ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಳವಿದ್ದ ಚಿಕನ್ ಖಾದ್ಯ ನೀಡಿದ ಆರೋಪ: ತಹಶೀಲ್ದಾರ್ ದಾಳಿ, ಹೋಟೆಲ್‌ಗೆ ಬೀಗ

ಉಪ್ಪಿನಂಗಡಿ: ಹುಳವಿದ್ದ ಖಾದ್ಯ ನೀಡಿದ ಆರೋಪ, ಪರೀಕ್ಷೆಗೆ ಮಾದರಿ ಸಂಗ್ರಹ
Last Updated 14 ಜನವರಿ 2023, 5:58 IST
ಅಕ್ಷರ ಗಾತ್ರ

ಉಪ್ಪಿನಂಗಡಿ: ಇಲ್ಲಿನ ಹೋಟೆಲ್ ಒಂದರಲ್ಲಿ ಹುಳವಿದ್ದ ಚಿಕನ್ ಖಾದ್ಯವನ್ನು ಗ್ರಾಹಕರಿಗೆ ನೀಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ನಿರ್ದೇಶನದಂತೆ ಪುತ್ತೂರು ತಹಶೀಲ್ದಾರ್‌ ನೇತೃತ್ವದ ತಂಡ ಗುರುವಾರ ರಾತ್ರಿ ಹೋಟೆಲ್‌ಗೆ ದಾಳಿ ನಡೆಸಿದರು. ಪರವಾನಗಿ ನವೀಕರಿಸದ ಕಾರಣಕ್ಕಾಗಿ ಹೋಟೆಲ್‌ಗೆ ಬೀಗ ಹಾಕಿದ ಘಟನೆ ನಡೆದಿದೆ.

ಉಪ್ಪಿನಂಗಡಿ ಹಳೆ ಬಸ್ ನಿಲ್ದಾಣದ ಪರಿಸರದಲ್ಲಿನ ಮಾಂಸಾಹಾರಿ ಹೋಟೆಲೊಂದರಲ್ಲಿ ಗ್ರಾಹಕರೊಬ್ಬರಿಗೆ ನೀಡಿದ ಕಬಾಬ್‌ನಲ್ಲಿ ಹುಳವೊಂದು ಪತ್ತೆಯಾಗಿತ್ತು. ಈ ಬಗ್ಗೆ ಅವರು ಹೋಟೆಲ್‌ನವರಲ್ಲಿ ವಿಚಾರಿಸಿದಾಗ ‘ನಾವು ಪ್ರೆಶ್ ಚಿಕನ್ ತರಿಸುವುದು’ ಎಂದು ಸಮಜಾಯಿಷಿ ನೀಡಿದ್ದರು. ಬಳಿಕ ಗ್ರಾಹಕರು ಹುಳದ ಚಿತ್ರ, ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದರಿಂದ ಎಚ್ಚೆತ್ತ ಜಿಲ್ಲಾಡಳಿತವು ಈ ಬಗ್ಗೆ ಅಧಿಕಾರಿಗಳ ತಂಡ ಭೇಟಿ ನೀಡಿ ಸತ್ಯಶೋಧನೆ ನಡೆಸಲು ನಿರ್ದೇಶನ ನೀಡಿತು.

ಅದರಂತೆ ಪುತ್ತೂರು ತಹಶೀಲ್ದಾರ್ ನಿಸರ್ಗ ಪ್ರಿಯ, ಉಪ್ಪಿನಂಗಡಿ ಉಪ ತಹಶೀಲ್ದಾರ್ ಚೆನ್ನಪ್ಪ ಗೌಡ, ಪಿಡಿಒ ವಿಲ್ಪ್ರೆಡ್ ಲಾರೆನ್ಸ್ ರಾಡ್ರಿಗಸ್, ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ರಾಜೇಶ್ ಒಳಗೊಂಡ ಅಧಿಕಾರಿಗಳ ತಂಡ ದಾಳಿ ನಡೆಸಿ ಆಹಾರ ಖಾದ್ಯಗಳ ತಪಾಸಣೆ ನಡೆಸಿತು. ಮಾಂಸ ಸಂಗ್ರಹಣಾ ಫ್ರಿಡ್ಜ್‌ಗಳನ್ನು ಪರಿಶೀಲಿಸಿತು. ಕೆಲವೊಂದು ಖಾದ್ಯಗಳ ಮಾದರಿಗಳನ್ನು ಪರೀಕ್ಷಾ ಕೇಂದ್ರಕ್ಕೆ ಕಳುಹಿಸಲು ಸಂಗ್ರಹಿಸಲಾಯಿತು.

ಹೋಟೆಲ್ ಉದ್ಯಮಕ್ಕೆ ಸಂಬಂಧಿಸಿ ಗ್ರಾಮ ಪಂಚಾಯಿತಿ ಪರವಾನಗಿ, ಆಹಾರ ವಿಭಾಗ ಮತ್ತು ಆರೋಗ್ಯ ಇಲಾಖಾ ನಿರಾಪೇಕ್ಷಣಾ ಪತ್ರ ಹೊಂದದೇ ಇರುವುದು ಕಂಡು ಬಂದಾಗ ತಹಶೀಲ್ದಾರ್ ಹೋಟೆಲ್ ಮುಚ್ಚಿಸಲು ನಿರ್ದೇಶನ ನೀಡಿದರು. ಅದರಂತೆ ಅಧಿಕಾರಿಗಳು ಬೀಗ ಹಾಕಿದರು.

ಹೋಟೆಲ್‌ಗಳಿಗೆ ದಾಳಿ, ತಪಾಸಣೆ

ಬದಿಯಡ್ಕ: ಕೇರಳ ರಾಜ್ಯದ ಆರೋಗ್ಯ ಇಲಾಖೆಯ ಆದೇಶದಂತೆ ಬದಿಯಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಹೋಟೆಲ್, ಬೇಕರಿ, ಕೂಲ್‌ಬಾರ್ ಹಾಗೂ ಮೀನಿನ ಅಂಗಡಿಗಳಿಗೆ ಆಹಾರ ಇಲಾಖೆಯ ಅಧಿಕಾರಿಗಳು ಗುರುವಾರ ದಾಳಿ ನಡೆಸಿ, ತಪಾಸಣೆ ನಡೆಸಿದರು.

ಆರೋಗ್ಯ ಕಾರ್ಡ್‌, ಸ್ವಚ್ಛತೆ ಹಾಗೂ ಪರವಾನಗಿ ಇಲ್ಲದ ಹೋಟೆಲ್‌ಗಳಿಗೆ ಎಚ್ಚರಿಕೆಯ ಪತ್ರ ನೀಡಲಾಯಿತು. ಬದಿಯಡ್ಕ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಸಿ.ರಾಜೇಂದ್ರನ್ ನೇತೃತ್ವ ವಹಿಸಿದ್ದರು. ಆರೋಗ್ಯ ಇಲಾಖೆಯ ಅಧಿಕಾರಿಗಳಾದ ಎಂ.ಜೆ. ಸಾಲಿ, ವಿ.ಕೆ. ಬಾಬು, ಕೆ.ಎಸ್‌. ರಾಜೇಶ್‌, ಕೆ.ಕೆ. ಶಾಕಿರ್‌ ತಪಾಸಣೆ ನಡೆಸಿದರು.

ಪೆರ್ಲದಲ್ಲೂ ಗುರುವಾರ ಪೆರ್ಲ ಆರೋಗ್ಯ ಅಧಿಕಾರಿ ವಿ.ಸಿ. ಗಿರೀಶ್‌ ನೇತೃತ್ವದಲ್ಲಿ ಆಹಾರ ವಸ್ತುಗಳ ಮಾರಾಟ ಕೇಂದ್ರಗಳನ್ನು ತಪಾಸಣೆ ನಡೆಸಲಾಗಿದೆ.

ಈ ಸಂದರ್ಭದಲ್ಲಿ ದೊರೆತ ಹಳಸಿದ ಅನ್ನ, ಕರಟಿದ ಎಣ್ಣೆಯನ್ನು ನಾಶ ಮಾಡಲಾಯಿತು. ಪೆರ್ಲ ತಪಾಸಣಾ ಕೇಂದ್ರದ ಬಳಿಯಿಂದ ನಿಷೇಧಿತ ಪಾನ್ಮಸಾಲ ಪೊಟ್ಟಣಗಳನ್ನು ವಶ ಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT