ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರ್‌ ಶೋ | ಬಾನಂಗಳದಲ್ಲಿ ಚಿತ್ತಾರದ ಕಲರವ

ಸಹ್ಯಾದ್ರಿಯಲ್ಲಿ ಏರೋಫಿಲಿಯಾ, ಇಸ್ರೋ ಹ್ಯಾಕಥಾನ್‌– ಏರ್‌ ಶೋ
Last Updated 20 ಸೆಪ್ಟೆಂಬರ್ 2019, 13:11 IST
ಅಕ್ಷರ ಗಾತ್ರ

ಮಂಗಳೂರು: ಅಡ್ಯಾರ್‌ ಸಹ್ಯಾದ್ರಿ ಎಂಜಿನಿಯರಿಂಗ್‌ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜಿನ ಆವರಣದಲ್ಲಿ ಎರಡು ದಿನಗಳ ರಾಷ್ಟ್ರ ಮಟ್ಟದ ಏರೋಫಿಲಿಯಾ 2019 ಹಾಗೂ ಇಸ್ರೋ ಹ್ಯಾಕಥಾನ್‌ ಮತ್ತು ಏರ್‌ ಶೋಗೆ ಶುಕ್ರವಾರ ಚಾಲನೆ ನೀಡಲಾಯಿತು. ಸಹ್ಯಾದ್ರಿ ಆವರಣದ ಬಾನಂಗಳದಲ್ಲಿ ಲೋಹದ ಹಕ್ಕಿಗಳ ಕಲರವದ ಚಿತ್ತಾರವು ಪ್ರೇಕ್ಷಕರ ಮನಸೂರೆಗೊಂಡಿತು.

ಇಲ್ಲಿನ ಏರೊ ಮಾದರಿಯೂ ಎಂಜಿನಿಯರ್‌ಗಳಾಗುವ ಕನಸು ಕಟ್ಟಿಕೊಂಡಿರುವ ಯುವ ಎಂಜಿನಿಯರ್‌ ವಿದ್ಯಾರ್ಥಿಗಳಿಗೆ ಸ್ಪರ್ಧೆಯು ಉತ್ತಮ ವೇದಿಕೆ ಕಲ್ಪಿಸಿದೆ. ಸ್ಪರ್ಧಾತ್ಮಕ ಯುಗದಲ್ಲಿ ವಿಮಾನಯಾನ ಕ್ಷೇತ್ರ ರಾಷ್ಟ್ರದ ಅಭಿವೃದ್ಧಿಗೆ ಯಾವ ರೀತಿ ಸಹಕಾರಿಯಾಗಬಲ್ಲದು ಎಂಬುದನ್ನು ಉತ್ಸಾಹಿ ಯುವ ಮನಸ್ಸುಗಳಿಗೆ ತಿಳಿಸುವುದಕ್ಕಾಗಿ ಸಹ್ಯಾದ್ರಿ ಎಂಜಿನಿಯರಿಂಗ್‌ ಕಾಲೇಜು ಈ ಸ್ಪರ್ಧೆಯನ್ನು ಆಯೋಜಿಸಿದೆ.

ಏರೋಫಿಲಿಯಾ ಏರ್‌ ಶೋದಲ್ಲಿ ಈ ಬಾರಿ 20 ವಿಭಿನ್ನ ಸ್ಪರ್ಧೆಗಳನ್ನು ಆಯೋಜನೆ ಮಾಡಲಾಗಿದೆ. ಐಐಟಿ ಮತ್ತು ಎನ್‌ಐಟಿಗಳು ಸೇರಿದಂತೆ ದೇಶದ ವಿವಿಧ ಶಾಲೆ ಮತ್ತು ಕಾಲೇಜುಗಳ 1500 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಬಾರಿ ಇದೇ ಮೊದಲ ಬಾರಿಗೆ ಇಸ್ರೋ ನಡೆಸುತ್ತಿರುವ ಹ್ಯಾಕಥಾನ್‌ನಲ್ಲಿ ಸುಮಾರು 60 ತಂಡಗಳು ಪಾಲ್ಗೊಂಡಿವೆ. ವಿವಿಧ ಶಿಕ್ಷಣ ಸಂಸ್ಥೆಗಳ 500 ಎಂಜಿನಿಯರಿಂಗ್‌ ಸ್ಪರ್ಧಿಗಳ ತಂಡಗಳು ಪಾಲುದಾರಿಕೆ ಪಡೆದುಕೊಂಡಿವೆ.

ಭಾರತೀಯ ನೌಕಾಪಡೆಯ ನಿವೃತ್ತ ಕಮಾಂಡರ್‌ ಟಿ.ಆರ್‌.ಎ ನಾರಾಯಣನ್‌ ಏರೋಫಿಲಿಯಾ 2019 ಕ್ಕೆ ಚಾಲನೆ ನೀಡಿ ಮಾತನಾಡಿ, ‘ಈ ಕ್ಷೇತ್ರದಲ್ಲಿ ಇನ್ನಷ್ಟು ತಂತ್ರಜ್ಞಾನ ಅಭಿವೃದ್ಧಿಯಾಗಬೇಕು. ಈ ನಿಟ್ಟಿನಲ್ಲಿ ಯುವ ಸಮುದಾಯದಿಂದ ಭಾರೀ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಆಕಾಶದಲ್ಲಿ ಹಾರುವುದು ಫ್ಯಾಷನ್‌ ಆಗಿದೆ. ಮಕ್ಕಳು ಕಾಗದದಿಂದ ತಯಾರಿಸುವ ವಿಮಾನಗಳಿಗೆ ಹೆಚ್ಚು ಆಕರ್ಷಣೆಗೆ ಒಳಗಾಗುತ್ತಾರೆ. ಈ ಸ್ಪರ್ಧೆಯಲ್ಲಿ ಕೂಡಾ ಸಾಕಷ್ಟು ಪ್ರಭಾವಕ್ಕೆ ಒಳಗಾಗುವುದರಲ್ಲಿ ಯಾವುದೇ ಅನುಮಾನವೇ ಇಲ್ಲ. ಕಾಗದದ ವಿಮಾನಗಳು ಕೇವಲ ಮಕ್ಕಳಿಗಾಗಿ ಅಲ್ಲ. ಸರಳ ವಿಮಾನಗಳಿಗೆ ಹೋಲುವ ವಿಜ್ಞಾನವು ಉನ್ನತ ಮಟ್ಟದ ವೈಜ್ಞಾನಿಕತೆ ಆಗಿದೆ’ ಎಂದು ಹೇಳಿದರು.

ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನ ಸ್ಥಾಪಕ ಅಧ್ಯಕ್ಷ ಮಂಜುನಾಥ ಭಂಡಾರಿ ಮಾತನಾಡಿ, ಏರೋಫಿಲಿಯಾದ ಆಯೋಜನೆಯ ಮುಖ್ಯ ಉದ್ದೇಶವು ಯುವ ಎಂಜಿನಿಯರ್‌ಗಳ ಮನಸ್ಸನ್ನು ಪ್ರೋತ್ಸಾಹಿಸವುದು ಮತ್ತು ಏರೋ ಸ್ಪೇಸ್ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದುತ್ತಿರುವ ತಂತ್ರಜ್ಞಾನಗಳ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ. ಕಾರ್ಯಕ್ರಮವನ್ನು ಟೀಮ್ ಚಾಲೆಂಜರ್ಸ್ ಆಯೋಜಿಸಿದೆ ಎಂದು ಹೇಳಿದರು.

‘ಏರೊಫಿಲಿಯಾ 2019 ’ರ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಒಟ್ಟು 1.75 ಲಕ್ಷದಷ್ಟು ನಗದು ಬಹುಮಾನ ನೀಡಲಾಗುತ್ತಿದೆ. ಟ್ರೋಫಿ ಮತ್ತು ಪ್ರಮಾಣ ಪತ್ರಗಳನ್ನು ನೀಡಲಾಗುತ್ತದೆ ಎಂದು ಮಂಜುನಾಥ ಭಂಡಾರಿ ಹೇಳಿದರು.

ಇಸ್ರೋದ ಸತ್ನವ್ ಕಾರ್ಯಕ್ರಮ ಅಧಿಕಾರಿ ಹಾಗೂ ಕೈಗಾರಿಕಾ ಇಂಟರ್‌ಫೇಸ್‌ನ ಉಪ ನಿರ್ದೇಶಕರಾದ ಮನೀಶ್ ಸಕ್ಸೇನಾ ಹಾಗೂ ಅಖಿಲೇಶ್ವರ ರೆಡ್ಡಿ, ಕೆಎಂಸಿಯ ಡಾ. ಆನಂದ ವೇಣುಗೋಪಾಲ್‌, ಸಹ್ಯಾದ್ರಿ ಸಮೂಹ ಸಂಸ್ಥೆಯ ಅಧ್ಯಕ್ಷ ಮಂಜುನಾಥ ಭಂಡಾರಿ, ಚೀನಾದ ಏರ್ಬಸ್ ಏರೋ ಸ್ಪೇಸ್ ಹೆಲಿಕಾಪ್ಟರ್‌ಗಳಲ್ಲಿ ಕಾಂಪೋಸಿಟ್ ಮ್ಯಾನೇಜರ್ ಅಶ್ವಿನ್ ಎಲ್ ಶೆಟ್ಟಿ, ಪ್ರಾಚಾರ್ಯ ಡಾ. ಆರ್. ಶ್ರೀನಿವಾಸ್‌ ರಾವ್ ಕುಂಟೆ, ಉಪ ಪ್ರಾಂಶುಪಾಲ ಪ್ರೊ.ಎಸ್. ಬಾಲಕೃಷ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT