ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀರೇಂದ್ರ ಹೆಗ್ಗಡೆ ವಿರುದ್ಧ ಸುಳ್ಳು ಆರೋಪ ಪ್ರಕರಣ: ಸೋಮನಾಥ ಮೇಲ್ಮನವಿ ವಜಾ

Last Updated 25 ಅಕ್ಟೋಬರ್ 2022, 21:15 IST
ಅಕ್ಷರ ಗಾತ್ರ

ಉಜಿರೆ (ದಕ್ಷಿಣ ಕನ್ನಡ): ಗುರುವಾಯನಕೆರೆಯ ನಾಗರಿಕ ಸೇವಾ ಟ್ರಸ್ಟ್‌ ಅಧ್ಯಕ್ಷ ಕೆ. ಸೋಮನಾಥ್ ನಾಯಕ್‌ ಅವರ ವಿಶೇಷ ಮೇಲ್ಮನವಿಯನ್ನು ತಿರಸ್ಕರಿಸಿರುವ ಸುಪ್ರೀಂ ಕೋರ್ಟ್‌, ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಮೂರು ತಿಂಗಳ ಸಜೆಯನ್ನು ಎತ್ತಿ ಹಿಡಿದಿದೆ.

ಏನಿದು ಪ್ರಕರಣ: ಧರ್ಮಸ್ಥಳ ಕ್ಷೇತ್ರ, ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಹಾಗೂ ಕ್ಷೇತ್ರದ ಸಂಸ್ಥೆಗಳ ಗೌರವಕ್ಕೆ ಚ್ಯುತಿ ಬರುವಂತಹ ಹೇಳಿಕೆ ನೀಡಬಾರದು ಎಂದು ಬೆಳ್ತಂಗಡಿ ಜೆಎಂಎಫ್‌ ನ್ಯಾಯಾಲಯವು 2013ರ ನ.5ರಂದು ಸೋಮನಾಥ ನಾಯಕ್ ಮತ್ತು ಇತರ ಐವರ ವಿರುದ್ಧ ನಿರ್ಬಂಧ ಹೇರಿತ್ತು.

ಆ ಬಳಿಕವೂ ನಾಯಕ್ ಸಾಮಾಜಿಕ ಜಾಲತಾಣಗಳಲ್ಲಿ ಹೆಗ್ಗಡೆ ವಿರುದ್ಧ ಆರೋಪಗಳನ್ನು ಮಾಡಿದ್ದರು. ಈ ಬಗ್ಗೆ ಹೆಗ್ಗಡೆ ಅವರು ನೀಡಿದ್ದ ದೂರಿನ ವಿಚಾರಣೆ ನಡೆಸಿದ್ದ ನ್ಯಾಯಾಲಯವು ಸೋಮನಾಥ ನಾಯಕ್ ದೋಷಿ ಎಂದು ಪರಿಗಣಿಸಿ, ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ದೂರುದಾರರಿಗೆ ₹ 4.5 ಲಕ್ಷ ಪರಿಹಾರ ನೀಡಬೇಕು. ಇದಕ್ಕಾಗಿ ಆಸ್ತಿಯನ್ನೂ ಮುಟ್ಟುಗೋಲು ಹಾಕಬಹುದು ಎಂದು ಆದೇಶಿಸಿತ್ತು.

ಈ ತೀರ್ಪಿನ ವಿರುದ್ಧ ನಾಯಕ್ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ್ದ ಬೆಳ್ತಂಗಡಿಯ ಜೆಎಂಎಫ್‌ಸಿಯ ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶರು 2021 ಜೂನ್‌ 8ರಂದು ಕೆಳ ನ್ಯಾಯಾಲಯದ ತೀರ್ಪನ್ನು ಕಾಯಂಗೊಳಿಸಿ ತೀರ್ಪು ನೀಡಿದ್ದರು. ಅದರ ವಿರುದ್ಧವೂ ನಾಯಕ್‌ ಮೇಲ್ಮನವಿ ಸಲ್ಲಿಸಿದ್ದರು.

‘ನಾಯಕ್ ಅವರ ಮೇಲ್ಮನವಿಯಲ್ಲಿ ನಿಜಾಂಶ ಇಲ್ಲ’ ಎಂದು 2022 ಮಾರ್ಚ್‌ 22ರಂದು ಬೆಳ್ತಂಗಡಿಯ ಜೆಎಂಎಫ್‌ಸಿಯ ಪ್ರಧಾನ ಸಿವಿಲ್‌ ನ್ಯಾಯಾಧೀಶರು ತೀರ್ಪು ನೀಡಿದ್ದರು. ನಾಯಕ್ ದಸ್ತಗಿರಿಗೆ 2022ರ ಮಾರ್ಚ್ 31ರಂದು ಆದೇಶವಾಗಿತ್ತು.

ತೀರ್ಪನ್ನು ಪ್ರಶ್ನಿಸಿ ಕರ್ನಾಟಕದ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದ ನಾಯಕ್‌, ‘ತನ್ನನ್ನು ಬಂಧಿಸದಂತೆ ತಡೆಯಾಜ್ಞೆ ನೀಡಬೇಕು ಹಾಗೂ ವಿಚಾರಣಾ ನ್ಯಾಯಾಲಯದ ಆದೇಶ ವಜಾ ಮಾಡಬೇಕು‘ ಎಂದು ಕೋರಿದ್ದರು. ‘ವಿಚಾರಣಾ ನ್ಯಾಯಾಲಯಗಳ ಆದೇಶ ಸಮಂಜಸವಾಗಿದೆ. ಈ ಪ್ರಕರಣದ ಹೈಕೋರ್ಟ್ ಮಧ್ಯಪ್ರವೇಶಿಸುವ ಅಗತ್ಯವಿಲ್ಲ’ ಎಂದು ಹೈಕೋರ್ಟ್‌ 2022ರ ಮೇ 5ರಂದು ತೀರ್ಪು ನೀಡಿತ್ತು. ಇದನ್ನು ನಾಯಕ್‌ ಅವರು ಸುಪ್ರೀಂ ಕೋರ್ಟ್‌ನಲ್ಲಿಪ್ರಶ್ನಿಸಿದ್ದರು. ಅವರ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್‌ ಅ.19ರಂದು ತಿರಸ್ಕರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT