ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಗ್ನೆಸ್ ಕಾಲೇಜಿನಲ್ಲಿ ‘ಅಮೃತ’ದ ಅರಿವು

ಪುಸ್ತಕ ಪ್ರದರ್ಶನ ಸಪ್ತಾಹ ಆರಂಭ
Last Updated 13 ಆಗಸ್ಟ್ 2022, 13:43 IST
ಅಕ್ಷರ ಗಾತ್ರ

ಮಂಗಳೂರು: ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರೂ, ರಾಣಿ ಲಕ್ಷ್ಮಿಬಾಯಿ, ಬಿಪಿನ್‌ ಚಂದ್ರಪಾಲ್, ಮಂಗಲ್ ಪಾಂಡೆ ಮತ್ತಿತರ ಸ್ವಾತಂತ್ರ್ಯ ಹೋರಾಟಗಾರರನ್ನು ಪರಿಚಯಿಸುವ ಕೃತಿಗಳು, ಆತ್ಮಚರಿತ್ರೆಗಳು, ಅಪರೂಪದ ‘ಬಾಪು ಚಿತ್ರಾವಳಿ’, ಸಾಹಿತ್ಯ, ಸಂಗೀತ, ಯೋಗ ಕುರಿತ ಪುಸ್ತಕಗಳು, ಅತ್ಯಂತ ಹಳೆಯದಾದ ‘ಇಂಡಿಯಾಸ್ ಸ್ಟ್ರಗಲ್ ಫಾರ್ ಇಂಡಿಪೆಂಡೆನ್ಸ್‌’ ಚಿತ್ರ ವಿವರಣೆಯ ಹೊತ್ತಿಗೆ ಸೇರಿದಂತೆ ವಿದ್ಯಾರ್ಥಿಗಳ ಮೆದುಳಿಗೆ ಜ್ಞಾನ ಒದಗಿಸುವ ಸಾವಿರಾರು ಪುಸ್ತಕಗಳ ಪ್ರದರ್ಶನ ನಗರದ ಸೇಂಟ್ ಆಗ್ನೆಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಾರಂಭವಾಗಿದೆ.

ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮದಲ್ಲಿ ಹಾಗೂ ಗ್ರಂಥಾಲಯ ವಿಜ್ಞಾನದ ಪಿತಾಮಹ ಡಾ.ಎಸ್.ಆರ್. ರಂಗನಾಥನ್ ಸ್ಮರಣೆಯಲ್ಲಿ ಕಾಲೇಜಿನ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರವು ಶನಿವಾರದಿಂದ ಆ.20ರವರೆಗೆ ಹಮ್ಮಿಕೊಂಡಿರುವ ಪುಸ್ತಕ ಪ್ರದರ್ಶನದಲ್ಲಿ 1,500ಕ್ಕೂ ಹೆಚ್ಚು ಪುಸ್ತಕಗಳು ಇವೆ. ಪ್ರತ್ಯೇಕ ವಿಭಾಗಗಳಲ್ಲಿ ಜೋಡಿಸಿರುವ ಪುಸ್ತಕಗಳು ನೋಡುಗರನ್ನು ಸೆಳೆಯುತ್ತವೆ.

ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಪ್ರೊ. ವಿ.ಜಿ. ತಳವಾರ ಪ್ರದರ್ಶನವನ್ನು ಉದ್ಘಾಟಿಸಿದರು. ಗಣಿತ ತಜ್ಞರಾಗಿದ್ದ ಎಸ್‌.ಆರ್.ರಂಗನಾಥನ್ ಅವರ ಪುಸ್ತಕ ಪ್ರೀತಿ, ಆಧುನಿಕ ಗ್ರಂಥಾಲಯದ ಪರಿಕಲ್ಪನೆಯನ್ನು ಅವರು ತಿಳಿಸಿದರು. ಕಾಲೇಜಿನ ಪ್ರಾಂಶುಪಾಲೆ ಸಿಸ್ಟರ್ ವೆನಿಸ್ಸಾ ಎ.ಸಿ ಅಧ್ಯಕ್ಷತೆ ವಹಿಸಿದ್ದರು. ಡಾ. ಖೈಸರ್ ಖಾನ್ ಉಪಸ್ಥಿತರಿದ್ದರು. ಮುಖ್ಯ ಗ್ರಂಥಪಾಲಕಿ ವಿಶಾಲಾ ಬಿ.ಕೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ರಿಸ್ಟಲ್ ನಿಶಾ ವಂದಿಸಿದರು. ರಿಯಾ ಸಿಕ್ವೇರಾ ಕಾರ್ಯಕ್ರಮ ನಿರೂಪಿಸಿದರು.

‘ಪ್ರಾಥಮಿಕ ಶಾಲೆ ಮಕ್ಕಳಿಂದ ಸಂಶೋಧನಾ ವಿದ್ಯಾರ್ಥಿಗಳಿಗೆ ಉಪಯೋಗವಾಗುವ ಪುಸ್ತಕಗಳು ಪ್ರದರ್ಶನದಲ್ಲಿವೆ. ಇಂದಿನ ಡಿಜಿಟಲ್ ಯುಗದಲ್ಲಿ ಮಕ್ಕಳು ಮೊಬೈಲ್‌ನಲ್ಲಿ ಹೆಚ್ಚಿನ ಸಮಯ ಕಳೆಯುತ್ತಾರೆ. ಇಂತಹ ಪ್ರದರ್ಶನಗಳು ಮಕ್ಕಳನ್ನು ಪುಸ್ತಕದೆಡೆಗೆ ಸೆಳೆಯಲು ಸಹಕಾರಿಯಾಗಿವೆ. ಪುಸ್ತಕಗಳ ತಲೆಬರಹ ನೋಡಿದಾಗ ಸಹಜವಾಗಿ ಓದುವ ಕುತೂಹಲ ಹುಟ್ಟುತ್ತದೆ. ಓದು ಮಕ್ಕಳ ಯೋಚನಾ ಶಕ್ತಿ, ಸೂಕ್ಷ್ಮತೆ, ವಿಷಯದ ಆಳ–ಅಗಲವನ್ನು ಗ್ರಹಿಸುವ ಶಕ್ತಿಯನ್ನು ಬೆಳೆಸುತ್ತದೆ. ಪುಸ್ತಕ ಕೈಯಲ್ಲಿ ಹಿಡಿದು ಓದಿದಾಗ ಓದುಗ ಕತೆಯ ಪಾತ್ರಧಾರಿಯಾಗಿ ಸ್ವತಃ ಖುಷಿ ಅನುಭವಿಸಲು ಸಾಧ್ಯ’ ಎಂದು ಪ್ರದರ್ಶನ ವೀಕ್ಷಣೆಗೆ ಬಂದಿದ್ದ ನಿವೃತ್ತ ಸಹಾಯಕ ಗ್ರಂಥಪಾಲಕ ಕೆ.ಕೆ. ಬಾದಾಮಿ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT