣ ಭಾಗದಲ್ಲಿ ಮಹಿಳೆಯರಿಗೆ ಅಗತ್ಯವಾಗಿರುವ ಸೌಲಭ್ಯಗಳನ್ನು ಕಲ್ಪಿಸುವುದಕ್ಕೆ ಅನುಕೂಲ ಆಗಲಿದೆ. ಮಹಿಳೆಯರ ಹಾಗೂ ಮಕ್ಕಳ ಅಭಿವೃದ್ಧಿಯ ಜೊತೆಗೆ ನಮ್ಮ ಸುತ್ತಲಿನ ಜನರ ಶ್ರೇಯೋಭಿವೃದ್ಧಿಗೆ ಕೆಲಸ ಮಾಡುವ ಜವಾಬ್ದಾರಿ ಸಿಕ್ಕಿದೆ’ ಎನ್ನುತ್ತಾರೆ ಕರಿಯಂಗಳ ಪಂಚಾಯಿತಿಗೆ ಆಯ್ಕೆಯಾಗಿರುವ ಸದಸ್ಯೆಚಂದ್ರಾವತಿ.

ಪಂಚಾಯಿತಿಗಳ ಪಾತ್ರ:ಗ್ರಾಮಗಳ ಸರ್ಕಾರ ಎಂದೇ ಖ್ಯಾತವಾಗಿರುವ ಗ್ರಾಮ ಪಂಚಾಯಿತಿಗಳಿಗೆ ಅನೇಕ ಜವಾಬ್ದಾರಿಗಳೂ ಇವೆ. ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಹುಡುಕುವುದು ಮಾತ್ರವಲ್ಲದೇ, ಮೂಲಸೌಕರ್ಯ ಅಭಿವೃದ್ಧಿಗೂ ಒತ್ತು ನೀಡಬೇಕಾಗುತ್ತದೆ.

ಶೌಚಾಲಯ ಒದಗಿಸುವುದು, ಪುರುಷರು ಮತ್ತು ಮಹಿಳೆಯರಿಗಾಗಿ ಸಮುದಾಯ ಶೌಚಾಲಯ ನಿರ್ಮಿಸುವುದು, ನೀರು ಪೂರೈಕೆ ಕಾಮಗಾರಿಗಳನ್ನು ನಿರ್ವಹಿಸುವುದು, ವಿಧಿಸಬಹುದಾದ ತೆರಿಗೆಗಳು, ದರಗಳು ಮತ್ತು ಶುಲ್ಕಗಳನ್ನು ನಿಯಮಿತವಾಗಿ ಪರಿಶೀಲಿಸುವುದು ಮತ್ತು ವಸೂಲು ಮಾಡುವುದು, ಪ್ರಾಥಮಿಕ ಶಾಲೆಗೆ ಮಕ್ಕಳ ದಾಖಲಾತಿ ಖಚಿತಪಡಿಸಿಕೊಳ್ಳುವುದು, ಮಕ್ಕಳಿಗೆ ಸಾರ್ವತ್ರಿಕವಾಗಿ ರೋಗನಿರೋಧಕ ಚುಚ್ಚುಮದ್ದು ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು.

ಜನನ ಮತ್ತು ಮರಣಗಳ ತ್ವರಿತ ನೋಂದಣಿ, ನೈರ್ಮಲ್ಯ ವ್ಯವಸ್ಥೆ, ರಸ್ತೆ ದೀಪಗಳನ್ನು ಒದಗಿಸುವುದು, ಜನಗಣತಿ, ಬೆಳೆ-ಗಣತಿ, ಜಾನುವಾರು-ಗಣತಿ, ನಿರುದ್ಯೋಗಿಗಳ ಮತ್ತು ಬಡತನ ರೇಖೆಗಿಂತ ಕೆಳಗಿರುವ ವ್ಯಕ್ತಿಗಳ ಗಣತಿಗೆ ಸಂಬಂಧಪಟ್ಟ ದಾಖಲೆಗಳನ್ನು ನಿರ್ವಹಿಸುವುದು, ಜೈವಿಕ ವೈವಿಧ್ಯತೆಯನ್ನು ಸಂರಕ್ಷಿಸುವುದು ಪಂಚಾಯಿತಿಗಳ ಪ್ರಮುಖ ಜವಾಬ್ದಾರಿಗಳು.

ಇದರ ಜೊತೆಗೆ ಕೃಷಿ ಉತ್ಪಾದನೆ, ಪಶು ಸಂಗೋಪನೆ ಮತ್ತು ಗ್ರಾಮಾಂತರ ಕೈಗಾರಿಕೆಗಳು ಮತ್ತು ಬಡತನ ನಿವಾರಣಾ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಕಾರ್ಯಗಳನ್ನು ನೆರವೇರಿಸಬೇಕು. ಪರಿಶಿಷ್ಟ ಜಾತಿ ಮತ್ತು ಪಂಗಡಗಳು, ಇತರ ವರ್ಗಗಳ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಇತರ ಹಿತದೃಷ್ಟಿಗಳಿಗೆ ಉತ್ತೇಜನ ನೀಡಬೇಕು. ಮಹಿಳೆ ಮತ್ತು ಮಕ್ಕಳ ಕಲ್ಯಾಣಗಳಿಗೆ ಸಂಬಂಧಿಸಿದ ಕಾರ್ಯಗಳನ್ನು ನೆರವೇರಿಸಬೇಕು.

‘ತ್ಯಾಜ್ಯ ವಿಲೇವಾರಿಗೆ ಗಮನ ನೀಡಲಿ’
ನಗರದಲ್ಲಿ ಕಸದ ಸಮಸ್ಯೆ ಅಷ್ಟಾಗಿಲ್ಲ. ಆದರೆ, ಗ್ರಾಮೀಣ ಪ್ರದೇಶದಲ್ಲಿ ಇನ್ನೂ ತ್ಯಾಜ್ಯದ ಸಮರ್ಪಕ ವಿಲೇವಾರಿ ಆಗುತ್ತಿಲ್ಲ. ಈ ಬಗ್ಗೆ ಪಂಚಾಯಿತಿ ಸದಸ್ಯರು ತುರ್ತು ಗಮನ ನೀಡಬೇಕಾಗಿದೆ ಎನ್ನುತ್ತಾರೆ ಎಪಿಡಿ ಪ್ರತಿಷ್ಠಾನದ ಅಬ್ದುಲ್ಲಾ ಎ. ರೆಹಮಾನ್‌.

ಗ್ರಾಮಗಳಲ್ಲಿ ಇನ್ನೂ ಮನೆಯಿಂದ ತ್ಯಾಜ್ಯ ಸಂಗ್ರಹಿಸುವ ವ್ಯವಸ್ಥೆ ಇಲ್ಲ. ಇದರಿಂದ ಕಸ ವಿಂಗಡಣೆಯೂ ಸಾಧ್ಯವಾಗುತ್ತಿಲ್ಲ. ಹಾಗಾಗಿ ಕಸದ ಸಮಸ್ಯೆ ನಿವಾರಣೆ ಆಗುತ್ತಿಲ್ಲ. ಒಣ ಕಸ ಸಂಗ್ರಹ ಕೇಂದ್ರಗಳನ್ನು ಗ್ರಾಮ ಮಟ್ಟದಲ್ಲಿಯೂ ತೆರೆಯುವುದರಿಂದ ಜನರಲ್ಲಿ ಕಸ ವಿಂಗಡನೆಯ ಅರಿವು ಮೂಡಿಸಿದಂತಾಗುತ್ತದೆ. ಜೊತೆಗೆ ಕಸ ಆಯುವವರಿಗೆ ಉದ್ಯೋಗವನ್ನೂ ನೀಡಿದಂತಾಗುತ್ತದೆ ಎನ್ನುವುದು ಅವರ ಮಾತು.

‘ಯೋಜನೆಗಳ ಅನುಷ್ಠಾನಕ್ಕೆ ಮಾರ್ಗದರ್ಶನ’
ಗ್ರಾಮಗಳಲ್ಲಿ ಆಡಳಿತವನ್ನು ನಿರ್ವಹಿಸುವ ಮಹತ್ತರವಾದ ಜವಾಬ್ದಾರಿ ಪಂಚಾಯಿತಿ ಸದಸ್ಯರ ಮೇಲಿದೆ. ಅದಕ್ಕಾಗಿ ಅವರಿಗೆ ಅಗತ್ಯವಿರುವ ತರಬೇತಿಯನ್ನು ಸರ್ಕಾರ ನೀಡಲಿದೆ. ಜವಾಬ್ದಾರಿಗಳು, ಸರ್ಕಾರದ ಯೋಜನೆಗಳ ಬಗ್ಗೆ ಸದಸ್ಯರಿಗೆ ತಿಳಿವಳಿಕೆ ಮೂಡಿದಲ್ಲಿ, ಗ್ರಾಮದಲ್ಲಿ ಅವುಗಳ ಪರಿಣಾಮಕಾರಿ ಅನುಷ್ಠಾನ ಸಾಧ್ಯವಾಗಲಿದೆ ಎನ್ನುತ್ತಾರೆ ಸ್ಥಳೀಯ ಸಂಸ್ಥೆಗಳನ್ನು ಪ್ರತಿನಿಧಿಸುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಪಂಚಾಯಿತಿ ಸದಸ್ಯರ ಕರ್ತವ್ಯ, ಆಡಳಿತ ನಿರ್ವಹಣೆಯ ಕುರಿತು ಸಮಗ್ರ ತಿಳಿವಳಿಕೆ ನೀಡುವ ಮೂಲಕ ಗ್ರಾಮ ಮಟ್ಟದಲ್ಲಿ ಸ್ಥಳೀಯ ಸರ್ಕಾರವಾಗಿ ಗ್ರಾಮ ಪಂಚಾಯಿತಿಯನ್ನು ರೂಪಿಸಬೇಕು. ಇದೀಗ 15 ನೇ ಹಣಕಾಸು ಯೋಜನೆಯ ಅನುದಾನ ಬರಲಿದ್ದು, ಇದರ ಜೊತೆಗೆ ಇತರ ಅನುದಾನಗಳನ್ನು ಪಡೆದು, ಸ್ವತಂತ್ರವಾಗಿ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಲು ಸೂಕ್ತ ಮಾರ್ಗದರ್ಶನ ನೀಡಲಾಗುವುದು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT