ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಾಂತರಕ್ಕೆ ಯತ್ನ: ಮಹಿಳೆ ಬಂಧನ

ಮೋರ್ಗನ್ಸ್‌ಗೇಟ್‌ನಲ್ಲಿ ಕುಟುಂಬದ ಆತ್ಮಹತ್ಯೆ ಪ್ರಕರಣ: ಕಮಿಷನರ್‌ ಶಶಿಕುಮಾರ್‌
Last Updated 12 ಡಿಸೆಂಬರ್ 2021, 6:43 IST
ಅಕ್ಷರ ಗಾತ್ರ

ಮಂಗಳೂರು: ನಗರದ ಮೋರ್ಗನ್ಸ್‌ ಗೇಟ್‌ ಬಳಿ ಇತ್ತೀಚೆಗೆ ನಡೆದ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಪ್ರಕರಣದಲ್ಲಿ ಮೃತ ವಿಜಯಲಕ್ಷ್ಮಿಯನ್ನು ಮತಾಂತರ ಮಾಡಲು ಮಹಿಳೆಯೊಬ್ಬಳು ಯತ್ನಿಸಿರುವ ಅಂಶ ಬೆಳಕಿಗೆ ಬಂದಿದೆ ಎಂದು ನಗರ ಪೊಲೀಸ್ ಕಮಿಷನರ್‌ ಎನ್. ಶಶಿಕುಮಾರ್ ತಿಳಿಸಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರ ಣಕ್ಕೆ ಸಂಬಂಧಿಸಿದಂತೆ ವಶಕ್ಕೆ ಪಡೆದಿದ್ದ ನೂರ್‌ಜಹಾನ್ ಎಂಬಾಕೆಯನ್ನು ಬಂಧಿಸಲಾಗಿದೆ. ಈಕೆ ವಿಜಯಲಕ್ಷ್ಮಿ ಯನ್ನು ಮುಸ್ಲಿಂ ಸಮುದಾಯದವರ ಜೊತೆಗೆ ಮದುವೆ ಮಾಡಿಸಲು ಯತ್ನಿಸಿರುವುದು ಸಾಂದರ್ಭಿಕ ದಾಖಲೆಗಳಿಂದ ಸ್ಪಷ್ಟವಾಗಿದೆ ಎಂದು ಹೇಳಿದರು.

ನೂರ್‌ಜಹಾನ್ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮೃತ ಮಹಿಳೆ ವಿಜಯಲಕ್ಷ್ಮಿ, ಕುಟುಂಬದ ಜತೆ ನಾಲ್ಕು ವರ್ಷ ಅದೇ ಫ್ಲ್ಯಾಟ್‌ನಲ್ಲಿ ವಾಸವಾಗಿದ್ದರು. ಆತ್ಮಹತ್ಯೆ ಮಾಡಿಕೊಂಡ ನಾಗೇಶ್ ಮತ್ತು ಪತ್ನಿ ವಿಜಯಲಕ್ಷ್ಮಿ ಮಧ್ಯೆ ಜಗಳ ನಡೆಯುತ್ತಿತ್ತು, ಮನೆಯಲ್ಲಿ ನಿತ್ಯ ಕುಡಿದು ಬಂದು ಪತಿ ನಾಗೇಶ್ ಜಗಳ ಮಾಡುತ್ತಿದ್ದು, ವಿಜಯಲಕ್ಷ್ಮಿ ಕುಟುಂಬದ ಸಮಸ್ಯೆ ಹೇಳಿಕೊಂಡಾಗ, ಮುಸ್ಲಿಂ ಸಮುದಾಯದವರ ಜತೆ ಮದುವೆ ಮಾಡಿಸುವ ಭರವಸೆಯನ್ನು ನೂರ್‌ಜಹಾನ್‌ ನೀಡಿರುವುದು ತಿಳಿದು ಬಂದಿದೆ ಎಂದು ಹೇಳಿದರು.

ಮಂಗಳೂರಿನಲ್ಲಿ ಮದುವೆ ಬ್ರೋಕರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಆರೋಪಿ ನೂರ್‌ಜಹಾನ್, ಮದುವೆಗೂ ಮುನ್ನ ಇಸ್ಲಾಂಗೆ ಮತಾಂತರ ಆಗಲು ಹೇಳಿ, ವಿಜಯಲಕ್ಷ್ಮಿ ಫೋಟೊವನ್ನು ತನ್ನಲ್ಲಿ ಇರಿಸಿಕೊಂಡಿದ್ದಳು. ಮುಸ್ಲಿಂ ಹುಡುಗನ ಹುಡುಕಾಟವನ್ನೂ ನಡೆಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ತಿಳಿಸಿದರು.

ಇದೇ ವಿಚಾರದಲ್ಲಿ ನಾಗೇಶ್ ಮತ್ತು ವಿಜಯಲಕ್ಷ್ಮಿ ಮಧ್ಯೆ ಗಲಾಟೆ ನಡೆದಿತ್ತು. ಮೃತ ನಾಗೇಶ್, ನೂರ್‌ಜಹಾನ್ ಮನೆ ಬಳಿ ಬಂದು ಇದೇ ವಿಚಾರದಲ್ಲಿ ಗಲಾಟೆ ಮಾಡಿದ್ದ. ಘಟನೆ ನಡೆದ ಹಿಂದಿನ ರಾತ್ರಿಯೂ ಗಲಾಟೆ ನಡೆದಿತ್ತು. ಮಕ್ಕಳು ಮತ್ತು ಪತ್ನಿ ವಿಜಯಲಕ್ಷ್ಮಿಯನ್ನು ಕೊಂದು ನಾಗೇಶ್ ನೇಣು ಹಾಕಿಕೊಂಡಿದ್ದ ಎಂದು ತಿಳಿಸಿದರು.

ಸದ್ಯ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಮಹಿಳೆ ನೂರ್‌ಜಹಾನ್ ಬಂಧಿಸಲಾಗಿದೆ. ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ ಎಂದು ತಿಳಿಸಿದರು.

ಕೊಲೆ ಮಾಡಿ, ಆತ್ಮಹತ್ಯೆ: ನಾಗೇಶ್ ತನ್ನ ಹೆಂಡತಿಯನ್ನು ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದು, ಮಗನನ್ನು ಮೂಗು ಹಾಗೂ ಬಾಯಿ ಬಂದ್ ಮಾಡಿ ಸಾಯಿಸಿದ್ದಾನೆ. ಮಗಳನ್ನು ಕತ್ತು ಹಿಸುಕಿ ಕೊಲೆ ಮಾಡಿ, ರಾತ್ರಿ ಪೂರ್ತಿ ಮೂರು ಹೆಣದೊಂದಿಗೆ ಇದ್ದ. ಬಳಿಕ ಆತನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದು ಮರಣೋತ್ತರ ಪರೀಕ್ಷೆಯಲ್ಲಿ ಬೆಳಕಿಗೆ ಬಂದಿದೆ.

ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಪತ್ತೆ
ಗುರುಪುರ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ವಾಮಂಜೂರಿನ ಯೋಗೀಶ್ ಯಾನೆ ಮುನ್ನ (31) ಮೃತದೇಹ ಶುಕ್ರವಾರ ಗುರುಪುರ ಸಮೀಪದ ಬೈಲುಪೇಟೆಯಲ್ಲಿ ಪತ್ತೆಯಾಗಿದೆ.

ಯೋಗೀಶ್ ಬುಧವಾರ ಸಂಜೆಯಿಂದ ನಾಪತ್ತೆಯಾಗಿದ್ದರು. ಗುರುವಾರ ಬೆಳಿಗ್ಗೆ ಗುರುಪುರ ನದಿ ಸೇತುವೆ ಪಕ್ಕದಲ್ಲಿ ಅವರ ಬೈಕ್‌‌ ಹಾಗೂ ಚಪ್ಪಲಿ ಪತ್ತೆಯಾಗಿದ್ದವು. ಅಗ್ನಿಶಾಮಕ ದಳ ಮತ್ತು ಬಜ್ಪೆ ಪೊಲೀಸರು, ಸ್ಥಳೀಯರ ಸಹಕಾರದೊಂದಿಗೆ ಗುರುಪುರ ನದಿಯಲ್ಲಿ ಯೋಗೀಶ್‌ಗಾಗಿ ಹುಡುಕಾಟ ನಡೆಸಿದ್ದರು. ಆದರೆ ಶುಕ್ರವಾರ ಬೆಳಿಗ್ಗೆ ಯೋಗೀಶ್‌ ಅವರ ಮೃತದೇಹವು ಬೈಲುಪೇಟೆ ಮಸೀದಿಯ ಬಳಿ ಪತ್ತೆಯಾಗಿದೆ.

ಅವಿವಾಹಿತರಾಗಿದ್ದ ಯೋಗೀಶ್ ವೃತ್ತಿಯಲ್ಲಿ ಚಾಲಕರಾಗಿದ್ದರು. ಮಂಗಳೂರು ಗ್ರಾಮಾಂತರ ಠಾಣೆಗೆ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ: ನಾಲ್ವರು ವಶಕ್ಕೆ
ನೀರುಮಾರ್ಗ ಸಮೀಪದಲ್ಲಿ ಶುಕ್ರವಾರ ಸಂಜೆ ಅಡ್ಯಾರ್ ಪದವು ನಿವಾಸಿ ಅಬ್ದುಲ್ ರಿಯಾಝ್ ಅಹ್ಮದ್ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಕಮಿಷನರ್‌ ಎನ್.ಶಶಿಕುಮಾರ್ ತಿಳಿಸಿದ್ದಾರೆ.

ಶುಕ್ರವಾರ ಸಂಜೆ 7.15ರ ಸುಮಾರಿಗೆ ಅಬ್ದುಲ್ ರಿಯಾಝ್ ಅಹ್ಮದ್, ಕಾರಿನಲ್ಲಿ ತೆರಳುತ್ತಿದ್ದ ವೇಳೆ ನೀರುಮಾರ್ಗ ಸಮೀಪ ಅವರನ್ನು ತಡೆದ ಐದಾರು ಮಂದಿಯ ತಂಡ, ರಾಡ್ ಹಾಗೂ ಬಿಯರ್ ಬಾಟಲಿಗಳಿಂದ ಹಲ್ಲೆ ನಡೆಸಿದೆ. ಇದರಿಂದ ಗಂಭೀರ ಗಾಯಗೊಂಡಿರುವ ರಿಯಾಝ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದರು.

ಹಲ್ಲೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಸದ್ಯ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT